ಕನ್ನಡಪ್ರಭ ವಾರ್ತೆ ಬೆಂಗಳೂರು ನಗರದ ಬನಶಂಕರಿ 6ನೇ ಹಂತದ ಲಿಂಗಧೀರನಹಳ್ಳಿಯಲ್ಲಿ ದ್ವಾರಕನಾಥ ಗುರೂಜಿ ಅವರ ಆಶಯದಂತೆ ಶ್ರೀ ಷಣ್ಮುಖ ಸುಬ್ರಮಣ್ಯ ದೇವಾಲಯ ನಿರ್ಮಾಣಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾನುವಾರ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ದ್ವಾರಕನಾಥ್ ಅವರು ಸುಬ್ರಹ್ಮಣ್ಯ ದೇವಾಲಯ ನಿರ್ಮಾಣದ ವಿಚಾರ ಹೇಳುತ್ತಲೇ ಇದ್ದರು. ನಾನು ಸಂದರ್ಭ ಬರಲಿ ಎಂದು ಹೇಳಿದ್ದೆ. ಈಗ ಸಂದರ್ಭ ಬಂದಿದೆ. ದ್ವಾರಕನಾಥ್ ಅವರು ನನಗೆ ಪೂಜ್ಯ ಗುರು ಸಮಾನರು. ಅವರ ಕುಟುಂಬ ಬಹಳ ಉತ್ತಮವಾಗಿ ಬೆಳೆಯುತ್ತಿದೆ. ಶಿವನ ಮೂರನೇ ಕಣ್ಣಿನ ತೇಜಸ್ಸಿನಿಂದ ಹುಟ್ಟಿದವನು ಸುಬ್ರಹ್ಮಣ್ಯ. ಅವನ ಕೃಪೆ ಎಲ್ಲರ ಮೇಲಿರಲಿ. ಒಬ್ಬರಿಂದಲೇ ದೇವಸ್ಥಾನ ಕಟ್ಟಲು ಸಾಧ್ಯವಿಲ್ಲ. ಎಲ್ಲರೂ ಕೈ ಜೋಡಿಸಿದರೆ ಮಾತ್ರ ಸಾಧ್ಯ. ಇದು ಜನರ, ನಿಮ್ಮ ದೇವಾಲಯ ಆಗಬೇಕು ಎಂದರು.ದೇವಾಲಯ ಎಂದರೆ ಭಕ್ತಿ, ಶಕ್ತಿ, ಸಂಸ್ಕಾರ, ಮತ್ತು ಧರ್ಮದ ನೆಲೆ. ಭಕ್ತ ಹಾಗೂ ಭಗವಂತನ ವ್ಯವಹಾರ ನಡೆಯುವ ಸ್ಥಳ. ನಮ್ಮ ವೀರ ಗಂಗಾಧರ ಅಜ್ಜಯ್ಯನವರು ಮಾನವ ಧರ್ಮಕ್ಕೆ ದೇವರು, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಅಂತ ಘೋಷಣೆ ಮಾಡಿದ್ದಾರೆ. ಕಲ್ಲು, ಗೋಡೆ, ಮನುಷ್ಯ ಹೀಗೆ ಪಶುಗಳಲ್ಲೂ ದೈವ ಸ್ವೂರಪವಿದೆ. ಕಾಯಕವೇ ಕೈಲಾಸ ಎಂದು ಬಸವಣ್ಣ ಹೇಳಿದ್ದಾರೆ. ವಿಧಾನಸೌಧದ ಮೇಲೆ ಸರ್ಕಾರದ ಕೆಲಸ ದೇವರ ಕೆಲಸ ಎಂದು ಬರೆದಿದ್ದಾರೆ. ಅಂದರೆ ದೇವರನ್ನು ಯಾವೆಲ್ಲಾ ರೀತಿಯಲ್ಲಿ ಕಾಣಬಹುದು ಎನ್ನುವುದಕ್ಕೆ ಉದಾಹರಣೆಯಷ್ಟೆ. ಧರ್ಮ ಯಾವುದಾದರೂ ತತ್ವ ಒಂದೇ. ನಾಮ ಯಾವುದಾದರೂ ದೈವ ಒಂದೇ. ಪೂಜೆ ಯಾವುದಾದರೂ ಭಕ್ತಿ ಒಂದೇ. ಕರ್ಮ ಯಾವುದಾದರೂ ನಿಷ್ಠೆ ಒಂದೇ. ದೇವರೊಬ್ಬ ನಾಮ ಹಲವು. ಇದನ್ನು ಎಲ್ಲರೂ ಅರ್ಥಮಾಡಿಕೊಂಡು ಸಾಗಬೇಕು ಎಂದು ಹೇಳಿದರು.
