ಬುದ್ಧನ ದೀಕ್ಷಾಭೂಮಿ ಪ್ರತಿಯೊಬ್ಬರಿಗೂ ಸ್ಪೂರ್ತಿ: ತಮ್ಮಯ್ಯ
KannadaprabhaNewsNetwork | Published : Oct 23 2023, 12:15 AM IST
ಬುದ್ಧನ ದೀಕ್ಷಾಭೂಮಿ ಪ್ರತಿಯೊಬ್ಬರಿಗೂ ಸ್ಪೂರ್ತಿ: ತಮ್ಮಯ್ಯ
ಸಾರಾಂಶ
ಬುದ್ಧನ ದೀಕ್ಷಾಭೂಮಿ ಪ್ರತಿಯೊಬ್ಬರಿಗೂ ಸ್ಪೂರ್ತಿ: ತಮ್ಮಯ್ಯ
ನಾಗಪುರದ ಅಂಬೇಡ್ಕರ್ ದೀಕ್ಷಾ ಭೂಮಿ ಯಾತ್ರೆಗೆ ಚಾಲನೆ । ನಾಲ್ಕು ದಿನದ ಪ್ರವಾಸ, ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಅಂಬೇಡ್ಕರ್ ದೀಕ್ಷಾ ಭೂಮಿ ಯಾತ್ರೆಗೆ ತೆರಳುವವರು ಕೇವಲ ಭೇಟಿ ನೀಡಿ ವಾಪಸಾದರೆ ಸಾಲದು. ಅಲ್ಲಿರುವ ಆದರ್ಶಗಳನ್ನು ಪ್ರತಿಯೊಬ್ಬರಲ್ಲೂ ತಿಳಿಸುವ ಕೆಲಸ ಮಾಡಿದರೆ ಪ್ರವಾಸಕ್ಕೆ ನಿಜವಾದ ಅರ್ಥ ಬರಲು ಸಾಧ್ಯ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ನಾಲ್ಕು ದಿನಗಳ ನಾಗಪುರದ ಅಂಬೇಡ್ಕರ್ ದೀಕ್ಷಾ ಭೂಮಿ ಯಾತ್ರೆ ಕಾರ್ಯಕ್ರಮಕ್ಕೆ ಭಾನುವಾರ ಹಸಿರು ನಿಶಾನೆ ತೋರಿ ಅವರು ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆಯಿಂದ ಅಪರೂಪದ ಪ್ರವಾಸ ಕಾರ್ಯಕ್ರಮ ಆಯೋಜಿಸಿರುವುದು ಸ್ವಾಗತಾರ್ಹ. ಇದರಿಂದ ಜನರು ಬುದ್ಧನ ಜೀವನ ಚರಿತ್ರೆ ತಿಳಿಯಲು ಸಾಧ್ಯವಾಗಲಿದೆ. ಬುದ್ಧನ ನಾಡಿಗೆ ಪ್ರವಾಸ ತೆರಳುವವರು ಬುದ್ಧನ ವಿಚಾರ ಧಾರೆ ಮತ್ತು ಹಾಕಿಕೊಟ್ಟ ದಾರಿಯಲ್ಲಿಯೇ ಸಾಗಬೇಕು ಎಂದು ತಿಳಿಸಿದರು. ಗೌತಮ ಬುದ್ಧನ ತತ್ವಗಳನ್ನು ಅಳವಡಿಸಿಕೊಳ್ಳುವ ಕೆಲಸ ಪ್ರತಿಯೊಬ್ಬರು ಮಾಡಬೇಕು. ನಿದ್ದೆಯಿಂದ ಎದ್ದವನೇ ಬುದ್ಧ, ಅತಿ ಜಾಗೃತ ಮನಸ್ಸಿನವ, ಜ್ಞಾನಿ ಹಾಗೂ ಬೇರೆಯವರಿಗೆ ನೋವುಂಟು ಮಾಡದವರು, ತಮ್ಮ ಇಡೀ ಬದುಕನ್ನು ಸಮಾಜಕ್ಕೆ ಮುಡುಪಾಗಿಟ್ಟವರ ಮಾರ್ಗದರ್ಶನದ ಹಾದಿಯಲ್ಲಿ ಇಂದಿನ ಜನತೆ ಮುಂದುವರೆಯಬೇಕು ಸಲಹೆ ಮಾಡಿದರು. ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಯೋಗೀಶ್ ಮಾತನಾಡಿ, ನಾಗಪುರಕ್ಕೆ ಜಿಲ್ಲೆಯಿಂದ ನಾಲ್ಕು ಬಸ್‌ಗಳಲ್ಲಿ 160 ಮಂದಿ ಪ್ರಯಾಣ ಆರಂಭಿಸಿದ್ದಾರೆ. ಚಿಕ್ಕಮಗಳೂರು ತಾಲೂಕಿನಿಂದಲೇ ಎರಡು ಬಸ್, ಮೂಡಿಗೆರೆ ಒಂದು ಬಸ್ ಹಾಗೂ ಕೊಪ್ಪ, ಶೃಂಗೇರಿ, ಕಡೂರು, ಅಜ್ಜಂಪುರ, ನರಸಿಂಹರಾಜಪುರ ಭಾಗದಿಂದ ಒಂದು ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ಪ್ರವಾಸಕ್ಕೆ ಹೋಗುವವರೊಂದಿಗೆ ಓರ್ವ ನೋಡಲ್ ಅಧಿಕಾರಿ ನಿಯೋಜನೆ ಮಾಡಿ ಕಳುಹಿಸಿಕೊಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಚ್.ಡಿ.ರೇವಣ್ಣ, ದಲಿತ ಮುಖಂಡರಾದ ಮರ್ಲೆ ಅಣ್ಣಯ್ಯ, ಆಲ್ದೂರು ನಟರಾಜ್, ಗಣೇಶ್, ಯಲಗುಡಿಗೆ ಹೊನ್ನಪ್ಪ ಹಾಜರಿದ್ದರು. --ಬಾಕ್ಸ್-- ಬುದ್ಧನ ವಿಚಾರ ಪಸರಿಸಿ ಪ್ರವಾಸದಿಂದ ಜ್ಞಾನಾರ್ಜನೆ ಮಾಡಿಕೊಂಡು ಬುದ್ಧನ ವಿಚಾರಧಾರೆ ಪಸರಿಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದರು. ಜೊತೆಗೆ ನೀವುಗಳೇ ಬುದ್ಧನ ಕುರಿತಾದ ಕಾರ್ಯಕ್ರಮ ಆಯೋಜಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸ ಬೇಕು ಎಂದು ಹೇಳಿದರು. 22 ಕೆಸಿಕೆಎಂ 3 ನಾಗಪುರದ ಅಂಬೇಡ್ಕರ್ ದೀಕ್ಷಾ ಭೂಮಿ ಯಾತ್ರೆ ಕಾರ್ಯಕ್ರಮಕ್ಕೆ ಚಿಕ್ಕಮಗಳೂರಿನಲ್ಲಿ ಶಾಸಕ ಎಚ್.ಡಿ. ತಮ್ಮಯ್ಯ ಅವರು ಭಾನುವಾರ ಹಸಿರು ನಿಶಾನೆ ತೋರಿದರು.