ಕನ್ನಡಿಗರಿಗೆ ಕ್ಷಮೆ ಕೇಳಿಸಿದರೆ ಕೇಸ್ ವಾಪಸ್

| Published : Sep 09 2025, 01:00 AM IST

ಸಾರಾಂಶ

ಕೇಸ್ ಮ್ಯಾನೇಜ್ ಮಾಡುವುದರಲ್ಲಿ ಸಿಎಂ ಬಹಳ ಚಾಣಾಕ್ಷರು. ಮೂಡಾ ಕೇಸ್ ನಲ್ಲೇ ಅದನ್ನು ನಾವು ನೋಡಿದ್ದೇವೆ.

ಕನ್ನಡಪ್ರಭ ವಾರ್ತೆ ಮೈಸೂರು

ಸಿಎಂ, ಡಿಸಿಎಂ ಇಬ್ಬರು ಸೇರಿ ಬಾನು ಮುಷ್ತಾಕ್ ರಿಂದ ಕನ್ನಡಿಗರಿಗೆ ಕ್ಷಮೆ ಕೇಳಿಸಲಿ ನಾನು ಈಗಲೂ ಕೇಸ್ ವಾಪಸ್ ಪಡೆಯುತ್ತೇನೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ಆಯ್ಕೆ ಪ್ರಶ್ನಿಸಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿರುವ ಕುರಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ, ಡಿಸಿಎಂ ಇಬ್ಬರಿಗೆ ಕೈ ಮುಗಿದು ಕೇಳ್ತಿನಿ, ಬಾನು ಮುಷ್ತಾಕ್ ಭಾಷಣ ಒಪ್ಪುತ್ತೀರಾ ಹೇಳಿ? ಒಪ್ಪುವುದಾದರೆ ಧೈರ್ಯವಾಗಿ ಹೇಳಲಿ ಎಂದರು.

ಕೇಸ್ ಮ್ಯಾನೇಜ್ ಮಾಡುವುದರಲ್ಲಿ ಸಿಎಂ ಬಹಳ ಚಾಣಾಕ್ಷರು. ಮೂಡಾ ಕೇಸ್ ನಲ್ಲೇ ಅದನ್ನು ನಾವು ನೋಡಿದ್ದೇವೆ. ನಮಗೆ ಕೇಸ್ ಬಗ್ಗೆ ಹೇಳಿ ಕೊಡುವುದಕ್ಕೆ ಬರಬೇಡಿ ಎಂದು ಅವರು ಹೇಳಿದರು.

ಬಾನು ಮುಷ್ತಾಕ್ ಸಾಧನೆ ಬಗ್ಗೆ ನನಗೆ ಗೌರವವಿದೆ. ಶೇ.100 ದಸರಾ ಧಾರ್ಮಿಕ ಆಚರಣೆ. ನಮ್ಮ ಧಾರ್ಮಿಕ ಆಚರಣೆ ಬಗ್ಗೆ ಅವರಿಗೆ ಅಸಮಾಧಾನಗಳಿವೆ. ಮುಸ್ಲಿಂ ಎನ್ನುವ ಕಾರಣಕ್ಕೆ ನನ್ನ ವಿರೋಧವಿಲ್ಲ. ಕನ್ನಡಾಂಬೆ ಬಗ್ಗೆ ಬಾನು ಮುಷ್ತಾಕ್ ಹೇಳಿರುವ ಹೇಳಿಕೆ ಬಗ್ಗೆ ನಮ್ಮ ತಕಾರರು ಇದೆ. ಹಿಂದೂ ಸಂಸ್ಕಾರಗಳ ಬಗ್ಗೆ ಬಾನು ಮುಷ್ತಾಕ್ ಗೆ ಒಪ್ಪಿಗೆ ಇಲ್ಲ ಎಂದು ಅವರು ತಿಳಿಸಿದರು.

ಕನ್ನಡಾಂಬೆ ಬಗ್ಗೆ ಬಾನು ಮುಷ್ತಾಕ್ ಹೇಳಿರುವ ಬಗ್ಗೆ ಯಾಕೆ ಸಿಎಂ ಮಾತಾಡುತ್ತಿಲ್ಲ. ಕನ್ನಡಾಂಬೆಯ ಅರಿಶಿನ ಕುಂಕುಮ ಬಗ್ಗೆ ಆಡಿರುವ ಮಾತಿನ ಬಗ್ಗೆ ಬಾನು ಮುಷ್ತಾಕ್ ಕ್ಷಮೆ ಕೇಳಿದ್ದರೆ ನಾನು ಕೋರ್ಟ್ ಗೆ ಹೋಗುತ್ತಿರಲಿಲ್ಲ. ಕ್ಷಮೆಯೆ ಕೇಳದವರು ಚಾಮುಂಡಿ ದೇವಿಗೆ ಗೌರವ ಕೊಡುತ್ತೀರಾ ಎಂದು ಹೇಗೆ ನಂಬುವುದು. ಬಾನು ಮುಷ್ತಾಕ್ ಆಡಿರುವ ಮಾತಿಗೆ ಸ್ಪಷ್ಟೀಕರಣ ಕೊಡಲಿಲ್ಲ. ಭುವನೇಶ್ವರಿ ಬಗ್ಗೆ ಹೇಳಿರುವ ಹೇಳಿಕೆ ಬಗ್ಗೆ ಯಾಕೆ ಅವರು ಮಾತಾಡುತ್ತಿಲ್ಲ. ನಮ್ಮ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಆಗುತ್ತದೆ ಎಂದು ಕಾನೂನಾತ್ಮಕವಾಗಿಯೆ ಹೋರಾಟಕ್ಕೆ ಇಳಿದಿದ್ದೇನೆ ಎಂದರು.

