ನಾಳೆ ಗರ್ಭಕೊರಳ ಕ್ಯಾನ್ಸರ್ ಕುರಿತು ಕಾರ್ಯಾಗಾರ: ಡಾ.ಬಿ.ಕೆ.ಸೌಮ್ಯಮಣಿ, ಡಾ. ಭಾರತಿ ರಾಜಶೇಖರ್

| Published : May 30 2024, 12:48 AM IST

ನಾಳೆ ಗರ್ಭಕೊರಳ ಕ್ಯಾನ್ಸರ್ ಕುರಿತು ಕಾರ್ಯಾಗಾರ: ಡಾ.ಬಿ.ಕೆ.ಸೌಮ್ಯಮಣಿ, ಡಾ. ಭಾರತಿ ರಾಜಶೇಖರ್
Share this Article
  • FB
  • TW
  • Linkdin
  • Email

ಸಾರಾಂಶ

ಗರ್ಭಕೊರಳ ಕ್ಯಾನ್ಸರ್ ಮತ್ತು ಎಚ್‌ಪಿವಿ ಲಸಿಕೆಯ ಬಗ್ಗೆ ಅರಿವು ಮೂಡಿಸಲು ಸಾರ್ವಜನಿಕ ಜಾಥಾ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಕಾರ್ಯಾಗಾರವನ್ನು ಮೇ ೩೧ ರಂದು ಹಮ್ಮಿಕೊಳ್ಳಲಾಗಿದೆ ಎಂದು ಅಡೋಲಸೆಂಟ್‌ ಹೆಲ್ತ್ ಕಮಿಟಿ ಛೇರ್ ಪರ್‍ಸನ್ ಡಾ.ಬಿ.ಕೆ.ಸೌಮ್ಯಮಣಿ ಹಾಗೂ ಕರ್ನಾಟಕ ಸ್ತ್ರೀ ರೋಗ ಪ್ರಸೂತಿ ಸಂಘದ ಅಧ್ಯಕ್ಷೆ ಡಾ.ಭಾರತಿ ರಾಜಶೇಖರ್ ತಿಳಿಸಿದರು. ಹಾಸನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ಎಚ್‌ಪಿವಿ ಲಸಿಕೆಯ ಬಗ್ಗೆ ಅರಿವು

ಕನ್ನಡಪ್ರಭ ವಾರ್ತೆ ಹಾಸನ

ಗರ್ಭಕೊರಳ ಕ್ಯಾನ್ಸರ್ ಮತ್ತು ಎಚ್‌ಪಿವಿ ಲಸಿಕೆಯ ಬಗ್ಗೆ ಅರಿವು ಮೂಡಿಸಲು ಸಾರ್ವಜನಿಕ ಜಾಥಾ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಕಾರ್ಯಾಗಾರವನ್ನು ಮೇ ೩೧ ರಂದು ಹಮ್ಮಿಕೊಳ್ಳಲಾಗಿದೆ ಎಂದು ಅಡೋಲಸೆಂಟ್‌ ಹೆಲ್ತ್ ಕಮಿಟಿ ಛೇರ್ ಪರ್‍ಸನ್ ಡಾ.ಬಿ.ಕೆ.ಸೌಮ್ಯಮಣಿ ಹಾಗೂ ಕರ್ನಾಟಕ ಸ್ತ್ರೀ ರೋಗ ಪ್ರಸೂತಿ ಸಂಘದ ಅಧ್ಯಕ್ಷೆ ಡಾ.ಭಾರತಿ ರಾಜಶೇಖರ್ ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ‘ಗರ್ಭಕೊರಳ ಕ್ಯಾನ್ಸರ್ ಮಹಿಳೆಯರಲ್ಲಿ ಕಂಡು ಬರುವ ಪ್ರಮುಖ ಕ್ಯಾನ್ಸರ್ ಆಗಿದ್ದು, ಭಾರತದಲ್ಲಿ ಪ್ರತಿ ೭ ನಿಮಿಷಕ್ಕೆ ಒಬ್ಬ ಮಹಿಳೆಯಂತೆ ಈ ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಿದ್ದಾರೆ. ಪ್ರಾರಂಭಿಕ ಹಂತದಲ್ಲಿ ಪತ್ತೆಯಾದರೆ ಗುಣಪಡಿಸಲು ಸಾಧ್ಯತೆಗಳಿದ್ದರೂ ಈ ಕ್ಯಾನ್ಸರ್ ಬರದಂತೆ ಎಚ್‌ಪಿವಿ ಲಸಿಕೆ ಹಾಕಿಸಿಕೊಳ್ಳುವುದು ಹೆಚ್ಚು ಸುರಕ್ಷಿತ ದಾರಿಯಾಗಿದೆ. ೯ ರಿಂದ ೪೬ ವರ್ಷದೊಳಗಿನ ಮಹಿಳೆಯರು ಲಸಿಕೆ ಪಡೆಯಬಹುದಾಗಿದ್ದು, ಅದರಲ್ಲೂ ೧೫ ವರ್ಷ ವಯಸ್ಸಿನೊಳಗಿನ ಹೆಣ್ಣುಮಕ್ಕಳಲ್ಲಿ ಈ ಲಸಿಕೆ ಹೆಚ್ಚು ಪರಿಣಾಮಕಾರಿಯಾಗಿದೆ’ ಎಂದು ಹೇಳಿದರು.

