ಬಳ್ಳಾರಿಯಲ್ಲಿ ಗಣಿ ಗುತ್ತಿಗೆಗಳ ಸಮೀಕ್ಷೆ ಆರಂಭ

| Published : May 30 2024, 12:48 AM IST

ಸಾರಾಂಶ

ಸಂಡೂರಿನ ತುಮಟಿ, ವಿಠಲಾಪುರ, ಪಕ್ಕದ ಆಂಧ್ರ ಪ್ರದೇಶದ ಮಲಪನಗುಡಿಯಲ್ಲಿ ಸಮೀಪದ ಮೆಹಬೂಬ್‌ ಟ್ರಾನ್ಸ್‌ಪೋರ್ಟ್‌ ಕಂಪನಿಯ ಗಣಿಯಿಂದ ಈ ಸಮೀಕ್ಷೆ ಪ್ರಾರಂಭವಾಗಿದೆ.

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿನ ಕರ್ನಾಟಕ ಮತ್ತು ಆಂಧ್ರಪ್ರದೇಶ ನಡುವಿನ ಅಂತರ್ ರಾಜ್ಯ ಗಡಿಯಲ್ಲಿನ ಏಳು ಗಣಿ ಗುತ್ತಿಗೆಗಳ ಜಂಟಿ ಸಮೀಕ್ಷೆಯ ಕಾರ್ಯ ಪ್ರಾರಂಭವಾಗಿದೆ.

ಜಿಲ್ಲೆಯ ಸಂಡೂರಿನ ತುಮಟಿ, ವಿಠಲಾಪುರ, ಪಕ್ಕದ ಆಂಧ್ರ ಪ್ರದೇಶದ ಮಲಪನಗುಡಿಯಲ್ಲಿ ಸಮೀಪದ ಮೆಹಬೂಬ್‌ ಟ್ರಾನ್ಸ್‌ಪೋರ್ಟ್‌ ಕಂಪನಿಯ ಗಣಿಯಿಂದ ಈ ಸಮೀಕ್ಷೆ ಪ್ರಾರಂಭವಾಗಿದೆ. ಹಿಂದ್‌ ಟ್ರೇಡರ್ಸ್‌ ಮತ್ತು ನಾರಾಯಣ ರೆಡ್ಡಿ ಗಣಿ ಗುತ್ತಿಗೆದಾರರ ಪರ ಪ್ರತಿನಿಧಿಗಳು, ತಹಶೀಲ್ದಾರ್‌ ಅನಿಲಕುಮಾರ್‌ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿನ ಸಮೀಕ್ಷೆಗಳ ಕಾರ್ಯದಲ್ಲಿ ಗಣಿಗಳ ಗಡಿ ಬಿಂದು, ಜಿಪಿಎಸ್‌ ರೀಡಿಂಗ್‌ನ್ನು ಅಧಿಕಾರಿಗಳು ಪಡೆದಿದ್ದಾರೆ. ಅವರು ಅದನ್ನು ಕಂದಾಯ ಇಲಾಖೆ ನಕ್ಷೆಯೊಂದಿಗೆ ಹೋಲಿಕೆ ಮಾಡಿ ಪರಿಶೀಲಿಸಲಿದ್ದಾರೆ. ಸಮೀಕ್ಷೆಯ ಅಂತಿಮ ವರದಿಯನ್ನು ಕೇಂದ್ರದ ಉನ್ನತಾಧಿಕಾರಿ ಸಮಿತಿಗೆ ಸಲ್ಲಿಕೆ ಮಾಡಲಿದ್ದಾರೆ. ಈದರ ಆಧಾರದಲ್ಲಿ ಗಣಿಗಳ ವರ್ಗೀಕರಣ ನಡೆಯಲಿದೆ ಎಂದು ತಿಳಿದುಬಂದಿದೆ.

ಈ ಏಳು ಗಣಿ ಕಂಪನಿಗಳು 2009ರಲ್ಲೇ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ. ಅಲ್ಲಿನ ರಸ್ತೆಗಳು ಮುಚ್ಚಿ ಹೋಗಿವೆ. ಬಹುತೇಕ ಗುಡ್ಡಗಾಡು ಪ್ರದೇಶದಲ್ಲಿರುವ ಈ ಗಣಿಗಳ ಬಳಿ ತೆರಳಲು ಸಮೀಕ್ಷೆ ತಂಡದ ಸದಸ್ಯರು ಬಿರು ಬಿಸಿಲಿನಲ್ಲಿ ಪರಿತಪಿಸುವಂತಾಯಿತು. ಕಿಲೋಮೀಟರ್‌ ದೂರದಲ್ಲೇ ವಾಹನಗಳನ್ನು ನಿಲ್ಲಿಸಿ, ಕಾಲ್ನಡಿಗೆಯಲ್ಲೇ ತೆರಳಿದ ಪ್ರಸಂಗವೂ ನಡೆಯಿತು.

ಮಂಗಳೂರು ಸಮೀಪದ ಸುರತ್ಕಲ್‌ನ ಎನ್‌ಐಟಿಕೆ ಸಂಸ್ಥೆ ಸಮೀಕ್ಷೆ ನಡೆಸುತ್ತಿದೆ. ಎರಡೂ ರಾಜ್ಯಗಳ ಅರಣ್ಯ, ಕಂದಾಯ, ಭೂ ದಾಖಲೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತು ತಾಂತ್ರಿಕ ತಂಡಗಳ ಸದಸ್ಯರು ಈ ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.