ಸಾರಾಂಶ
ಬೆಂಗಳೂರು : ರಾಜ್ಯಾದ್ಯಂತ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಮಾಹಿತಿ ನೀಡಲು ನಿರಾಕರಿಸಿರುವ ಘಟನೆಗಳು ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ನಡೆದಿವೆ.
ಸಮೀಕ್ಷೆದಾರರು ಮಾಹಿತಿಗಾಗಿ ಮನೆ ಮನೆಗೆ ತೆರಳಿದಾಗ ನಮಗೆ ಮಾಹಿತಿ ನೀಡಲು ಇಷ್ಟವಿಲ್ಲ ಎಂದು ಮನೆ ಮುಖ್ಯಸ್ಥರು ಹೇಳಿ ಕಳುಹಿಸಿದ್ದಾರೆ. ಈ ಪೈಕಿ ಉತ್ತರ ಭಾರತದಿಂದ ವಲಸೆ ಬಂದಿರುವವರು ಮತ್ತು ಇತರರೂ ಸೇರಿದ್ದಾರೆ. ಇನ್ನೂ ಕೆಲವರು ತಮ್ಮ ತಂದೆ-ತಾಯಿ, ಪೋಷಕರು ಊರುಗಳಲ್ಲಿ ಇರುವ ಕಾರಣ, ಅಲ್ಲೇ ಮಾಹಿತಿ ಒದಗಿಸುವುದಾಗಿ ಹೇಳಿ ಕಳುಹಿಸುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ನಗರ ಜಿಲ್ಲಾಧಿಕಾರಿ ಜಿ. ಜಗದೀಶ್, ಸಮೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸಿರುವ ಘಟನೆಗಳು ವರದಿಯಾಗಿವೆ. ಒಟ್ಟಾರೆ ಸಂಖ್ಯೆಯಲ್ಲಿ ಶೇ.1ರಷ್ಟು ಜನ ಸಮೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸುತ್ತಿದ್ದಾರೆ. ಸಮೀಕ್ಷೆಯಾಗದ ಮನೆಗಳ ಯುಎಚ್‌ಐಡಿ ನಂಬರ್ ಅನ್ನು ಸಮೀಕ್ಷೆದಾರರು ನೋಟ್ ಮಾಡಿಕೊಳ್ಳುತ್ತಿದ್ದಾರೆ. ಅಂತಹ ಮನೆಗಳಿಗೆ ಮೇಲ್ವಿಚಾರಕರು ಭೇಟಿ ನೀಡಿ ಪರಿಶೀಲನೆ ನಡೆಸಿ, ಖಚಿತಪಡಿಸಿಕೊಳ್ಳುತ್ತಾರೆ. ಸಮೀಕ್ಷೆಯಲ್ಲಿ ಭಾಗವಹಿಸುವುದು ಸ್ವಇಚ್ಛೆಯ ವಿಚಾರ ಎಂದು ಹೇಳಿದರು.
ಜಿಲ್ಲೆಯಲ್ಲಿ ಮೊದಲ ದಿನ 400 ಮನೆಗಳ ಸಮೀಕ್ಷೆಯಾಗಿದ್ದು, ಎರಡನೇ ದಿನ 8,000 ಹಾಗೂ ಮೂರನೇ ದಿನ 16 ಸಾವಿರ ಮನೆಗಳ ಸಮೀಕ್ಷೆಯಾಗಿದೆ. ಸಮೀಕ್ಷೆದಾರರ ಜತೆ ಸ್ವತಃ ನಾನೇ ಕೆಲ ಮನೆಗಳಿಗೆ ಭೇಟಿ ನೀಡಿದೆ. ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದು ತಿಳಿಸಿದರು.
ನಿಗದಿತ ಕಾಲಮಿತಿಯಲ್ಲಿ ಸಮೀಕ್ಷೆ ಪೂರ್ಣಗೊಳಿಸಬೇಕಿರುವ ಕಾರಣ, ರಜಾ ದಿನವಾದ ಭಾನುವಾರವೂ ಸಮೀಕ್ಷೆ ನಡೆಸಲಾಗಿದೆ.