ಸಂಸ್ಕೃತಿ ಪ್ರಸಾರಕ್ಕೆ ಯಕ್ಷಗಾನ ಅತ್ಯುತ್ತಮ ಮಾಧ್ಯಮ: ಶ್ರೀ ವಿದ್ಯಾಸಾಗರ ತೀರ್ಥರು

| Published : Dec 21 2023, 01:15 AM IST

ಸಂಸ್ಕೃತಿ ಪ್ರಸಾರಕ್ಕೆ ಯಕ್ಷಗಾನ ಅತ್ಯುತ್ತಮ ಮಾಧ್ಯಮ: ಶ್ರೀ ವಿದ್ಯಾಸಾಗರ ತೀರ್ಥರು
Share this Article
  • FB
  • TW
  • Linkdin
  • Email

ಸಾರಾಂಶ

ಎರಡು ವಾರಗಳ ಪರ್ಯಂತ ನಡೆದ ಈ ಕಿಶೋರ ಯಕ್ಷಗಾನ ಸಂಭ್ರಮದಲ್ಲಿ 28 ಶಾಲೆಗಳ ಸುಮಾರು 860 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಉಡುಪಿ

ಯಕ್ಷ ಶಿಕ್ಷಣ ಟ್ರಸ್ಟ್‌ನಿಂದ ಯಕ್ಷಗಾನ ತರಬೇತಿ ಪಡೆದ ಉಡುಪಿಯ ಶಾಲೆಗಳ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನಗಳ ಸಮಾರೋಪ ಬುಧವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಿತು.

ಎರಡು ವಾರಗಳ ಪರ್ಯಂತ ನಡೆದ ಈ ಕಿಶೋರ ಯಕ್ಷಗಾನ ಸಂಭ್ರಮದಲ್ಲಿ 28 ಶಾಲೆಗಳ ಸುಮಾರು 860 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ವಿದ್ಯಾರ್ಥಿಗಳನ್ನು ಆಶೀರ್ವದಿಸಿ ಮಾತನಾಡಿದ ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಸಂಸ್ಕೃತಿ ಪ್ರಸಾರಕ್ಕೆ ಯಕ್ಷಗಾನ ಅತ್ಯುತ್ತಮ ಮಾಧ್ಯಮ, ಈ ಕಲೆ ಮಕ್ಕಳನ್ನು ಸಂಸ್ಕೃತೀಸಂಪನ್ನರಾಗಿಸುತ್ತದೆ. ಯಕ್ಷ ಶಿಕ್ಷಣ ಟ್ರಸ್ಟ್ ಇದನ್ನು ನಿರಂತರ ಮುಂದುವರಿಸಿಕೊಂಡು ಬರಲಿ ಎಂದು ಹಾರೈಸಿದರು ಮತ್ತು ಯಕ್ಷ ಗುರುಗಳನ್ನು, ಪ್ರಸಾಧನ ತಜ್ಞರನ್ನು ಶಾಲು ಹೊದಿಸಿ ಗೌರವಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷರಾಗಿರುವ ಉಡುಪಿ ಶಾಸಕ ಯಶ್ಪಾಲ್‌ ಸುವರ್ಣ ವಹಿಸಿದ್ದರು. ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಶುಭಾಶಂಸನೆಗೈದರು.

ಅಭ್ಯಾಗತರಾಗಿ ಡಾ.ತಲ್ಲೂರು ಶಿವರಾಮ ಶೆಟ್ಟಿ, ಕೆ.ಗಣಪತಿ, ಯು.ವಿಶ್ವನಾಥ ಶೆಣೈ ಭಾಗವಹಿಸಿದ್ದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ಉಪಾಧ್ಯಕ್ಷ ಎಸ್.ವಿ.ಭಟ್ ಉಪಸ್ಥಿತರಿದ್ದರು.

ನಾಲ್ವರು ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು. ನಾರಾಯಣ ಎಂ.ಹೆಗಡೆ ಸ್ವಾಗತಿಸಿದರು. ಎಚ್.ಎನ್.ಶೃಂಗೇಶ್ವರ ವಂದಿಸಿಸಿದರು. ಯಕ್ಷಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.