ಯಾರು ಧರ್ಮವನ್ನ ಕಾಪಾಡುತ್ತಾರೋ ಧರ್ಮವು ಅವರನ್ನ ಕಾಪಾಡುತ್ತದೆ. ಹಿಂದೂ, ಕ್ರೈಸ್ತ, ಮುಸಲ್ಮಾನ, ಸಿಖ್, ಜೈನ ಹೀಗೆ ಯಾವುದೇ ಧರ್ಮ, ಜಾತಿಯವರಾಗಲಿ. ಅವರವರ ಧರ್ಮ, ಪದ್ಧತಿಯನ್ನ ಕಾಪಾಡಿಕೊಳ್ಳಬೇಕು. ಎಷ್ಟೇ ನದಿಗಳು ಹರಿದರೂ ಕೊನೆಗೆ ಸಮುದ್ರಕ್ಕೆ ಸೇರುತ್ತವೆ. ಅದೇ ರೀತಿ ನಾವು ಯಾವುದೇ ಜಾತಿ, ಧರ್ಮದಲ್ಲಿ ಪೂಜೆ ಮಾಡಿದರು ಆ ಭಗವಂತನಿಗೆ ಸೇರಲಿದೆ ಎಂದರು. ಕಾರ್ಯಕ್ರಮದಲ್ಲಿ ದ್ವಾರಕನಾಥ ಗುರೂಜಿ, ಶಾಸಕ ಎಸ್.ಟಿ.ಸೋಮಶೇಖರ್, ಸಂಸದ ಡಾ.ಕೆ.ಸುಧಾಕರ್ ಹಾಜರಿದ್ದರು.ದ್ವಾರಕನಾಥ್ ಹೇಳಿದ ಭವಿಷ್ಯ ಮುಚ್ಚಿಟ್ಟ ಸಿಎಂ
ದ್ವಾರಕನಾಥ್ ಅವರು ಹಿಂದೆ ಒಂದು ಭವಿಷ್ಯ ನುಡಿದಿದ್ದರು. ಅದನ್ನು ನಾನು ಇಲ್ಲಿ ಹೇಳಿದರೆ ದೊಡ್ಡ ಸುದ್ದಿಯಾಗುತ್ತದೆ ಎಂದು ಇದೇ ವೇಳೆ ಹೇಳಿದ ಮುಖ್ಯಮಂತ್ರಿ ಡಿ.ಕೆಶಿವಕುಮಾರ್ ಆ ಭವಿಷ್ಯವನ್ನು ಬಹಿರಂಗಪಡಿಸಲಿಲ್ಲ. ನನಗೆ ಸಿ.ವಿ.ಶಾಸ್ತ್ರೀ ಅವರು ದ್ವಾರಕನಾಥ್ ಅವರನ್ನು ಪರಿಚಯಿಸಿದರು. ಮೂವತ್ತೈದು ವರ್ಷದಿಂದಲೇ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ನನ್ನ ಹಾಗೂ ಅವರ ನಡುವೆ ನಡೆದ ವ್ಯವಹಾರಗಳು, ಚಟುವಟಿಕೆಗಳು, ಅವರು ಕೊಟ್ಟಂತ ಮಾರ್ಗದರ್ಶನದ ಎಲ್ಲಾ ಸನ್ನಿವೇಶಗಳನ್ನು ಹೇಳಿದರೆ ಒಂದು ದೊಡ್ಡ ಚರಿತ್ರೆಯ ಪುಸ್ತಕವನ್ನೇ ಬರೆಯಬಹುದು ಎಂದರು.
ನಾನು ಸಾಮಾನ್ಯ ಮನುಷ್ಯ. ದೇವರು ನನ್ನನ್ನು ನಡೆಸಿಕೊಳ್ಳುತ್ತಿದ್ದಾನೆ. ಈಗ ಸುಬ್ರಹ್ಮಣ್ಯ ದೇವರೇ ಸಿಎಂ ಡಿ.ಕೆ.ಶಿವಕುಮಾರ್ ಅವರ ರೂಪದಲ್ಲಿ ಬಂದು ದೇವಾಲಯ ನಿರ್ಮಾಣಕ್ಕೆ ಜಾಗ ಕೊಡಿಸಿದ್ದಾನೆ. ರಾಮ ಅಯೋಧ್ಯೆ ಸಂಪಾದಿಸಿದಂತೆ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕವನ್ನು ಸಂಪಾದಿಸಿದ್ದಾರೆ. ಅವರಿಗೆ ಇರುವ ದೂರದೃಷ್ಟಿ ಯಾವ ರಾಜಕಾರಣಿಗೂ ಇಲ್ಲ. ಅವರು ಸಿಎಂ ಆಗುತ್ತಾರೆ ಎಂದು ಹೇಳಿದ್ದೆ, ಆಗಿದ್ದಾರೆ.
-ದ್ವಾರಕನಾಥ ಗುರೂಜಿ