ಸಾರಾಂಶ
ಲಾಟರಿ ಹಾವಳಿ ಹಾಗೂ ನಕಲಿ ಲಾಟರಿ ಮಾರಾಟ ತಡೆಗಟ್ಟಲು ಲಾಟರಿ ಮಾರಾಟ ಮಾಡುವ ಸ್ಥಳಗಳಲ್ಲಿ ಹೆಚ್ಚೆಚ್ಚು ಅರಿವು ಮೂಡಿಸಬೇಕು. ಗ್ರಾಮ ಪಂಚಾಯ್ತಿ, ಸ್ತ್ರೀ ಶಕ್ತಿ ಸಂಘ ಹಾಗೂ ಸ್ವಸಹಾಯ ಸಂಘಗಳ ಮೂಲಕ ಜನ ಜಾಗೃತಿ ಮೂಡಿಸಬೇಕು. ಜೊತೆಗೆ ಶಾಲಾ ಮಕ್ಕಳಿಂದ ಜಾಥಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯಲ್ಲಿ ಲಾಟರಿ ಟಿಕೆಟ್ ಮಾರಾಟದಿಂದ ಜನ ಸಾಮಾನ್ಯರಲ್ಲಿ ಕೌಟುಂಬಿಕ ಕಲಹಗಳು ಉಂಟಾಗುವುದರ ಜೊತೆಗೆ ಆರ್ಥಿಕ ನಷ್ಟಗಳು ಸಂಭವಿಸುತ್ತಿದೆ. ಲಾಟರಿ ಹಾವಳಿ ತಪ್ಪಿಸಲು ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜನ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ ಕುಮಾರ ತಿಳಿಸಿದರು.ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಅನಧಿಕೃತ ಲಾಟರಿ ಮಾರಾಟ ಮತ್ತು ಮಟ್ಕಾ ಹಾವಳಿ ನಿಯಂತ್ರಿಸುವ ಫ್ಲೈಯಿಂಗ್ ಸ್ಕ್ವಾಡ್ ಸಭೆ ನಡೆಸಿ ಮಾತನಾಡಿದರು.
ಬೇರೆ ರಾಜ್ಯಗಳಿಂದ ಅನಧಿಕೃತವಾಗಿ ಲಾಟರಿ ಟಿಕೆಟ್ ತಂದು ಜಿಲ್ಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಅನಧಿಕೃತ ಲಾಟರಿ ಟಿಕೆಟ್‌ಗೆ ಸಂಬಂಧಿಸಿದಂತೆ ಪ್ರಸ್ತುತ ವರ್ಷದಲ್ಲಿ 4 ಪ್ರಕರಣಗಳು ದಾಖಲಾಗಿವೆ. ಕಿರುಗಾವಲು ವ್ಯಾಪ್ತಿಯಲ್ಲಿ ಹೆಚ್ಚು ದೂರುಗಳು ಕೇಳಿ ಬರುತ್ತಿದೆ ಎಂದರು.ಲಾಟರಿ ಹಾವಳಿ ಹಾಗೂ ನಕಲಿ ಲಾಟರಿ ಮಾರಾಟ ತಡೆಗಟ್ಟಲು ಲಾಟರಿ ಮಾರಾಟ ಮಾಡುವ ಸ್ಥಳಗಳಲ್ಲಿ ಹೆಚ್ಚೆಚ್ಚು ಅರಿವು ಮೂಡಿಸಬೇಕು. ಗ್ರಾಮ ಪಂಚಾಯ್ತಿ, ಸ್ತ್ರೀ ಶಕ್ತಿ ಸಂಘ ಹಾಗೂ ಸ್ವಸಹಾಯ ಸಂಘಗಳ ಮೂಲಕ ಜನ ಜಾಗೃತಿ ಮೂಡಿಸಬೇಕು. ಜೊತೆಗೆ ಶಾಲಾ ಮಕ್ಕಳಿಂದ ಜಾಥಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಅನಧಿಕೃತವಾಗಿ ಲಾಟರಿ ಟಿಕೆಟ್ ಮಾರಾಟಗಾರರು ಹಾಗೂ ಲಾಟರಿ ಕೊಳ್ಳುವವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್. ನಾಗರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ತಿಮ್ಮಯ್ಯ, ಸಣ್ಣ ಉಳಿತಾಯ ಮತ್ತು ರಾಜ್ಯ ಲಾಟರಿ ಸಹಾಯಕ ನಿರ್ದೇಶಕ ಗಿರೀಶ್, ಅಭಿವೃದ್ಧಿ ಅಧಿಕಾರಿ ಶಿವಕುಮಾರ್, ವಾಣಿಜ್ಯ ತೆರಿಗೆ ಇಲಾಖೆಯ ಬಿ ಎಸ್ ಲೋಕೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.