ಬೆಳ್ಳಂಬೆಳಗ್ಗೆ ಬಾರ್‌ ಓಪನ್ ಮಾಡಲು ಬಂದವರಿಗೆ ಬಾಗಿಲು ತೆಗಿಯಲು ಬಿಡದೆ ರೊಚ್ಚಿಗೆದ್ದ ನಾರಿಯರು ಬಾರ್‌ ಮಾಲೀಕರಿಗೆ ಪೊರಕೆ ಸೇವೆ ಮಾಡಲು ಮುಂದಾದ ಘಟನೆ ಪೀಣ್ಯ ದಾಸರಹಳ್ಳಿ ವ್ಯಾಪ್ತಿಯ ದೊಡ್ಡಬಿದರಕಲ್ಲು ವಾರ್ಡ್‌ನಲ್ಲಿ ಗುರುವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ

ಬೆಳ್ಳಂಬೆಳಗ್ಗೆ ಬಾರ್‌ ಓಪನ್ ಮಾಡಲು ಬಂದವರಿಗೆ ಬಾಗಿಲು ತೆಗಿಯಲು ಬಿಡದೆ ರೊಚ್ಚಿಗೆದ್ದ ನಾರಿಯರು ಬಾರ್‌ ಮಾಲೀಕರಿಗೆ ಪೊರಕೆ ಸೇವೆ ಮಾಡಲು ಮುಂದಾದ ಘಟನೆ ಪೀಣ್ಯ ದಾಸರಹಳ್ಳಿ ವ್ಯಾಪ್ತಿಯ ದೊಡ್ಡಬಿದರಕಲ್ಲು ವಾರ್ಡ್‌ನಲ್ಲಿ ಗುರುವಾರ ನಡೆದಿದೆ.ದೊಡ್ಡಬಿದರಕಲ್ಲು ವಾರ್ಡ್‌ನ ತಿಪ್ಪೇನಹಳ್ಳಿ ಮುಖ್ಯರಸ್ತೆಯ ಕಾಟಮರಾಯನಗುಡಿ ಸಮೀಪದ ಬೃಂದಾವನನಗರ ಫೇಸ್-2 ಬಡಾವಣೆಯ ಜನವಸತಿ ಪ್ರದೇಶದಲ್ಲಿ ಈ ಹಿಂದೆ ಬಾರ್ ಓಪನ್ ಮಾಡುತ್ತಿರುವುದನ್ನು ವಿರೋಧಿಸಿ ಹಲವಾರು ಭಾರಿ ಪ್ರತಿಭಟನೆ ಮಾಡಿ ತಡೆಯಲಾಗಿತ್ತು. ಆದರೂ ಗುರುವಾರ ಬೆಳ್ಳಂಬೆಳಿಗ್ಗೆ ಬಾರ್ ಓಪನ್ ಮಾಡಲು ಬಂದಿದ್ದ ಮಾಲೀಕರನ್ನು ಸ್ಥಳದಿಂದ ಜನರು ಓಡಿಸಿದ್ದಾರೆ. ಶಾಮಿಯಾನ ಹಾಕಿಕೊಂಡು ಗಾಂಧಿ ಹಾಗೂ ಅಂಬೇಡ್ಕರ್ ಪೋಟೋ ಇಟ್ಟು ಪೊರಕೆ ಸಮೇತ ನೂರಾರು ಮಹಿಳೆಯರು ಪ್ರತಿಭಟನೆಗೆ ಕುಳಿತುಕೊಂಡಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಠಿಯಾಗಿತ್ತು. ಪೋಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದರು.ಈ ವೇಳೆ ಸ್ಥಳೀಯ ನಿವಾಸಿ ಮಂಜುಳಾ ಮಾತನಾಡಿ, ಪಿಜಿ ಅಂಥ ಸುಳ್ಳು ಹೇಳಿ ಬಾರ್ ಓಪನ್‌ ಮಾಡಲು ಮುಂದಾಗಿದ್ದ ಮಾಲೀಕರಿಗೆ ಈಗ ಪೊರಕೆ ಸೇವೆ ಮಾಡುವ ಮೂಲಕ ಬಿಸಿ ಮುಟ್ಟಿಸಿದ್ದೇವೆ. ಬಾರ್ ಶಾಶ್ವತವಾಗಿ ಮುಚ್ಚುವವರೆಗೂ ಪ್ರತಿಭಟನೆ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸ್ಥಳೀಯ ನಿವಾಸಿ ಚಂದ್ರಿಕಾ ಮಾತನಾಡಿ, ಇಲ್ಲಿ ಬಾರ್ ಓಪನ್ ಮಾಡುವುದರಿಂದ ನಮ್ಮ ಮನೆಯ ಹೆಣ್ಣು ಮಕ್ಕಳು ರಸ್ತೆಯಲ್ಲಿ ಓಡಾಡಲು ತೊಂದರೆಯಾಗುತ್ತದೆ. ಈ ಬಗ್ಗೆ ಬಾರ್ ಹಾಗೂ ಕಟ್ಟಡ ಮಾಲೀಕರಿಗೆ ತಿಳಿಸಿದರೂ ಮೊಂಡುತನ ಪ್ರದರ್ಶಿಸುತ್ತಿದ್ದಾರೆ. ಲಂಚಕ್ಕೆ ಕೈಚಾಚಿ ಕಾನೂನುಬಾಹಿರವಾಗಿ ನಡೆದುಕೊಳ್ಳುತ್ತಿರುವ ಅಬಕಾರಿ ಅಧಿಕಾರಿಗಳು ತಮ್ಮ ಮನೆಯಲ್ಲೂ ಹೆಣ್ಣು ಮಕ್ಕಳಿದ್ದಾರೆ ಎನ್ನುವುದನ್ನು ಮರೆಯಬಾರದು ಎಂದು ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದರು.ಈ ಸಂದರ್ಭದಲ್ಲಿ ಬಡಾವಣೆಯ ನಿವಾಸಿಗಳಾದ ಟ್ರಾವೆಲ್ಸ್ ಮಂಜುನಾಥ್, ವಾಸು, ವಿಜಯ್ ಕುಮಾರ್, ಮಹೇಶ್ ಕುಮಾರ್, ಶ್ರೀನಿವಾಸ್ ಮೂರ್ತಿ, ನಟರಾಜ್, ವೆಂಕಟಾಚಲ, ಗಜೇಂದ್ರ, ಚಂದ್ರಣ್ಣ, ಕುಮಾರ್, ಜಗದೀಶ್, ಸುರೇಶ್, ಬಿ ಮಂಜುನಾಥ್, ಲೋಕೇಶ್, ದಿಗ್ವಿಜಯ್ ಸಿಂಗ್, ಟಿ.ಎನ್ ನಾಗರಾಜು, ಸೇರಿದಂತೆ ತಿಪ್ಪೇನಹಳ್ಳಿಯ ಬಡಾವಣೆಯ ನಿವಾಸಿಗಳು, ಮಹಿಳೆಯರು, ಸ್ಥಳೀಯರು ಉಪಸ್ಥಿತರಿದ್ದು ಅಧಿಕಾರಿಗಳು, ಕಟ್ಟಡದ ಮಾಲೀಕರು ಹಾಗೂ ಬಾರ್ ಮಾಲೀಕರ ವಿರುದ್ಧ ಪ್ರತಿಭಟಿಸಿದರು.

