ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠಲರಾವ್ “ಬೆಳಗಿನ ನಡೆ – ಗ್ರಾಮಗಳ ಕಡೆ” ಕಾರ್ಯಕ್ರಮ ಅಂಗವಾಗಿ ಮಂಗಳವಾರ ಹರಿಹರ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ, ಅಭಿವೃದ್ಧಿ ಕಾರ್ಯಗಳ ಪ್ರಗತಿ ಹಾಗೂ ಸಾರ್ವಜನಿಕ ಸೌಲಭ್ಯಗಳ ಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಿದ್ದಾರೆ.
- ನಂದಿಗುಡಿ, ಕುಂಬಳೂರು, ಜಿಗಳಿ, ಬೆಳ್ಳೂಡಿಯಲ್ಲಿ ಅಭಿವೃದ್ಧಿ ಪರಿಶೀಲನೆ
- - -ಕನ್ನಡಪ್ರಭ ವಾರ್ತೆ ಹರಿಹರ/ ಮಲೇಬೆನ್ನೂರು
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠಲರಾವ್ “ಬೆಳಗಿನ ನಡೆ – ಗ್ರಾಮಗಳ ಕಡೆ” ಕಾರ್ಯಕ್ರಮ ಅಂಗವಾಗಿ ಮಂಗಳವಾರ ಹರಿಹರ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ, ಅಭಿವೃದ್ಧಿ ಕಾರ್ಯಗಳ ಪ್ರಗತಿ ಹಾಗೂ ಸಾರ್ವಜನಿಕ ಸೌಲಭ್ಯಗಳ ಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಿದರು.ತಾಲೂಕಿನ ಕುಂಬಳೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಅವರು, ಪಂಚಾಯಿತಿ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು. ಬಳಿಕ ಗ್ರಾಮ ಗ್ರಂಥಾಲಯಕ್ಕೆ ಭೇಟಿ ನೀಡಿ, ಗ್ರಂಥಾಲಯವನ್ನು ಆಕರ್ಷಕವಾಗಿಸುವ ಉದ್ದೇಶದಿಂದ ಬಣ್ಣ ಬರೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಳೇ ಗ್ರಾ ಪಂ ಕಟ್ಟಡ ತೆರವುಗೊಳಿಸಿ ಅಂಗನವಾಡಿ ಕಟ್ಟಡ ನಿರ್ಮಿಸಲು, ಹೆಚ್ಚುವರಿ ಸಭಾಂಗಣದಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಳಾಂತರಕ್ಕೆ ಸೂಚಿಸಿದರು.
ಗ್ರಾಮ ಸರ್ವೆ ನಂಬರ್ 196ರ ಸರ್ಕಾರಿ ಜಾಗದಲ್ಲಿ ನಡೆದಿರುವ ಒತ್ತುವರಿ ಕುರಿತು ಸ್ಥಳ ಪರಿಶೀಲನೆ ನಡೆಸಿ, ಸದರಿ ಸ್ಥಳದಲ್ಲಿ ಸಮುದಾಯದ ಇಂಗುಗುಂಡಿ ನಿರ್ಮಾಣ ಮಾಡುವಂತೆ ಸೂಚಿಸಿದರು. ಜೊತೆಗೆ ಗ್ರಾಮ ಪಂಚಾಯಿತಿ ಖಾಲಿ ಜಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಉಪ ಕೇಂದ್ರ ಸ್ಥಾಪಿಸುವ ಅಗತ್ಯವಿದೆ ಎಂದರು.ಜಿಗಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಲ್ಲಿನ ಹಾಲು ಉತ್ಪಾದಕರ ಘಟಕ ವೀಕ್ಷಿಸಿದರು. ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಚಿಣ್ಣರಿಗೆ ಮುದ ನೀಡುವಂತೆ ಮಕ್ಕಳಸ್ನೇಹಿ ಬಣ್ಣ ಬರೆಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿದರು.
ನಂದಿಗುಡಿ ಗ್ರಾಪಂನ ಮೊರಾರ್ಜಿ ದೇಸಾಯಿ ವಸತಿಯುತ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಆತ್ಮೀಯ ಸಂವಾದ ನಡೆಸಿದರು. ಶಾಲೆಯ ಮೂಲಸೌಕರ್ಯಗಳನ್ನು ಪರಿಶೀಲಿಸಿ, ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗಾಗಿ ಉದ್ಯಾನವನ ನಿರ್ಮಿಸಲು ಸಲಹೆ ನೀಡಿದರು. ಅಂಗನವಾಡಿಗಳ ಸುತ್ತ ಸ್ವಚ್ಚತೆ ಪರಿಶೀಲಿಸಿದರು.ಅಂತಿಮವಾಗಿ ಬೆಳ್ಳೂಡಿ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಡೆಯುತ್ತಿರುವ ಕಾಲುವೆ ಹೂಳೆತ್ತುವ ಕಾಮಗಾರಿ ವೀಕ್ಷಿಸಿದರು. ಕಾಮಗಾರಿಯಲ್ಲಿ ತೊಡಗಿರುವ ಕೂಲಿಕಾರರೊಂದಿಗೆ ಸ್ವತಃ ಪಾಲ್ಗೊಂಡು, ಕಾಮಗಾರಿ ಪ್ರಗತಿ ಕುರಿತು ಮಾಹಿತಿ ಪಡೆದರು. ಜೊತೆಗೆ ಕೂಲಿಕಾರರ ಆರೋಗ್ಯದ ಕಾಳಜಿ ಮತ್ತು ಸುರಕ್ಷತಾ ಕ್ರಮಗಳ ಕುರಿತು ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಕೆ.ಮಧು, ತಾ.ಪಂ. ಇಒ ಬಸವರಾಜ್, ನರೇಗಾ ಸಹಾಯಕ ನಿರ್ದೇಶಕ ಸುನೀಲ್, ಪಿಡಿಇ ನರಸಿಂಹಮೂರ್ತಿ, ಉಮೇಶ್, ಶಿಲ್ಪ ,ತಾಂತ್ರಿಕ ಅಧಿಕಾರಿ, ಗ್ರಾಪಂ ಉಪಾಧ್ಯಕ್ಷರು, ಸದಸ್ಯರು, ತಾಲೂಕು ಅಧಿಕಾರಿಗಳು, ಗ್ರಾಪಂಗಳ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.- - -
(ಬಾಕ್ಸ್) * ವಿದ್ಯಾರ್ಥಿಗಳು, ಪೋಷಕರ ಆರೋಪ- ಸೂಚನೆಮಲೇಬೆನ್ನೂರು ಸಮೀಪದ ನಂದಿಗುಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ದಾಸ್ತಾನು ಮಾಡಿದ ತರಕಾರಿಗಳನ್ನು ವೀಕ್ಷಿಸಿದ ಸಿಇಒ ಅವರು ಕ್ರಿಮಿ, ಕೀಟಗಳು, ಜಿರಲೆ- ಹಲ್ಲಿಗಳಿಂದ ಆಹಾರ ಪದಾರ್ಥ, ತರಕಾರಿಗಳ ರಕ್ಷಣೆ ಮಾಡಲು ರ್‍ಯಾಕರ್ ಮೇಲೆ ಸಂಗ್ರಹಿಸಲು ಸೂಚಿಸಿದರು.
