ಸಾರಾಂಶ
ಸಿದ್ಧತೆ ಪರಿಶೀಲನೆಗೆ ಆಗಮಿಸಿದ್ದ ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಪಷ್ಟನೆ । ಪ್ರತಿ 5-10 ವರ್ಷಕ್ಕೊಮ್ಮೆ ಜರಗುವ ಸಮಾವೇಶ ಕನ್ನಡಪ್ರಭ ವಾರ್ತೆ ದಾವಣಗೆರೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ಅಭಾವೀಮ) ದಿಂದ ದಾವಣಗೆರೆಯಲ್ಲಿ ಡಿ.23ರಿಂದ ಎರಡು ದಿನ ನಡೆಯುವ ಮಹಾ ಅಧಿವೇಶನವು ಸಮಾಜದ ಶಕ್ತಿ ಪ್ರದರ್ಶನವಲ್ಲ. ವಾಡಿಕೆಯಂತೆ ನಡೆಯುವ ಸಮಾವೇಶ ಎಂದು ಮಹಾಸಭಾ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ, ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಬುಧವಾರ ಮಹಾ ಅಧಿವೇಶನದ ಸಿದ್ಧತೆ ಪರಿಶೀಲನೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಮಹಾಧಿವೇಶನದ ಸಿದ್ಧತೆ ನಡೆದಿದ್ದು, ಎಲ್ಲಾ ಸಮುದಾಯಗಳು ನಡೆಸುವಂತೆ ನಮ್ಮ ಸಮಾಜದ ಮಹಾ ಅಧಿವೇಶನ ನಡೆಸುತ್ತಿದ್ದೇವೆ. ಪ್ರತಿ 5-10 ವರ್ಷಕ್ಕೊಮ್ಮೆ ಮಹಾಧಿವೇಶನ ನಡೆಸುವುದು ವಾಡಿಕೆ ಎಂದರು. 119 ವರ್ಷಗಳ ಹಿಂದೆ ಹಾನಗಲ್ ಶ್ರೀ ಕುಮಾರೇಶ್ವರರು ಅಖಿಲ ಭಾರತ ವೀರಶೈವ ಮಹಾಸಭಾ ಹುಟ್ಟು ಹಾಕಿದ್ದರು. ಆಗಿನಿಂದಲೂ 5-10 ವರ್ಷಕ್ಕೊಮ್ಮೆ ಮಹಾ ಅಧಿವೇಶನ ನಡೆಯುತ್ತಿದೆ. ಈಗಿನ ಪ್ರಸ್ತುತ ಸಮಾಜ, ಸಮುದಾಯ ಒಗ್ಗೂಡಿಸುವುದು, ಯುವಕರಿಗೆ ಮಾರ್ಗದರ್ಶನ ನೀಡಲು ಹಾಗೂ ಇಡೀ ಜಗತ್ತಿಗೆ ಸಮಾನತೆಯ ನ್ಯಾಯ ಕೊಟ್ಟ ಲಿಂಗಾಯತ ಸಮಾಜ ಸರ್ವರಿಗೂ ಸಮಪಾಲು, ಸಮಬಾಳು ಕೊಟ್ಟಂತೆ ನಾವೆಲ್ಲರೂ ಒಗ್ಗಟ್ಟಾಗಿರಬೇಕೆಂಬ ಗುರಿ ಮಹಾಸಭಾ ಹೊಂದಿದೆ ಎಂದು ಹೇಳಿದರು. ಎಲ್ಲಾ ಶೋಷಿತ ವರ್ಗದವರ ಒಗ್ಗೂಡಿಸಿ ಹೋಗುವ ಹೊಣೆ ವೀರಶೈವ ಲಿಂಗಾಯತ ಮಹಾಸಭಾದ ಮೇಲಿದೆ. ಇದೇ ಉದ್ದೇಶದಿಂದ ಮಹಾಧಿವೇಶನದಲ್ಲಿ ವಿವಿಧ ಗೋಷ್ಠಿ ನಡೆಸಲಾಗುತ್ತಿದೆ. ರೈತ, ಮಹಿಳೆ, ಯುವಕರು ಹೀಗೆ ಅನೇಕ ಗೋಷ್ಠಿ ಇವೆ. ಡಿ.25ರಂದು ಮಹಾಧಿವೇಶನದಲ್ಲಿ ನಿರ್ಣಯ ಮಂಡಿಸಲಾಗುವುದು. ನಾಡಿನ ಅನೇಕ ಮಠಾಧೀಶರು, ಗಣ್ಯರು, ಮಾಜಿ ಮುಖ್ಯಮಂತ್ರಿಗಳು, ಹಾಲಿ-ಮಾಜಿ ಸಚಿವರು, ಶಾಸಕರು, ಸಾಹಿತಿಗಳು, ಕಲಾವಿದರು ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು. ಮಹಾ ಅಧಿವೇಶನದಲ್ಲಿ ಸಮಾಜದ ಹಿತದ ಕುರಿತಂತೆ ಅನೇಕ ವಿಚಾರಗಳು ಚರ್ಚೆಯಾಗಲಿವೆ. ಕೊನೆಯ ಹಂತದಲ್ಲಿ ನಿರ್ಣಯ ಮಂಡಿಸಲಾಗುವುದು ಎಂದು ಈಶ್ವರ ಖಂಡ್ರೆ ಹೇಳಿದರು. ಜಾತಿಗಣತಿ ವಿರೋಧಿಗಳಲ್ಲ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಆಗಲೀ, ನಾವಾಗಲೀ ಯಾರೂ ಜಾತಿಗಣತಿಯ ವಿರೋಧಿಗಳಲ್ಲ. ಆದರೆ, ಸಾಮಾಜಿಕ, ಆರ್ಥಿಕ ಸಮೀಕ್ಷೆಯು ವಾಸ್ತವಾಂಶದ ಆಧಾರದಲ್ಲಿರಬೇಕೆಂಬುದು ನಮ್ಮ ಒತ್ತಾಯ. ಇದೇ ನಮ್ಮ ಬೇಡಿಕೆಯೂ ಆಗಿದೆ. ಸಮಾಜದ ಬೇಡಿಕೆಗಳ ಬಗ್ಗೆ ಪ್ರಧಾನಿಯವರಿಗೂ ಮನವಿ ಸಲ್ಲಿಸಲಾಗುವುದು. ಈಶ್ವರ ಖಂಡ್ರೆ, ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ, ಅಭಾವೀಮ ಅರಣ್ಯ ಸಚಿವ
ಖರ್ಗೆ ಪ್ರಧಾನಿ ಅಭ್ಯರ್ಥಿ ಸ್ವಾಗತಾರ್ಹ ಇಂಡಿಯಾ ಮೈತ್ರಿ ಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಹೆಸರು ಪ್ರಸ್ತಾಪವಾಗಿದ್ದು ಸ್ವಾಗತಾರ್ಹ. ರಾಜ್ಯದವರು, ಆತ್ಮೀಯರೂ ಆದ ಮಲ್ಲಿಕಾರ್ಜುನ ಖರ್ಗೆ ಹೆಸರು ಘೋಷಿಸಿದ್ದು ಸ್ವಾಗತಾರ್ಹ. ಖರ್ಗೆ ರಾಷ್ಟ್ರೀಯ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಖರ್ಗೆ ಆಯ್ಕೆಗೆ ಎಐಸಿಸಿ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸಮ್ಮತಿಯೂ ಇದೆ. ಖರ್ಗೆ ಆಯ್ಕೆಯಿಂದ ಬಿಜೆಪಿ ಸರ್ವಾಧಿಕಾರವನ್ನೂ ಮುರಿದಂತಾಗುತ್ತದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.---ಅರಣ್ಯ ಭೂಮಿ ಪ್ರಕರಣ ಇತ್ಯರ್ಥಕ್ಕೆ ಹೆಚ್ಚುವರಿ ಎಸ್‌ಎಫ್‌ಒ ನೇಮಕ* ಬಡವರಿಗೆ ತ್ವರಿತವಾಗಿ ನ್ಯಾಯ, ಅರಣ್ಯ ಹಕ್ಕುಪತ್ರ ಕೊಡಿಸಿ: ಈಶ್ವರ ಖಂಡ್ರೆಕನ್ನಡಪ್ರಭ ವಾರ್ತೆ ದಾವಣಗೆರೆ
ಅರಣ್ಯ ಭೂಮಿಗೆ ಸಂಬಂಧಿಸಿದ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಹಾಗೂ ರೈತರಿಗೆ ತೊಂದರೆಯಾಗುವುದು ತಪ್ಪಿಸಲು ಹೆಚ್ಚುವರಿ ಫಾರೆಸ್ಟ್ ಸೆಟಲ್‌ಮೆಂಟ್ ಆಫೀಸರ್ (ಎಸ್‌ಎಫ್‌ಒ) ಗಳ ನಿಯೋಜಿಸಲಾಗುವುದು ಅರಣ್ಯ, ಜೀವಿ ಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದರು.