ಇಂದಿನ ಡಿಜಿಟಲ್ ಯುಗದಲ್ಲಿ ಶ್ರಮಕ್ಕಿಂತ ಕೌಶಲ್ಯಕ್ಕೆ ಹೆಚ್ಚಿನ ಬೇಡಿಕೆಯಿದ್ದು, ವಿದ್ಯಾರ್ಥಿಗಳು ಪದವಿಯ ಜತೆಗೆ ಕೌಶಲ್ಯವರ್ಧನೆಗೂ ಪ್ರಾಮುಖ್ಯತೆ ನೀಡಬೇಕು
ಕೊಪ್ಪಳ: 21ನೇ ಶತಮಾನ ಕೌಶಲ್ಯಾಧಾರಿತ ಯುಗವಾಗಿದ್ದರೂ ಕೂಡ ಭಾರತದಲ್ಲಿ ಇನ್ನೂ ಜ್ಞಾನಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ, ಇದರಿಂದ ನಮ್ಮ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆದರೂ ಸಹ ಉದ್ಯೋಗ ಮತ್ತು ಔದ್ಯಮಿಕ ಕ್ಷೇತ್ರದಲ್ಲಿ ನಿರೀಕ್ಷಿಸಿದಷ್ಟು ಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತಿಲ್ಲ ಎಂದು ಯಲಬುರ್ಗಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಶಂಕರಯ್ಯ ಅಭಿಪ್ರಾಯ ಪಟ್ಟರು.
ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಉಚ್ಛ ಶಿಕ್ಷಣ ಅಭಿಯಾನದ ಅಡಿಯಲ್ಲಿ ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉದ್ಯೋಗ ಭರವಸಾ ಕೋಶ ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶವು ಅಂತಿಮ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಉದ್ಯೋಗ ಕೌಶಲ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ.ವೈ.ಬಿ. ಅಂಗಡಿ ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ಶ್ರಮಕ್ಕಿಂತ ಕೌಶಲ್ಯಕ್ಕೆ ಹೆಚ್ಚಿನ ಬೇಡಿಕೆಯಿದ್ದು, ವಿದ್ಯಾರ್ಥಿಗಳು ಪದವಿಯ ಜತೆಗೆ ಕೌಶಲ್ಯವರ್ಧನೆಗೂ ಪ್ರಾಮುಖ್ಯತೆ ನೀಡಬೇಕು. ಈ ದಿಸೆಯಲ್ಲಿ ವಿದ್ಯಾರ್ಥಿಗಳಿಗೆ ನೆರವಾಗಲು ಮಹಾವಿದ್ಯಾಲಯವು ಹಲವಾರು ಕಾರ್ಯಕ್ರಮ ಆಯೋಜಿಸಲಿದೆ ಎಂದು ಹೇಳಿದರು.
ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪದವಿಯ ನಂತರ ಇರುವ ಅವಕಾಶಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಎರಡು ದಿನಗಳ ಉದ್ಯೋಗ ಕೌಶಲ್ಯ ಕಾರ್ಯಕ್ರಮ ಆಯೋಜಿಸಲಾಗಿದ್ದು, ನುರಿತ ತರಬೇತುದಾರರು ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶ ಪಡೆಯುವ ವಿಧಾನ ಮತ್ತು ಪ್ರಕ್ರಿಯೆಗಳ ಬಗ್ಗೆ ಎರಡು ದಿನಗಳ ಕಾಲ ಸಮಗ್ರ ಮಾಹಿತಿ ನೀಡಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಲೇಜಿನ ಉದ್ಯೋಗ ಭರವಸಾ ಕೋಶದ ಸಂಚಾಲಕ ಡಾ. ಎಸ್.ಬಾಲಾಜಿ, ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕ ಪ್ರೊ. ಪ್ರಕಾಶ್ ಗೌಡ ಎಸ್.ಯು, ಪಿಎಂ ಉಷಾ ಸಂಯೋಜಕ ಪ್ರೊ. ಸುಧಾ ಹೆಗಡೆ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಉಮೇಶ ಉಪಸ್ಥಿತರಿದ್ದರು.