ಸರಿಗಮಪ ಸೀಸನ್ 20 ಕಣದಲ್ಲಿ ಕರಾವಳಿಯ ಯಶವಂತ್

| Published : Oct 23 2023, 12:15 AM IST

ಸಾರಾಂಶ

ಸರಿಗಮಪ ಸೀಸನ್ 20 ರಿಯಾಲಿಟಿ ಶೋ ಸಂಗೀತ ಸ್ಪರ್ದೆಯಲ್ಲಿ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಚಾಂಪಿಯನ್ ಮೂಡುಬಿದಿರೆಯ ವಿದ್ವಾನ್ ಯಶವಂತ್ ಎಂ.ಜಿ. ಕಣದಲ್ಲಿ
ರಾಂ ಅಜೆಕಾರು / ಗಣೇಶ್ ಕಾಮತ್ ಕನ್ನಡಪ್ರಭ ವಾರ್ತೆ ಮೂಡುಬಿದಿರೆ ಈ ಬಾರಿ ಜೀ ಕನ್ನಡದ ಸರಿಗಮಪ ಸೀಸನ್ 20 ರಿಯಾಲಿಟಿ ಶೋ ಸಂಗೀತ ಸ್ಪರ್ದೆಯಲ್ಲಿ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಚಾಂಪಿಯನ್ ಮೂಡುಬಿದಿರೆಯ ವಿದ್ವಾನ್ ಯಶವಂತ್ ಎಂ.ಜಿ. ಕಣದಲ್ಲಿದ್ದು ರಂಗೇರಿಸಿದ್ದಾರೆ. ಸಂಸ್ಕೃತ, ಸಂಸ್ಕೃತಿ ಪ್ರೀತಿಯೊಂದಿಗೆ ಬೆಳೆದು ಸಂಗೀತವನ್ನೇ ಉಸಿರಾಡಿ ಬೆಳೆದ ಮೂಲತಃ ಉಡುಪಿ ಬನ್ನಂಜೆಯ ಯಶವಂತ್ ಸಂಸ್ಕೃತ ಅಧ್ಯಾಪಕರಾಗಿ ಮೂಡುಬಿದಿರೆಯ ಜೈನ ಹೈಸ್ಕೂಲಲ್ಲಿ ಎನ್.ಸಿ. ಸಿ. ಆರ್ಮಿ ಅಧಿಕಾರಿಯಾಗಿಯೂ ಕಾರ್ಯನಿರತರು. ಗಂಗಾಧರ ಎಂ.ಎಲ್‌. ಹಾಗೂ ಹೇಮಾವತಿ ದಂಪತಿಯ ಪುತ್ರ ಯಶವಂತ್ ಗುರುಕುಲ ಮಾದರಿಯಲ್ಲಿ ೫ ವರ್ಷ ಸಂಸ್ಕೃತ ವೇದ ಪುರೋಹಿತ ಶಿಕ್ಷಣ, ಉಡುಪಿಯ ಸಿದ್ಧಾಂತ ಸಂಸ್ಕೃತ ಕಾಲೇಜು ಅಲಂಕಾರ ಶಾಸ್ತ್ರ ಅಧ್ಯಯನ ಮಾಡಿ , ಕಟೀಲು ಶ್ರೀ ದುರ್ಗಾಪರಮೇಶ್ವರಿ ಸಂಸ್ಕೃತ ಸಂಶೋಧನ ಅಧ್ಯಯನ ಕೇಂದ್ರದಲ್ಲಿ ಸ್ನಾತಕೋತ್ತರ ಪದವಿ, ಕೆ.ಎಸ್‌.ಒ.ಯು ಮೈಸೂರಲ್ಲಿ ಕನ್ನಡ ಮತ್ತು ಇತಿಹಾಸ ಸ್ನಾತಕೋತ್ತರ ಪದವಿ ಗಾನಯೋಗಿ ಪಂಚಾಕ್ಷರಿ ಗವಾಯಿ ಸಂಗೀತ ಮಹಾವಿದ್ಯಾಲಯ ಗದಗ ಇಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ವಿದ್ವತ್ ಪಡೆದು , ಕರ್ನಾಟಕ ಜಾನಪದ ಪರಿಷತ್‌ನ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಸಂಗೀತವೆ ಜೀವಾಳ: ಮೈಸೂರು ದಸರಾ, ಆಳ್ವಾಸ್ ವಿರಾಸತ್ , ಹಂಪಿ ಉತ್ಸವ, ಕದಂಬ ಉತ್ಸವ , ಆಳುಪ ಉತ್ಸವ , ದುಬೈ, ಕತಾರ್ , ಸೇರಿದಂತೆ ಸುಮಾರು 6000 ಕ್ಕೂ ಹೆಚ್ಚು ಸಂಗೀತ ಶೋಗಳನ್ನು ರಾಜ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀಡಿದ್ದಾರೆ. ಅದಲ್ಲದೇ ತುಳು ಚಿತ್ರ ಬಿರ್ಸೆ ಚಲನಚಿತ್ರದ ಮೂಲಕ ಚಿತ್ರ ರಂಗಕ್ಕೆ ಹಿನ್ನೆಲೆ ಗಾಯಕರಾಗಿ ಗುರುತಿಸಿಕೊಂಡು ತುಳು ಕನ್ನಡ ಕೊಂಕಣಿ ಚಿತ್ರಗಳಲ್ಲಿ 250 ಕ್ಕೂ ಹೆಚ್ಚು ಹಿನ್ನೆಲೆ ಗಾಯಕರಾಗಿ ಗುರುತಿಸಿಕೊಂಡಿದ್ದಾರೆ. ಸಂಸ್ಕೃತ, ಹಿಂದಿ ಭಾಷೆಗಳ ಕನ್ನಡ ಕೊಂಕಣಿ ಧ್ವನಿ ಸುರುಳಿಗಳಿಗೆ ಕಂಠ ನೀಡಿದ್ದಾರೆ. ೨೦೦೬ ರಲ್ಲಿ ಡಾ. ಎಸ್‌.ಪಿ ಬಾಲ ಸುಬ್ರಹ್ಮಣ್ಯಂ ನಡೆಸಿ ಕೊಟ್ಟಿದ್ದ ಈಟಿವಿಯ ಎದೆತುಂಬಿ ಹಾಡುವೆನು ರಿಯಾಲಿಟಿ ಶೋ ವಿಜೇತರಾಗಿ ರಾಜ್ಯದ ಮನಗೆದ್ದಿದ್ದ ಯಶವಂತ್ ೨೦೦೭ ಕಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಮಾಡುವ ಶ್ರೇಷ್ಠ ಯುವಗಾಯಕ ಪ್ರಶಸ್ತಿ ವಿಜೇತರು, ೨೦೧೦ ಕಲ್ಪಿ ವಿಜೇತರು. ಉದಯ ಟಿವಿಯ ಸಂಗೀತ ಮಹಾಯುದ್ಧ ರಿಯಾಲಿಟಿ ಶೋ ಪ್ರಶಸ್ತಿ, ೨೦೦೦ ದಲ್ಲಿ ಚಂದನ ವಾಹಿನಿಯ ಎಮ್.ಎಸ್.ಐ.ಎಲ್ ನಿತ್ಯೋತ್ಸವ ಕಾರ್ಯಕ್ರಮದಲ್ಲಿ ಸೆಮಿ ಫೈನಲಿಸ್ಟ್. .೨೦೧೮ ರಲ್ಲಿ ಮಲ್ಪೆಯಲ್ಲಿ ನಡೆದ ವಿಶ್ವದಾಖಲೆಯ ವಂದೇ ಮಾತರಂ ಹಾಡುವ ಮೂಲಕವೂ ಜನ ಮನ್ನಣೆ ಗಳಿಸಿದವರು. ಮರೆಯಲಾಗದ ಘಳಿಗೆ ದಂತ ಕಥೆ ಎಸ್.ಪಿ.ಬಿ. ಅವರ ಜತೆ ಬೆರೆಯುವ ಅವಕಾಶ ಅದೆಂದೂ ಮರೆಯಲಾಗದ್ದು. ಸಂಸ್ಕೃತ ಸಂಗೀತ ಎರಡನ್ನೂ ಒಲಿಸಿಕೊಂಡಿರುವ ನೀವು ಅವೆರಡನ್ನೂ ಉಳಿಸಿ ಬೆಳೆಸಿ ಎಂದಿದ್ದ ಎಸ್.ಪಿ.ಬಿ , ಅವರ ಮಗುವಿನಂತಹ ಹೃದಯ ವೈಶಾಲ್ಯತೆ ಎಂದೂ ಮರೆಯಲಾಗದ ಪಾಠ. ಈ ಬಾರಿ ಸರಿಗಮಪ ಸೀಸನ್ 20ಯಲ್ಲಿ ಕರಾವಳಿಯ ಪುತ್ತೂರಿನ ಸಮನ್ವಿ ರೈ, ಮೂಡುಬಿದಿರೆಯವರೇ ಆದ ಅಮಿಶಾ ಕಣದಲ್ಲಿದ್ದಾರೆ. ಅನಿವಾಸಿ ಕನ್ನಡಿಗರಾದ 7 ಮಂದಿ ಸ್ಪರ್ಧಿಗಳಿರುವುದು ಮತ್ತೂ ವಿಶೇಷ. -ವಿದ್ವಾನ್‌ ಯಶವಂತ್‌ ಎಂ.ಜಿ., ಗಾಯಕ.