‘ದೇಶದಲ್ಲಿ ಪ್ರತಿ ನಿಮಿಷಕ್ಕೆ ಒಬ್ಬ ಮಹಿಳೆ ಗರ್ಭಕೊರಳ ಕ್ಯಾನ್ಸರ್‌ನಿಂದ ಸಾಯುತ್ತಾರೆ. ೧.೨೫ ಲಕ್ಷ ಮಹಿಳೆಯರಿಗೆ ಪ್ರತಿವರ್ಷ ತಗುಲುತ್ತಿದೆ. ಎಚ್‌ಪಿವಿ ವ್ಯಾಕ್ಸಿನ್ ಹಾಕಿಸಬೇಕು. ೯ ರಿಂದ ೧೪ ವರ್ಷದ ಒಳಗಿನ ಮಕ್ಕಳಿಗೆ ಹಾಕಿಸಿದರೆ ಕಾಯಿಲೆ ತಡೆಗಟ್ಟಬಹುದು. ಗರ್ಭಕೊರಳ ಕ್ಯಾನ್ಸರ್ ಮುಕ್ತ ಜಿಲ್ಲೆ ನಿರ್ಮಾಣಕ್ಕೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಪಾತ್ರ ವಹಿಸುವ ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರೆ ಈ ಕ್ಯಾನ್ಸರ್ ಅನ್ನು ತಡೆಗಟ್ಟಲು ಹೆಚ್ಚು ಸಹಾಯಕಾರಿಯಾಗುತ್ತದೆ’ ಎಂದು ಸಲಹೆ ನೀಡಿದರು.

‘ಬಹಳಷ್ಟು ದೇಶಗಳಲ್ಲಿ ಗರ್ಭಕೊರಳ ಕ್ಯಾನ್ಸರ್ ನಿರ್ಮೂಲನೆ ಮಾಡಲಾಗಿದೆ. ವ್ಯಾಕ್ಸಿನ್ ಮೂಲಕ ನಿರ್ಮೂಲನೆ ಮಾಡಬಹುದು. ಈ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಿಸಲು ಹಲವು ಸಂಸ್ಥೆಗಳ ಸಹಯೋಗದಲ್ಲಿ ಮೇ ೩೧ ರಂದು ಗರ್ಭಕೊರಳ ಕ್ಯಾನ್ಸರ್ ಮತ್ತು ಎಚ್‌ಪಿವಿ ಲಸಿಕೆಯ ಬಗ್ಗೆ ಅರಿವು ಮೂಡಿಸಲು ಸಾರ್ವಜನಿಕ ಜಾಥಾವನ್ನು ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಬೆಳಿಗ್ಗೆ ೯.೩೦ಕ್ಕೆ ಹೊರಡಲಿದೆ. ಜಿಲ್ಲಾಧಿಕಾರಿ ಸಿ.ಸತ್ಯಭಾಮ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ನರ್ಸಿಂಗ್ ವಿದ್ಯಾರ್ಥಿಗಳಿಗೆ ಕಾರ್ಯಾಗಾರವನ್ನು ಹಿಮ್ಸ್ ವೈದ್ಯಕೀಯ ಮತ್ತು ವಿಜ್ಞಾನಗಳ ಸಂಸ್ಥೆಯ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ’ ಎಂದು ಹೇಳಿದರು.

ರಾಜ್ಯ ಐಎಂಎ ಉಪಾಧ್ಯಕ್ಷೆ ಡಾ. ಸಾವಿತ್ರಿ ಮಾತನಾಡಿ, ಯಾವುದೇ ಖಾಯಿಲೆ ಆಗಿರಲಿ ಮಹಿಳೆಯರು ನಿರ್ಲಕ್ಷಿಸದೇ ಕೂಡಲೇ ಆಸ್ಪತ್ರೆಗೆ ತೆರಳಿ ವೈದ್ಯರಿಂದ ಸಲಹೆ ಚಿಕಿತ್ಸೆ ಪಡೆಯುವ ಮೂಲಕ ಉತ್ತಮ ಜೀವನ ಸಾಗಿಸುವಂತೆ ಸಲಹೆ ನೀಡಿದರು.

ಹಾಸನ ಲಯನ್ಸ್ ಕ್ಲಬ್ ರಿಜನಲ್ ಛೇರ್ ಪರ್ಸನ್ ಡಾ.ವಿಶಾಲಾಕ್ಷಿ, ಡಾ.ಸಾವಿತ್ರಿ, ಡಾ.ದಿನೇಶ್, ಡಾ.ಪಾಲಾಕ್ಷ ಇದ್ದರು.