ನಗರದಲ್ಲಿ ಬುಧವಾರ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಅರಣ್ಯ ವಿಭಾಗಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ ಕಳೆದ 25-30 ವರ್ಷದಿಂದ ಅರಣ್ಯಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಕರಣ ಇತ್ಯರ್ಥವಾಗದೇ, ಉಳಿದಿವೆ. ಇದರಿಂದ ಬಡವರು ಸರ್ಕಾರದ ಸೌಲಭ್ಯ ವಂಚಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 3 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಬಡವರಿಗೆ ತ್ವರಿತವಾಗಿ ನ್ಯಾಯ ಕೊಡಿಸಲು ಹಾಗೂ 1978ಕ್ಕೆ ಮುನ್ನ ಅರಣ್ಯದಲ್ಲಿದ್ದವರಿಗೆ ಅರಣ್ಯ ಹಕ್ಕುಪತ್ರ ಕೊಡಿಸುವಂತೆ ಸೂಚಿಸಿದರು.
ಅರಣ್ಯ ಮತ್ತು ಸರ್ಕಾರಿ ಭೂಮಿ ಒತ್ತುವರಿ ತಡೆಯಲು ತೀರುವಳಿ ಭೂಮಿಯಲ್ಲಿ ಮರಗಳ ಬೆಳೆಸಲು ಮತ್ತು ಆದ್ಯತೆಯ ಮೇಲೆ ಮೀಸಲು ಅರಣ್ಯ ಎಂಬುದಾಗಿ ಘೋಷಿಸುವ ಪ್ರಕ್ರಿಯೆ ಪೂರ್ಣಗೊಳಿಸಬೇಕು. ದಾವಣಗೆರೆ ವೃತ್ತದ 32 ಸಾವಿರ ಹೆಕ್ಟೇರ್ ಪರಿಭಾವಿತ ಅರಣ್ಯ ಪ್ರದೇಶದಲ್ಲಿ ವಸತಿ ಪ್ರದೇಶ, ದೇವಸ್ಥಾನ, ಸ್ಮಶಾನ ಭೂಮಿ, ಅಂಗನವಾಡಿ, ಆಸ್ಪತ್ರೆ ಇತ್ಯಾದಿ ಇದ್ದರೆ ಅವುಗಳನ್ನು ಕೈಬಿಡಲು ಮತ್ತು ಅದಕ್ಕೆ ಪರ್ಯಾಯ ಭೂಮಿ ಗುರುತಿಸಿ, ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ವರದಿ ಸಲ್ಲಿಸಲು ಹಾಗೂ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲು ಕ್ರಮ ಕೈಗೊಳ್ಳಿ ಎಂದು ಅರಣ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.31ಕ್ಕೆ ಅರಣ್ಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಕರ್ನಾಟಕ ಕೈಗಾರಿಕಾ ಪುನಶ್ಚೇತನಾ ನಿಗಮ (ಕೆಎಂಇಆರ್‌ಸಿ)ದಡಿ ಹೊಸಪೇಟೆಯಲ್ಲಿ ಡಿ.31ರಂದು 5 ಕೋಟಿ ರು. ಮೌಲ್ಯದ ಅರಣ್ಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಪೂರ್ವಸಿದ್ಧತೆ ಮಾಡಿಕೊಳ್ಳಿ. ದಾವಣಗೆರೆ ಅರಣ್ಯ ವಿಭಾಗಕ್ಕೆ ಪ್ರಸ್ತುತ ಭದ್ರಾವತಿ ವಲಯದ ಮಾವಿನಕಟ್ಟೆ ಹಾಗೂ ಚನ್ನಗಿರಿ ಅರಣ್ಯ ವಲಯವನ್ನು ಸೇರಿಸಿ, ಅರಣ್ಯ ವಿಭಾಗದ ಪುನರ್ವಿಂಗಡಣೆ ಮಾಡಲು ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದರು.