ಸಾರಾಂಶ
ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ವೆಚ್ಚ ಹೆಚ್ಚಾಗುತ್ತಿದೆ. ಹೀಗಾಗಿ ನಮ್ಮ ಆರೋಗ್ಯದ ಕಡೆಗೆ ಗಮನ ಹರಿಸಿದರೆ ಆಸ್ಪತ್ರೆಗೆ ಹೋಗುವ ಅಗತ್ಯ ಬರುವುದಿಲ್ಲ.
- ನಟರಾಜ ಕಾಲೇಜಿನಲ್ಲಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಮೈಸೂರುನಗರದ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ರೆಡ್ಕ್ರಾಸ್ ಘಟಕ ಉದ್ಘಾಟನೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.ನಟರಾಜ ನರ್ಸಿಂಗ್ ಸ್ಕೂಲ್ ಮತ್ತು ಟಿ.ಎಸ್. ಚಂದ್ರಶೇಖರಯ್ಯ ಪ್ಯಾರಾ ಮೆಡಿಕಲ್ ಸೈನ್ಸ್ ಸಂಯೋಜಕ ಡಾ. ರಾಜೇಶ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ವೆಚ್ಚ ಹೆಚ್ಚಾಗುತ್ತಿದೆ. ಹೀಗಾಗಿ ನಮ್ಮ ಆರೋಗ್ಯದ ಕಡೆಗೆ ಗಮನ ಹರಿಸಿದರೆ ಆಸ್ಪತ್ರೆಗೆ ಹೋಗುವ ಅಗತ್ಯ ಬರುವುದಿಲ್ಲ. ಆಧುನಿಕ ಜೀವನ ಶೈಲಿ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬಿರುತ್ತದೆ ಎಂದರು.ಉತ್ತಮ ಆರೋಗ್ಯವಿದ್ದಾಗ ಮಾತ್ರ ಸುತ್ತಮುತ್ತಣ ಪರಿಸರ ಸುಂದರವಾಗಿ ಕಾಣುತ್ತದೆ. ಹವ್ಯಾಸ ಮತ್ತು ಆಹಾರ ಪದ್ಧತಿಗಳು ನಮ್ಮ ಆರೋಗ್ಯವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೊರಗಿನ ತಿನಿಸುಗಳನ್ನು ಹೆಚ್ಚು ತಿನ್ನುವುದರಿಂದ ಆಸ್ಪತ್ರೆಗೂ ಹೆಚ್ಚು ಹತ್ತಿರವಾಗುವಿರಿ. ವೈಜ್ಞಾನಿಕ ಹಳೇ ಪದ್ಧತಿಯೇ ಪ್ರಸ್ತುತ ಪಡಿಸುವುದಕ್ಕೆ ಅಗತ್ಯತೆ ಇದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಮಾತನಾಡಿ, ಆರೋಗ್ಯವೇ ಭಾಗ್ಯ ಎಂಬಂತೆ ಆರೋಗ್ಯದಿಂದ ಮಾತ್ರ ಸಂಪತ್ತು ತಾನೇ ತಾನಾಗಿ ಬರುತ್ತದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಳಜಿ ತುಂಬಾ ಮುಖ್ಯ. ರೆಡ್ ಕ್ರಾಸ್ ಘಟಕ ಇದರ ಕುರಿತಾಗಿ ಕೆಲಸ ಮಾಡುತ್ತದೆ. ನಮ್ಮ ಆರೋಗ್ಯದ ಜೊತೆಗೆ ಸಮೂಹದ ನೈರ್ಮಲ್ಯದ ಕಡೆಗೆ ಹೆಚ್ಚು ಒತ್ತನ್ನು ನೀಡಬೇಕು ಎಂದರು.ರೆಡ್ ಕ್ರಾಸ್ ಘಟಕದ ಮೂಲ ಉದ್ದೇಶವೇ ಆರೋಗ್ಯದ ಕಡೆ- ನಮ್ಮ ನಡೆ ಆಗಿದೆ. ಉಪನಿಷತ್ತಿನಲ್ಲಿ 100 ವರ್ಷ ಮನುಷ್ಯನ ಸರಾಸರಿ ವಯಸ್ಸು ಎಂದು ಹೇಳಿದೆ. ಆದರೆ ಈಗ 30-40 ವರ್ಷಕ್ಕೆ ಆಯಸ್ಸು ಮುಗಿಯುತ್ತಿರುವುದು ಶೋಚನೀಯ. ಕಷ್ಟದಲ್ಲಿರುವ ಮತ್ತೊಬ್ಬರಿಗೆ ಸಹಾಯ ಮಾಡುವುದೇ ನಿಜವಾದ ಧರ್ಮ ಎಂದು ಅವರು ತಿಳಿಸಿದರು.ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ. ಶಾರದಾ ಅಧ್ಯಕ್ಷತೆವಹಿಸಿದ್ದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಎಸ್. ಲತಾ ಇದ್ದರು. ಪ್ರೀತಿ ಪ್ರಾರ್ಥಿಸಿದರು. ರಚನಾ ಸ್ವಾಗತಿಸಿದರು, ಅನುಷಾ ನಿರೂಪಿಸಿದರೆ, ಐಶ್ವರ್ಯ ವಂದಿಸಿದರು.