ಹಿರೇಮನ್ನಾಪುರ: ಸಮಾಜ ಕಟ್ಟುವ ಶಕ್ತಿ ಕಾವ್ಯಕ್ಕಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಕವಿತೆ ಆಧರಿಸಿ ವಾಟ್ಸ್‌ಆ್ಯಪ್‌ ಕವಿಗಳಾಗುವ ಪ್ರವೃತ್ತಿ ಹೆಚ್ಚುತ್ತಿದೆ. ಕವಿತೆ ಬರೆಯುವುದು ಸುಲಭದ ಕೆಲಸವಲ್ಲ, ಭಾಷೆಯ ಆಳ, ಸಾಹಿತ್ಯದ ಪರಂಪರೆ ಮತ್ತು ಬದುಕಿನ ಅನುಭವಗಳ ಅಧ್ಯಯನದ ಮೂಲಕವೇ ಗಟ್ಟಿ ಕಾವ್ಯ ಹುಟ್ಟುತ್ತದೆ ಎಂದು ಸಾಹಿತಿ ಮಮ್ತಾಜ್ ಬೇಗಂ ಹೇಳಿದರು.

ಕುಷ್ಟಗಿ ತಾಲೂಕಿನ ಹಿರೇಮನ್ನಾಪುರ ಗ್ರಾಮದಲ್ಲಿ ನಡೆದ 14ನೇ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶಿವಯೋಗಿ ಶಂಕರಲಿಂಗ ಪ್ರಧಾನ ವೇದಿಕೆಯಲ್ಲಿ ನಡೆದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡ ಕಾವ್ಯಕ್ಕೆ ಸಾವಿರಾರು ವರ್ಷಗಳ ಶ್ರೀಮಂತ ಪರಂಪರೆ ಇದೆ. ಆ ಪರಂಪರೆ ಮುಂದುವರಿಸುವ ಜವಾಬ್ದಾರಿ ಇಂದಿನ ಕವಿಗಳ ಮೇಲಿದೆ. ಆದ್ದರಿಂದ ಕವಿಗಳು ಕೇವಲ ಭಾವೋದ್ವೇಗಕ್ಕೆ ಸೀಮಿತರಾಗದೆ, ಸಮಾಜದ ನೋವು-ನಲಿವು, ಮಾನವೀಯ ಮೌಲ್ಯ ಮತ್ತು ಬದುಕಿನ ಸತ್ಯ ಅರಿತು ಕಾವ್ಯ ರಚಿಸಬೇಕು ಎಂದು ಸಲಹೆ ನೀಡಿದರು.

ಕಾವ್ಯವು ಸಮಾಜಕ್ಕೆ ದಾರಿದೀಪವಾಗಬೇಕು. ಪ್ರಭುತ್ವ ಓಲೈಸುವ ಅಥವಾ ಕೇವಲ ವಿರೋಧಿಸುವ ಉದ್ದೇಶದಿಂದ ಕವಿತೆ ಬರೆಯುವುದಕ್ಕಿಂತ ಸಮಾಜಮುಖಿ ಪ್ರಶ್ನೆ ಎತ್ತಿ ಹಿಡಿಯುವ ಹಾಗೂ ಆತ್ಮಾವಲೋಕನಕ್ಕೆ ಪ್ರೇರೇಪಿಸುವ ಕಾವ್ಯವೇ ಸಾಹಿತ್ಯಕ್ಕೆ ಶಾಶ್ವತ ಮೌಲ್ಯ ತಂದುಕೊಡುತ್ತದೆ ಎಂದು ಹೇಳಿದರು.

ಆಶಯ ಭಾಷಣ ಮಾಡಿದ ಸಾಹಿತಿ ಅರುಣಾ ನರೇಂದ್ರ ಮಾತನಾಡಿ, ಕವಿತೆ ಇಲ್ಲದಿದ್ದರೆ ಜಗತ್ತೇ ಕುರುಡಾಗುತ್ತದೆ. ಕವಿ ಯಾವಾಗಲೂ ನೊಂದವರ ಪರವಾಗಿ ನಿಲ್ಲಬೇಕು. ಕಾವ್ಯವು ಜನಸಾಮಾನ್ಯರ ನೋವು, ಆತಂಕ ಮತ್ತು ಹೋರಾಟಗಳಿಗೆ ಪ್ರತಿಬಿಂಬವಾಗಬೇಕು. ಕತ್ತಲೆಗೆ ದೀಪ ಹಚ್ಚುವುದೇ ಕವಿತೆಯ ಧರ್ಮ ಬೆಂಕಿ ಹಚ್ಚುವುದಲ್ಲ ಎಂದು ಅಭಿಪ್ರಾಯಪಟ್ಟರು.

