ಸಾರಾಂಶ
ಜೋಯಿಡಾ ತಾಲೂಕಿನ ಬಿರಂಪಾಲಿ ಗ್ರಾಮದ ಅಕೋಡದ ಹತ್ತಿರ ಕಾಳಿ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದ ಯುವಕ ಶನಿವಾರ ನಾಪತ್ತೆಯಾಗಿದ್ದು, ಭಾನುವಾರ ಬೆಳಿಗ್ಗೆ 10 ಗಂಟೆಗೆ ಶವವಾಗಿ ಪತ್ತೆಯಾಗಿದ್ದಾನೆ.
ದಾಂಡೇಲಿ: ಜೋಯಿಡಾ ತಾಲೂಕಿನ ಬಿರಂಪಾಲಿ ಗ್ರಾಮದ ಅಕೋಡದ ಹತ್ತಿರ ಕಾಳಿ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದ ಯುವಕ ಶನಿವಾರ ನಾಪತ್ತೆಯಾಗಿದ್ದು, ಭಾನುವಾರ ಬೆಳಿಗ್ಗೆ 10 ಗಂಟೆಗೆ ಶವವಾಗಿ ಪತ್ತೆಯಾಗಿದ್ದಾನೆ.ಗಾಂಧಿನಗರ ನಿವಾಸಿ ನಿರೂಪಮ್ ನಾಮದೇವ ಕಾಂಬಳೆ (18) ಮೃತ ಯುವಕ.
ಶನಿವಾರ ಬೆಳಿಗ್ಗೆ ತಮ್ಮ ಸ್ನೇಹಿತರ ಜೊತೆ ಅಕೋಡದ ಕಾಳಿ ನದಿಗೆ ಸ್ನಾನಕ್ಕೆ ಹೋಗಿದ್ದ ಯುವಕ ಆಕಸ್ಮಿಕವಾಗಿ ನದಿಯಲ್ಲಿ ಈಜುತ್ತಿರುವಾಗ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದಾಂಡೇಲಿ ನಗರ ಗ್ರಾಮೀಣ ಠಾಣೆ ಪೊಲೀಸರು, ಅರಣ್ಯ ಅಧಿಕಾರಿಗಳು, ಹಳಿಯಾಳ ಅಗ್ನಿಶಾಮಕ ತಂಡ ಹಾಗೂ ರಾಫ್ಟಿಂಗ್ ತಂಡದ ಫ್ಲೈಕ್ಯಾಚರ್ ತಂಡದೊಂದಿಗೆ ಯುವಕನ ಶೋಧ ಕಾರ್ಯ ಶನಿವಾರ ತಡ ರಾತ್ರಿವರೆಗೆ ನಡೆಸಲಾಯಿತು. ಭಾನುವಾರ ಮುಂದುವರೆದ ಶೋಧ ಕಾರ್ಯದಲ್ಲಿ ಯುವಕ ನದಿಯಲ್ಲಿ ಸುಮಾರು 500 ಮೀ. ದೂರದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.ಈ ಶೋಧ ಕಾರ್ಯಾಚರಣೆಯಲ್ಲಿ ಗ್ರಾಮೀಣ ಠಾಣೆಯ ಪಿಎಸ್ಐ ಶಿವಾನಂದ ನವಲಗಿ, ಪಿಎಸ್ಐ ವೆಂಕಟೇಶ್ ತಗ್ಗಿನ ಹಾಗೂ ಜೋಯಿಡಾ ಅಗ್ನಿಶಾಮಕದಳ ಸಿಬ್ಬಂದಿ, ಅರಣ್ಯ ಅಧಿಕಾರಿಗಳು, ಫ್ಲೈ ಕ್ಯಾಚರ ರಾಫ್ಟಿಂಗ್ ನ ಚಾಂದ್ ಕುಟ್ಟಿ ಮತ್ತು ತಂಡ ಹಾಗೂ ಮಹಾನ ಅಡ್ವೆಂಚರ್ ಅಲಿ ಮತ್ತು ತಂಡ ಶೋಧ ಕಾರ್ಯ ನಿರ್ವಹಿಸಿದರು. ಈ ಕುರಿತು ದಾಂಡೇಲಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತನ ಶವ ಪರೀಕ್ಷೆಯನ್ನು ದಾಂಡೇಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಸಿ ಕುಟುಂಬಸ್ತರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯರು ಮಾಹಿತಿ ಪ್ರಕಾರ ಇದೇ ಸ್ಥಳದಲ್ಲಿ ಒಂದು ವರ್ಷ ಹಿಂದೆ ಬೆಂಗಳೂರಿನಿಂದ ಪ್ರವಾಸಕ್ಕೆ ಬಂದಿದ್ದ ಒಂದೇ ಕುಟುಂಬದ 6 ಜನ ಮುಳುಗಿ ಸಾವನಪ್ಪಿದ್ದರು.