ವಿಶ್ವನಾಥ್ ಎಂಬ ಕಟ್ಟಡದ ಮಾಲೀಕ ಪಿಜಿ ಮಾಡ್ತೀವಿ ಅಂಥ ಸುಳ್ಳು ಹೇಳಿ ಬೋರ್ಡ್ ಹಾಕಿಕೊಂಡು ಕದ್ದು ಮುಚ್ಚಿ ಒಳಗೊಳಗೆ ಬಾರ್ ಓಪನ್ ಮಾಡಿದ್ದಾರೆ. ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರಧಾನಿವರೆಗೂ ಪತ್ರ ಬರೆದು ದೂರು ನೀಡಿದರೂ ಅಬಕಾರಿ ಅಧಿಕಾರಿಗಳು ಅದ್ಯಾವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಬಾರ್‌ ಲೈಸನ್ಸ್ ನೀಡಿದ್ದಾರೆ. ಮತ್ತೆ ಏನಾದರೂ ಬಾರ್ ಓಪನ್ ಮಾಡಿದರೆ ನಾವು ಕಟ್ಟಡದ ಪೈಪಿಗೆ ನೇಣು ಹಾಕಿಕೊಂಡು ಸಾಯುತ್ತೇವೆ.

- ನಟರಾಜು, ತಿಪ್ಪೇನಹಳ್ಳಿ ನಿವಾಸಿ