ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಇಂದಿನ ಯುವ ಜನತೆ ತಮ್ಮ ಅಮೂಲ್ಯವಾದ ಆರೋಗ್ಯ ಹಾಗು ಮನಸ್ಸನ್ನು ರಕ್ಷಿಸಿಕೊಳ್ಳುವ ಗುರುತರ ಜವಾಬ್ದಾರಿ ಇದೆ ಎಂದು ಕೊಡ್ಲಿಪೇಟೆ ಪ್ರೌಢಶಾಲೆಯ ಶಿಕ್ಷಕ ಚಂದ್ರಶೇಖ್ ಅಡ್ಮಿನಿ ಅಭಿಪ್ರಾಯ ಪಟ್ಟರು.ಕೊಡ್ಲಿಪೇಟೆ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜನ ಜಾಗೃತಿ ವೇದಿಕೆ ಮತ್ತು ಕೊಡ್ಲಿಪೇಟೆ ವಿದ್ಯಾಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನ ಜಾಗೃತಿ ವೇದಿಕೆಯ ಜಿಲ್ಲಾ ಸಮಿತಿ ಸದಸ್ಯ ಭಗವಾನ್ ಗೌಡ ಮಾತನಾಡಿ, ಧರ್ಮಸ್ಥಳ ಸಂಸ್ಥೆಯು ಸಾಮಾಜಿಕ ಜಾಗೃತಿ, ಧಾರ್ಮಿಕ ಕಾರ್ಯಗಳ ಜೊತೆಯಲ್ಲಿ ಯುವ ಜನಾಂಗದವರು ದುಶ್ಚಟಗಳಿಂದ ಮುಕ್ತಗೊಳಿಸುವ ಉದ್ದೇಶದಿಂದ ನಿರಂತರವಾಗಿ ಮಧ್ಯವರ್ಜನ ಶಿಬಿರದ ಮೂಲಕ ಜನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ ಎಂದರು.ಬ್ಯಾಡಗೊಟ್ಟ ಗ್ರಾ.ಪಂ.ಮಾಜಿ ಅಧ್ಯಕ್ಷ ಮಹಮ್ಮದ್ ಹನೀಪ್ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾದರೆ ಅವರ ಶೈಕ್ಷಣಿಕ ಜೀವನವೂ ಬಲಿಯಾಗುವುದರ ಜೊತೆಯಲ್ಲಿ ವಿದ್ಯಾರ್ಥಿ ಭವಿಷ್ಯವೇ ದುಸ್ತರವಾಗುತ್ತದೆ ಎಂದರು.
ಕೊಡ್ಲಿಪೇಟೆ ಉಪ ಠಾಣೆಯ ಸಿಬ್ಬಂದಿ ಮುನಾವರ್ ಪಾಷ, ಗ್ರಾಮಾಭಿವೃದ್ಧಿ ಸಮಿತಿಯ ಮಹೇಶ್, ಕೊಡ್ಲಿಪೇಟೆ ವಲಯದ ಮೇಲ್ವಿಚಾರಕಿ ಶಾಲಿನಿ, ಸೇವಾ ಪ್ರತಿನಿಧಿಗಳಾದ ರಾಣಿ, ಫಾತಿಮಾ, ಸುಮಿತ್ರ, ಶಾಲಾ ಶಿಕ್ಷಕ ಸುನಿಲ್ ಮುಂತಾದವರು ಇದ್ದರು.