ಬಾಲಕರಿಗೆ 3 ತಿಂಗಳಿಗೊಮ್ಮೆ, ಬಾಲಕಿಯರಿಗೆ ಪ್ರತಿ ತಿಂಗಳೂ ಆರೋಗ್ಯ ಪರೀಕ್ಷೆ ನಡೆಸಬೇಕು. ಬಾಸ್ಕೆಟ್ ಬಾಲ್ ಕೋರ್ಟ್‌ಗೆ ಮೆಸ್ ಹಾಕಬೇಕು, ಒಣಗಿದ ಗಿಡಗಳಿಗೆ ಬೆಂಕಿಹಾಕಿ ಪರಿಸರಕ್ಕೆ ಹಾನಿ ಮಾಡದೇ ತ್ಯಾಜ್ಯ ಘಟಕಕ್ಕೆ ವಿಲೇಗೊಳಿಸಬೇಕು ಎಂದು ಪ್ರಾಚಾರ್ಯ ಕುಮಾರ್ ಜೋಗಾರ್ ಅವರಿಗೆ ತಿಳಿಸಿದರು.ಶಾಲೆಯ ವಿದ್ಯಾರ್ಥಿಗಳು ಕನ್ನಡ ಮತ್ತು ಇಂಗ್ಲಿಷ್ ಪುಸ್ತಕವನ್ನು ಓದುವ ಕ್ರಮ ಪರಿಶೀಲಿಸಿದರು. ಮಕ್ಕಳಿಗೆ ನೀತಿ ಪಾಠಗಳ ಹೇಳಿದರು. ಮಕ್ಕಳು ಮೊರಾರ್ಜಿ ಶಾಲೆ ವಸತಿ ನಿಲಯದಲ್ಲಿ ಬಿಸಿನೀರು ಬರೋದಿಲ್ಲ, ಶಿಕ್ಷಕರು ಬೈತಾರೆ, ಹೊಡಿತಾರೆ, ಈ ತಿಂಗಳು ಆರೋಗ್ಯ ಪರೀಕ್ಷೆಯೇ ನಡೆಸಿಲ್ಲ ಎಂದು ದೂರಿದರು.
ಪೋಷಕರು ಸಹ ಮಾತನಾಡಿ, ಶಾಲೆ ಪ್ರಾಚಾರ್ಯರು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಸ್ಪಂದಿಸಬೇಕು, ವಾರ್ಡನ್ ವರ್ಗ ಮಾಡಿ ಬೇರೆಯವರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಿ, ಕೆಲವು ಮಕ್ಕಳಿಗೆ ಭಯ ಹುಟ್ಟಿಸಲಾಗುತ್ತದೆ ಎಂದು ದೂರಿದ್ದು ವಿಶೇಷವಾಗಿತ್ತು.ಎಕ್ಕೆಗೊಂದಿ ಗ್ರಾಮದ ೧ ಕಿಮೀ ದೂರದ ನರೇಗಾ ಯೋಜನೆಯ ಚರಂಡಿ ಕಾಮಗಾರಿಯನ್ನು ವೀಕ್ಷಣೆ ಮಾಡಿ ಕೃಷಿ ಕಾರ್ಮಿಕರ ಜತೆ ಚರ್ಚಿಸಿದರು. ಸ್ವತಃ ಸಲಿಕೆ ಹಿಡಿದು ಚರಂಡಿಯಲ್ಲಿನ ಮಣ್ಣು ತೆಗೆದು ಕೆಲಸ ನಿರ್ವಹಿಸಲು ಸಲಹೆ-ಸೂಚನೆ ನೀಡಿದರು.
- - --23HRR.03:
ಹರಿಹರ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠಲ ರಾವ್ ಬೇಟಿ ನೀಡಿ ಅಭಿವೃದ್ಧಿ ಕಾರ್ಯಗಳ ಪ್ರಗತಿ ಹಾಗೂ ಸಾರ್ವಜನಿಕ ಸೌಲಭ್ಯಗಳ ಸ್ಥಿತಿ ಪರಿಶೀಲಿಸಿದರು.