ಮುಸ್ಲಿಂರು ಶಾಂತಿ ಪ್ರಿಯರು ಎಂದು ಸಿಎಂ ಮೊನ್ನೆ ಹೇಳಿದ್ದಾರೆ. ಮಂಡ್ಯದಲ್ಲಿ ಗಣೇಶ ಮೂರ್ತಿ ಮೇಲೆ ಕಲ್ಲು ಎಸೆದಿದ್ದು ಯಾರು ಸಿದ್ದರಾಮಯ್ಯ ಅವರೇ? ಹಿಂದೂಗಳಷ್ಟು ಜಾತ್ಯಾತೀತರು ಮತ್ತೊಬ್ಬರು ಇಲ್ಲ. ಸಿಎಂ ಹಿಂದೂಗಳಿಗೆ ಜಾತ್ಯಾತೀತ ಪಾಠ ಮಾಡಬೇಡಿ. ನಮ್ಮ ಸಂಸ್ಕೃತಿ ಬಗ್ಗೆ ಅಸಡ್ಡೆ ಮಾತಾಡುವ ಬಾನು ಮುಷ್ತಾಕ್ ಅವರು ನಮ್ಮ ಕಣ್ಣಿಗೆ ಘಜ್ನಿ, ಮೊಘಲರ ರೀತಿ ಕಾಣಿಸಿ ಕೊಳ್ಳುತ್ತಾರೆ. ಸಿಎಂ ಮುಸ್ಲಿಂರಿಗೆ ಉತ್ತೇಜನ ಕೊಡುತ್ತಿದ್ದಾರೆ. ಮುಸ್ಲಿಂರು ಶಾಂತಿ ಪ್ರಿಯರು ಎಂದ ಕ್ಷಣ ಮುಸ್ಲಿಂ ಇಲ್ಲಿ ಕಲ್ಲು ಎಸೆದಿದ್ದಾರೆ ಎಂದು ಅವರು ಕಿಡಿಕಾರಿದರು.

-----

ಬಾಕ್ಸ್....

ಇದು ತಾಲಿಬಾನಿ ಸರ್ಕಾರ

ಮಂಡ್ಯ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು, ಇದು ಕನ್ನಡಿಗರ ಸರ್ಕಾರ ಅಲ್ಲ. ಇದು ತಾಲಿಬಾನಿ ಸರ್ಕಾರ. ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ಕೆಲ ಸಂಘಟನೆಯವರು ಎದ್ದು ಕುಳಿತುಕೊಳ್ಳುತ್ತಾರೆ. ಡಿಜೆ ಹಳ್ಳಿ- ಕೆಜೆ ಹಳ್ಳಿ ಕೇಸ್ ವಾಪಾಸ್ ಪಡೆದಿದ್ದಕ್ಕೆ ಮತ್ತೆ ಪುಂಡಾಟಿಕೆ ಶುರು ಮಾಡಿದ್ದಾರೆ ಎಂದರು.

ಹಿಂದೂಗಳು ಶಾಂತಿಯಿಂದ ಗಣೇಶ ಮೆರವಣಿಗೆ ಮಾಡಲು ಅಸಾಧ್ಯವಾದ ವಾತಾವರಣ ನಿರ್ಮಾಣ ಆಗ್ತಿದೆ. ಮುಸ್ಲಿಂರು ಶಾಂತಿಪ್ರಿಯರು ಎಂದು ಸಿಎಂ ಹೇಳಿದ್ದಾರೆ. ನಿನ್ನೆ ಗಣೇಶ ಮೂರ್ತಿ ಮೇಲೆ ಕಲ್ಲು ಹೊಡೆದಿದ್ದು ಯಾರು? ಗಣೇಶೋತ್ಸವದ ಮೇಲೆ ಕಲ್ಲು ಹೊಡೆಯುವುದೆ ಇವರ ಸಂಸ್ಕೃತಿನಾ ಎಂದು ಅವರು ಕಿಡಿಕಾರಿದರು.