ಬಿಸಿಯೂಟದ ಬೇಳೆಯಲ್ಲಿ ವಿಪರೀತ ಹುಳು ಇದ್ದು, ಅವುಗಳು ತಿನ್ನುವುದಕ್ಕೆ ಯೋಗ್ಯವಾಗಿಲ್ಲ. ಅಂಥ ಬೇಳೆಯನ್ನು ಅಡುಗೆ ಮಾಡುವುದಕ್ಕೆ ಬಳಕೆ ಮಾಡುತ್ತಿರುವ ಕುರಿತು ದೂರು ಬಂದಿರುವ ಹಿನ್ನೆಲೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತ
ಕೊಪ್ಪಳ: ತಾಲೂಕಿನ ಬಿಸರಳ್ಳಿ ಗ್ರಾಮದ ಅನುದಾನಿತ ನೃಪತುಂಗ ಪ್ರೌಢ ಶಾಲೆಯಲ್ಲಿ ಬಿಸಿಯೂಟದ ಬೇಳೆಯಲ್ಲಿ ಹುಳು ಇರುವುದು ಪತ್ತೆಯಾಗಿರುವ ಹಿನ್ನೆಲೆ ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ ಭೇಟಿ ನೀಡಿ ಪರಿಶೀಲಿಸಿದರು.
ಕೊಪ್ಪಳ ತಾಲೂಕಿನ ಬಿಸರಳ್ಳಿ ಗ್ರಾಮ ಹಾಗೂ ಹೊಸಲಿಂಗಾಪುರ ಗ್ರಾಮದ ಶಾಲೆಗಳಲ್ಲಿ ಬಿಸಿಯೂಟದ ಬೇಳೆಯಲ್ಲಿ ಹುಳು ಇರುವುದು ಪತ್ತೆಯಾಗಿದೆ. ಅದೇ ಬೆಳೆಯನ್ನು ಅಡುಗೆಗೆ ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ಈ ಕುರಿತು ಕೆಲ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬಿಸಿಯೂಟದ ಬೇಳೆಯಲ್ಲಿ ವಿಪರೀತ ಹುಳು ಇದ್ದು, ಅವುಗಳು ತಿನ್ನುವುದಕ್ಕೆ ಯೋಗ್ಯವಾಗಿಲ್ಲ. ಅಂಥ ಬೇಳೆಯನ್ನು ಅಡುಗೆ ಮಾಡುವುದಕ್ಕೆ ಬಳಕೆ ಮಾಡುತ್ತಿರುವ ಕುರಿತು ದೂರು ಬಂದಿರುವ ಹಿನ್ನೆಲೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬೇಳೆಯಲ್ಲಿ ಹುಳು ಇರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಇಂಥ ಬಿಸಿಯೂಟ ಮಕ್ಕಳು ತಿನ್ನುವುದು ಎಷ್ಟು ಸರಿ ಎನ್ನುವ ಆಕ್ರೋಶವೂ ಕೇಳಿ ಬಂದಿದೆ.
ಡಿಸಿ ಭೇಟಿ: ಎರಡು ಪ್ರಕರಣಗಳಲ್ಲಿ ಬಿಸಿಯೂಟದ ಬೇಳೆಯಲ್ಲಿ ಹುಳು ಇರುವ ಕುರಿತು ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ ಕೊಪ್ಪಳ ಎಪಿಎಂಸಿಯಲ್ಲಿರುವ ಬೇಳೆ ಸಂಗ್ರಹಿಸಿದ ಗೋಡಾನ್ ಗೆ ಭೇಟಿ ನೀಡಿ ಪರಿಶೀಲಿಸಿದರು. ಆದರೆ, ಗೋಡಾನ್ ನಲ್ಲಿರುವ ಬೇಳೆಯಲ್ಲಿ ಯಾವುದೇ ಹುಳು ಪತ್ತೆಯಾಗಿಲ್ಲ ಎನ್ನುವುದು ಗೊತ್ತಾಗಿದೆ.ಹೀಗಾಗಿ ಬಿಸರಳ್ಳಿ ಗ್ರಾಮಕ್ಕೆ ಭೇಟಿ ನೀಡಿ ನೃಪತುಂಗ ಪ್ರೌಢ ಶಾಲೆಯಲ್ಲಿ ಬಿಸಿಯೂಟ ಪ್ರಾರಂಭವಾಗಿರುವ ವೇಳೆಗೆ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಭೇಟಿ ನೀಡಿ ಪರಿಶೀಲಿಸಿದರು.
ಬಿಸಿಯೂಟ ಪರಿಶೀಲಿಸಿದರಲ್ಲದೆ ಅಲ್ಲಿಯ ಅಡುಗೆ ತಯಾರಿಸುವ ಪರಿಕರ ಪರಿಶೀಲನೆ ನಡೆಸಿದರು.ಬೇಳೆ ಸೇರಿದಂತೆ ಧಾನ್ಯ ಹಿಂದಿನ ದಿನವೇ ತೊಳೆದು ಅವುಗಳನ್ನು ಬಿಸಿಲಿಗೆ ಒಣಗಲು ಹಾಕಿ ನಂತರ ಬಳಕೆ ಮಾಡುವಂತೆ ಸೂಚನೆ ನೀಡಿದರು.
ಬಿಸಿಯೂಟದ ಬೇಳೆಯಲ್ಲಿ ಹುಳು ಬಂದಿರುವ ಕುರಿತು ಪರಿಶೀಲನೆ ಮಾಡಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಗೋಡಾನ್ ನಲ್ಲಿ ಪರಿಶೀಲನೆ ಮಾಡಿದಾಗ ಬೇಳೆ ಸರಿಯಾಗಿಯೇ ಇರುವುದು ಗೊತ್ತಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ತಿಳಿಸಿದ್ದಾರೆ.