ಸಾರಾಂಶ
ಧಾರವಾಡ:
ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ಮೊದಲ ಆರೋಪಿ ಬಸವರಾಜ ಮುತ್ತಗಿ ಯಾವಾಗ ಮಾಫಿ ಸಾಕ್ಷಿಗೆ ಒಪ್ಪಿದರೋ ಅವತ್ತಿನಿಂದ ಜೀವ ಬೆದರಿಕೆಗಳು ತಪ್ಪಿಲ್ಲ. ನ್ಯಾಯಾಲಯ ಆದೇಶದಂತೆ ಅವರ ಮನೆಗೆ ಸಿಆರ್‌ಪಿಎಫ್ ಭದ್ರತೆ ನೀಡಿದರೂ ಮತ್ತೆ ಜೀವ ಬೆದರಿಕೆ ಬಂದಿದೆ.ಬುಧವಾರ ರಾತ್ರಿ ಮತ್ತೆ ದೂರವಾಣಿ ಕರೆಯ ಮೂಲಕ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಮುತ್ತಗಿ ಗುರುವಾರ ಇಲ್ಲಿಯ ಉಪನಗರ ಠಾಣೆಗೆ ದೂರು ನೀಡಿದ್ದಾರೆ.
ಹೆಬ್ಬಳ್ಳಿ ಕ್ಷೇತ್ರದ ಜಿಪಂ ಬಿಜೆಪಿ ಸದಸ್ಯ ಯೋಗೀಶಗೌಡನ ಕೊಲೆ ಪ್ರಕರಣದಲ್ಲಿ ಮುತ್ತಗಿ ಮೊದಲನೇ ಆರೋಪಿ. ಅಚ್ಚರಿ ಎನ್ನುವಂತೆ ಇತ್ತೀಚಿಗಷ್ಟೇ ಮುತ್ತಗಿ ಪ್ರಕರಣದ ಮಾಫಿ ಸಾಕ್ಷಿಯಾಗಿದ್ದನು. ಅದಕ್ಕೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಒಪ್ಪಿಗೆ ಸಹ ನೀಡಿತ್ತು. ಇದಾದ ಬಳಿಕ ಬೆದರಿಕೆ ಕರೆಗಳು ಶುರುವಾಗಿದ್ದವು. ಪ್ರಕರಣದ 9ನೇ ಆರೋಪಿ ಅಶ್ವಥ್ ಎಂಬ ವ್ಯಕ್ತಿ ನಿರಂತರವಾಗಿ ಜೀವ ಬೆದರಿಕೆ ಹಾಕುತ್ತಿದ್ದರಿಂದಲೇ ಕೋರ್ಟ್ ಮುತ್ತಗಿಗೆ ಭದ್ರತೆ ನೀಡುವಂತೆ ಸೂಚನೆ ನೀಡಿತ್ತು. ಅಂದಿನಿಂದ ಮುತ್ತಗಿಗೆ ಮತ್ತು ಆತನ ಮನೆಗೆ ಸಿಆರ್‌ಪಿಎಫ್ ಕಮಾಂಡೋಗಳ ಬಿಗಿ ಭದ್ರತೆ ಇದೆ. ಅತ್ತ ಪ್ರಕರಣದ ವಿಚಾರಣೆಯೂ ನಡೆಯುತ್ತಿದೆ. ಈ ಮಧ್ಯೆ ಬುಧವಾರ ರಾತ್ರಿ 10.30ರ ವೇಳೆಗೆ ಮುತ್ತಗಿ ಮೊಬೈಲ್‌ಗೆ ಕರೆ ಮಾಡಿರುವ 9ನೇ ಆರೋಪಿ ಅಶ್ವಥ್, ನೀನು ಮಾಫಿ ಸಾಕ್ಷಿಯಾಗಿದ್ದು ಒಳ್ಳೆಯ ನಿರ್ಧಾರವಲ್ಲ ಎಂದಿದ್ದಾನೆ. ಈ ಕಾರಣದಿಂದ ಗುರುವಾರ ಉಪನಗರ ಠಾಣೆಗೆ ಬಂದ ಮುತ್ತಗಿ ದೂರು ನೀಡಿದ್ದಾನೆ.ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಸವರಾಜ ಮುತ್ತಗಿ, ನಾನೀಗ ಮಾಫಿ ಸಾಕ್ಷಿಯಾಗಿದ್ದೇನೆ. ಅಂದಿನಿಂದ 9ನೇ ಆರೋಪಿ ಅಶ್ವತ್ಥನಿಂದ ಬೆದರಿಕೆ ಕರೆ ಬರುತ್ತಿವೆ. ಈಗ ಬುಧವಾರ ರಾತ್ರಿ ಫೋನ್ ಮಾಡಿದ್ದಾನೆ. ನೀನು ಮಾಫಿ ಸಾಕ್ಷಿಯಾಗಿದ್ದು ತಪ್ಪು ಎಂದು ಪರೋಕ್ಷವಾಗಿ ನನಗೆ ಹಾಗೂ ಕುಟುಂಬಕ್ಕೆ ಹೆದರಿಸುತ್ತಿದ್ದಾನೆ. ನನಗೆ ಮಾನಸಿಕವಾಗಿ ತೊಂದರೆ ಆಗುತ್ತಿದೆ. ಉಳಿದೆಲ್ಲ ವಿಷಯಗಳ ಕುರಿತು ಪೊಲೀಸ್ ಮತ್ತು ಸಿಬಿಐ ಗಮನಕ್ಕೆ ತಂದಿದ್ದೇನೆ. ಅವರು ಸೂಕ್ತ ಕ್ರಮಕೈಗೊಳ್ಳುತ್ತಾರೆ ಎಂಬ ಭರವಸೆ ಇದೆ. ಬೆದರಿಕೆ ಬಗ್ಗೆ ಮತ್ತೆ ನ್ಯಾಯಾಲಯದ ಗಮನಕ್ಕೆ ತರುತ್ತೇನೆ. ಜೊತೆಗೆ 9ನೇ ಆರೋಪಿ ಜಾಮೀನು ರದ್ದುಗೊಳಿಸಲು ಅರ್ಜಿ ಸಹ ಸಲ್ಲಿಸುತ್ತೇನೆ. ತಮಗೆ ಮಾತ್ರವಲ್ಲದೇ ಪ್ರಕರಣದ ಹೋರಾಟಗಾರರಿಗೂ ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ಪರೋಕ್ಷವಾಗಿ ಹೋರಾಟಗಾರ ಬಸವರಾಜ ಕೊರವರಗೂ ಜೀವ ಬೆದರಿಕೆ ಇದೆ ಎಂದು ಮುತ್ತಗಿ ಹೇಳಿದರು.