ಸಾಹಿತಿ ಶೇಖರಗೌಡ ಸರನಾಡಗೌಡ ಮಾತನಾಡಿ, ಜೀವನದ ಸತ್ಯ ಬಿಂಬಿಸುವ ಕಾವ್ಯವೇ ಶಾಶ್ವತವಾಗುತ್ತದೆ. ಕೇವಲ ವರ್ಣರಂಜಿತ ಕಲ್ಪನೆ ಅಥವಾ ಊಹಾಪೋಹಗಳಿಗೆ ಸೀಮಿತವಾದ ಕಾವ್ಯಕ್ಕಿಂತ ಸಮಾಜದಲ್ಲಿನ ಮೌಢ್ಯ, ಅನ್ಯಾಯ ಮತ್ತು ಅಸಮಾನತೆ ಪ್ರಶ್ನಿಸುವ ಕಾವ್ಯವೇ ಇಂದಿನ ಅಗತ್ಯ ಎಂದು ಹೇಳಿದರು.


ಕವಿಗೋಷ್ಠಿಯಲ್ಲಿ ನೀಲಮ್ಮ ಹಿರೇಮಠ, ವೀರೇಶ ಕುರಿ, ವಸಂತ ಗುಡಿ, ರವಿಕುಮಾರ ಹಿರೇಮನಿ, ಬಸವರಾಜ ದಟ್ಟಿ, ಲಕ್ಷ್ಮೀ ನೀಲಣ್ಣನವರ, ಬಸವರಾಜ ರಾಟಿ, ಶೋಭಾ ಮಲ್ಕಿ ಒಡೆಯರ್, ಕವಿತಾ ಹಿರೇಮಠ, ರೇಷ್ಮಾ ಕಂದಕೂರು, ಮಂಜುನಾಥ ಹಿರೇಮಠ, ಶ್ಯಾಮಿದ ವಾಲಿಕಾರ, ಬಸವರಾಜ ಕನ್ನೂರು, ಶರಣಮ್ಮ ಅಂಗಡಿ, ನರ್ಮದಾಬಾಯಿ ಕುಲಕರ್ಣಿ, ಸುರೇಶ್ ಕಲಾಪ್ರಿಯಾ, ನಾಗರತ್ನಾ ಎಚ್., ಮುರಳೀಧರ ಜೋಶಿ, ಶಿವನಗೌಡ ತೆಗ್ಗಿ, ನಾಗೇಶ ನಾಯಕ, ಡಾ. ಪಾರ್ವತಿ ಕನಕಗಿರಿ, ಕನಕಪ್ಪ ದಂಡಿನ, ಹನುಮೇಶ ಜನಾದ್ರಿ, ಮಂಜುನಾಥ ಚಿಕ್ಕನಕೊಪ್ಪ, ಯಮನೂರ ಪ್ರಧಾನಿ, ಸವಿತಾ ದೇಶಪಾಂಡೆ ಹಾಗೂ ಸಿದ್ರಾಮಪ್ಪ ವಂದಾಲಿ ಸೇರಿದಂತೆ ಹಲವರು ಕುಟುಂಬ, ಪರಿಸರ, ರೈತರ ಬದುಕು, ವಿಜ್ಞಾನ, ಪ್ರೀತಿ, ಸಾಮಾಜಿಕ ಅಸಮಾನತೆ, ಕಾರ್ಮಿಕರ ಸಂಕಷ್ಟ, ಕೈಗಾರಿಕೀಕರಣ, ಗ್ಯಾರಂಟಿ ಯೋಜನೆಗಳು ಸೇರಿದಂತೆ ಸಮಕಾಲೀನ ವಿಷಯ ಒಳಗೊಂಡ ಕವಿತೆಗಳನ್ನು ವಾಚಿಸಿದರು.

ಈ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ, ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪೊಲೀಸ್‌ಪಾಟೀಲ, ತಾಲೂಕಾಧ್ಯಕ್ಷ ಲೆಂಕಪ್ಪ ವಾಲಿಕಾರ, ಶರಣಪ್ಪ ಲೈನದ್‌, ಆರ್‌.ಕೆ. ಸುಬೇದಾರ, ಅಮರೇಗೌಡ ಜಾಲಿಹಾಳ, ಹನುಮಂತಪ್ಪ ಈಟಿಯವರ, ಜಿ.ಎಸ್‌. ಗೋನಾಳ, ಶರಣಪ್ಪ ಮೆಟ್ರಿ, ಬಸವರಾಜ ಉಪ್ಪಿನ್‌, ಕೇದಾರನಾಥ ತುರಕಾಣಿ, ವೆಂಕಟೇಶಗೌಡ, ಸುಜಾತಾ ಹಿರೇಮಠ ಹಾಗೂ ತಮ್ಮಣ್ಣ ವಿರೂಪಾಪುರ, ಶಿವಾನಂದ ತಿಮ್ಮಾಪುರ, ದೇವರಾಜ ವಿಶ್ವಕರ್ಮ, ಮಹೇಶ ಹಡಪದ ಇದ್ದರು.