ಸಮಾಜ ಕಟ್ಟುವ ಕಡೆ ಯುವಜನತೆ ಗಮನ ಹರಿಸಿ: ತಹಸೀಲ್ದಾರ್ ಸಿಗ್ಬತ್ತುಲ್ಲಾ ಕರೆ

| Published : Nov 09 2024, 01:07 AM IST

ಸಾರಾಂಶ

ಶ್ರೀಲಂಕಾದಲ್ಲಿ ತಮಿಳರ ಮೇಲೆ ದಾಳಿ ಮಾಡಿದರೆ, ತಮಿಳುನಾಡಿನಲ್ಲಿ ವ್ಯಾಪಕ ಪ್ರತಿಭಟನೆಗಳು ಆಗಲಿವೆ. ತಮಿಳುನಾಡು, ಕೇರಳ, ಮಹಾರಾಷ್ಟ ರಾಜ್ಯಗಳಲ್ಲಿ ಆಯಾಯ ಭಾಷೆ ಹೊರತು ಪಡಿಸಿದರೆ ಅನ್ಯಭಾಷೆ ಮಾತಾಡಲ್ಲ. ಎಲ್ಲಾ ವರ್ಗದವರು ದಿನಪತ್ರಿಕೆಗಳನ್ನು ಖರೀದಿ ಮಾಡಿ ಓದುತ್ತಾರೆ.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಇಂದಿನ ಕಾಲದಲ್ಲಿ ಅನೇಕ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇದರಿಂದ ಸಮಾಜ ಸ್ವಾಸ್ಥ್ಯ ಹಾಳಾಗುತ್ತಿದೆ. ಆದ್ದರಿಂದ ಯುವಕರು ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿದ್ದು, ಸಮಾಜ ಕಟ್ಟುವ ಕಡೆ ಗಮನ ಹರಿಸಬೇಕು ಎಂದು ತಹಸೀಲ್ದಾರ್ ಸಿಗ್ಬತ್ತುಲ್ಲಾ ಕರೆ ನೀಡಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ಯುವಕರೇ ಹೆಚ್ಚು ಸಮಾಜ ಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗಿ ಜೈಲುವಾಸ ಅನುಭವಿಸುತ್ತಿದ್ದಾರೆ. ಇದರಿಂದ ತಂದೆ, ತಾಯಿ ಸೇರಿದಂತೆ ಕುಟುಂಬವು ಕಣ್ಣೀರು ಸುರಿಸುವುದು ಬೇಡ. ಕಷ್ಟಪಟ್ಟು ಓದಿಸಿ, ದೊಡ್ಡವರಾದ ಮೇಲೆ ಕೆಲ ಮಕ್ಕಳು ಪೋಷಕರನ್ನು ಅನಾಥಾಶ್ರಮಗಳಿಗೆ ಇರಿಸಿರುವುದು ಬಹಳ ನೋವು ತಂದಿದೆ. ಮಕ್ಕಳು ಯಾವುದೇ ಕಾರಣಕ್ಕೂ ಹಿರಿಯರನ್ನು ಅನಾಥಾಶ್ರಮಗಳಿಗೆ ಕಳಿಸಬಾರದು. ಸಮಾಜ ಬಾಹಿರ ಚಟುವಟಿಕೆಗಳಿಂದ ದೂರ ಇರಬೇಕು. ಸಮಾಜ ಕಟ್ಟುವಲ್ಲಿ ಗಮನ ಹರಿಸಬೇಕು. ಇದರಿಂದ ನವ ಸಮಾಜ ನಿರ್ಮಾಣ ಆಗಲು ಸಾಧ್ಯ. ಶಾಲೆ, ಕಾಲೇಜು, ಕಚೇರಿಗಳಲ್ಲಿ ಹಾಗೂ ವ್ಯವಹಾರಿಕವಾಗಿ ಎಲ್ಲರೂ ಕನ್ನಡ ಭಾಷೆಯಲ್ಲಿ ವ್ಯವಹರಿಸಬೇಕು ಎಂದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ.ಎಂ.ನಯಾಜ್ ಅಹಮದ್ ಮಾತನಾಡಿ, ಶ್ರೀಲಂಕಾದಲ್ಲಿ ತಮಿಳರ ಮೇಲೆ ದಾಳಿ ಮಾಡಿದರೆ, ತಮಿಳುನಾಡಿನಲ್ಲಿ ವ್ಯಾಪಕ ಪ್ರತಿಭಟನೆಗಳು ಆಗಲಿವೆ. ತಮಿಳುನಾಡು, ಕೇರಳ, ಮಹಾರಾಷ್ಟ ರಾಜ್ಯಗಳಲ್ಲಿ ಆಯಾಯ ಭಾಷೆ ಹೊರತು ಪಡಿಸಿದರೆ ಅನ್ಯಭಾಷೆ ಮಾತಾಡಲ್ಲ. ಎಲ್ಲಾ ವರ್ಗದವರು ದಿನಪತ್ರಿಕೆಗಳನ್ನು ಖರೀದಿ ಮಾಡಿ ಓದುತ್ತಾರೆ. ಆದರೆ ಕನ್ನಡಿಗರು ಅನ್ಯ ಭಾಷೆಗಳಲ್ಲಿ ಮಾತನಾಡುತ್ತಾರೆ. ಕನ್ನಡ ಭಾಷೆಯನ್ನು ಮರೆಯುತ್ತಾರೆ. ವ್ಯಾಪಾರದ ಹೆಸರಿನಲ್ಲಿ ಅನ್ಯರಾಜ್ಯದವರು ರಾಜ್ಯಕ್ಕೆ ಆಗಮಿಸಿದ್ದಾರೆ. ಅವರ ತಿಂಡಿ, ತಿನಿಸುಗಳು, ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಬಿತ್ತನೆ ಮಾಡುತ್ತಿದ್ದಾರೆ. ಇದರಿಂದ ನಮ್ಮ ನಾಡು, ನುಡಿ, ಕಲೆ, ಸಾಹಿತ್ಯ, ಸಂಸ್ಕೃತಿ ಅವನತಿಯತ್ತ ಹೊರಟಿದೆ ಎಂದು ವಿಷಾದಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಆಫ್ಜಲ್ ಬಿಜಲಿ ಮಾತನಾಡಿ, ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ‘ಹಬ್ಬ-೨೦೨೪’ ಕಾರ್ಯಕ್ರಮ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮನೆಯಲ್ಲಿ ತಯಾರಿಸಿದ ಖಾದ್ಯಗಳ ಪ್ರದರ್ಶನ, ಸಾಮೂಹಿಕವಾಗಿ ತಿಂಡಿ, ತಿನಿಸುಗಳ ಸೇವನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬಾಗೇಪಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ವೈ.ನಾರಾಯಣ ಸ್ವದೇಶಿ ತಿಂಡಿ, ತಿನಿಸುಗಳ ಪ್ರದರ್ಶನವನ್ನು ಉದ್ಘಾಟಿಸಿದರು. ಕಾಲೇಜಿನ ಹಿರಿಯ ಗ್ರಂಥಪಾಲಕ ಡಾ.ಸಿ.ಎಸ್.ವೆಂಕಟರಾಮರೆಡ್ಡಿ, ಕಸಾಪ ತಾಲೂಕು ಅಧ್ಯಕ್ಷ ಬಿ.ಮಂಜುನಾಥ್, ಪ್ರಾಧ್ಯಾಪಕರಾದ ಬಿ.ಕೃಷ್ಣಪ್ಪ, ಶ್ರೀನಾಥ್, ವಿನೋದಮ್ಮ, ವಿಜಯಕುಮಾರ್ ಸೇರಿದಂತೆ ಹಲವರು ಇದ್ದರು.