ಹೊಸ ವರ್ಷದ ಸಂಭ್ರಮಾಚರಣೆ ನಡೆದ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಕಮರ್ಷಿಲ್‌ ಸ್ಟ್ರೀಟ್‌ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಮದ್ಯದ ಬಾಟಲ್‌, ಚಪ್ಪಲಿ, ಶೂ, ಬಟ್ಟೆ ಸೇರಿದಂತೆ ಬರೋಬ್ಬರಿ ಒಂಬತ್ತು ಟನ್‌ನಷ್ಟು ಕಸ ರಾಶಿ ತೆರವುಗೊಳಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೊಸ ವರ್ಷದ ಸಂಭ್ರಮಾಚರಣೆ ನಡೆದ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಕಮರ್ಷಿಲ್‌ ಸ್ಟ್ರೀಟ್‌ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಮದ್ಯದ ಬಾಟಲ್‌, ಚಪ್ಪಲಿ, ಶೂ, ಬಟ್ಟೆ ಸೇರಿದಂತೆ ಬರೋಬ್ಬರಿ ಒಂಬತ್ತು ಟನ್‌ನಷ್ಟು ಕಸ ರಾಶಿ ತೆರವುಗೊಳಿಸಲಾಗಿದೆ.

ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಚರ್ಚ್‌ ಸ್ಟ್ರೀಟ್‌, ಸೆಂಟ್‌ಮಾರ್ಕ್‌ ರಸ್ತೆ, ಇಂದಿರಾನಗರ, ರೆಸಿಡೆನ್ಸಿ ರಸ್ತೆಗಳಲ್ಲಿ ಹೊಸ ವರ್ಷದ ಆಚರಣೆ ಭರ್ಜರಿಯಾಗಿ ನಡೆದಿದ್ದು,ಮಧ್ಯರಾತ್ರಿ ಸುಮಾರು ಮೂರು ಗಂಟೆಯ ವೇಳೆಗೆ ವರ್ಷಾಚರಣೆಗೆ ಆಗಮಿಸಿದ್ದವರು ತೆರಳಿದರು. ನಂತರ ಕೇಂದ್ರ ನಗರ ಪಾಲಿಕೆಯ ಪೌರಕಾರ್ಮಿಕರು, ಅಧಿಕಾರಿ, ಸಿಬ್ಬಂದಿ ಸ್ವಚ್ಛತಾ ಕಾರ್ಯವನ್ನು ಆರಂಭಿಸಿದರು.

ಬೆಳಗ್ಗೆ 8 ಗಂಟೆಯ ವೇಳೆ ಈ ಎಲ್ಲ ರಸ್ತೆಗಳಲ್ಲಿ ಬಿದ್ದಿದ್ದ ಮದ್ಯದ ಬಾಟಲ್‌, ಚಪ್ಪಲ್‌, ಶೂ, ಬಟ್ಟೆ, ಊಟ, ತಿಂಡಿ ತಿನಿಸುಗಳ ಪ್ಲೇಟ್‌, ಪ್ಲಾಸ್ಟಿಕ್‌ ತ್ಯಾಜ್ಯ, ಸಿಗರೇಟ್‌ ತುಂಡುಗಳನ್ನು ಸ್ವಚ್ಛಗೊಳಿಸಲಾಗಿದೆ. ಸುಮಾರು ಒಂಬತ್ತು ಟನ್‌ ನಷ್ಟು ಕಸ ಶೇಖರಣೆಯಾಗಿದ್ದು, ಆಟೋ, ಕಾಂಪ್ಯಾಕ್ಟರ್‌ ಮೂಲಕ ಎಲ್ಲವನ್ನೂ ಸಾಗಿಸಲಾಗಿದೆ. ಬಳಿಕ ರಸ್ತೆ, ಪಾದಚಾರಿ ಮಾರ್ಗವನ್ನು ಸ್ವಚ್ಛವಾಗಿ ನೀರು ಹಾಕಿ ತೊಳೆದು ಶುಭ್ರಗೊಳಿಸಲಾಗಿದೆ.

ಸ್ವಚ್ಛತಾ ಕಾರ್ಯಕ್ಕೆ 110 ಪೌರ ಕಾರ್ಮಿಕರು‌, 3 ಜನ ಕಿರಿಯ ಆರೋಗ್ಯ ಪರಿವೀಕ್ಷಕರು, 10 ಆಟೋ ಟಿಪ್ಪರ್‌, 3 ಪ್ರೆಸರ್‌ ಜೆಟ್‌ ವಾಟರ್‌ ಕ್ಲಿನಿಂಗ್‌ ಯಂತ್ರಗಳು ಬಳಕೆ ಮಾಡಲಾಗಿದೆ ಎಂದು ಕೇಂದ್ರ ನಗರ ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೋರಮಂಗಲದಲ್ಲಿ 250 ಕೆ.ಜಿ ಮದ್ಯದ ಬಾಟಲಿ:

ಕೋರಮಂಗಲದ ಸುಖ ಸಾಗರ ಹೋಟೆಲಿಂದ ಎಂಪೈರ್ ಹೋಟೆಲ್‌ವರೆಗೆ (2 ಕಿ.ಮೀ) ಭಾರೀ ಸಂಖ್ಯೆಯ ಯುವಕ-ಯುವತಿಯರು ಸೇರಿದ್ದು, ಈ ವೇಳೆ ಸೃಷ್ಟಿಯಾಗಿದ್ದ 250 ಕೆ.ಜಿಯಷ್ಟು ಮದ್ಯದ ಬಾಟಲಿ, ನೀರಿನ ಬಾಟಲಿ, 200 ಕೆ.ಜಿ ಹಸಿ ತ್ಯಾಜ್ಯ ಒಳಗೊಂಡ ಸುಮಾರು 1 ಟನ್‌ ಕಸದ ರಾಶಿ ತೆರವುಗೊಳಿಸಲಾಗಿದೆ ಎಂದು ದಕ್ಷಿಣ ನಗರ ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.