ಸಾರಾಂಶ
ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ವಿರುದ್ಧ ಮತ್ತೊಂದು ಭೂ ಅಕ್ರಮದ ಆರೋಪ ಕೇಳಿ ಬಂದಿದ್ದು, ಮುಡಾಗೆ ಸೇರಿದ 20 ಗುಂಟೆ ಜಾಗವನ್ನು ಪಾರ್ವತಿ ಅವರು 2023ರ ಸೆಪ್ಟೆಂಬರ್ 29ರಂದು ರಿಜಿಸ್ಟ್ರಾರ್ ಮೂಲಕ ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತ ಗಂಗರಾಜು ಆಪಾದಿಸಿದ್ದಾರೆ.
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ವಿರುದ್ಧ ಮತ್ತೊಂದು ಭೂ ಅಕ್ರಮದ ಆರೋಪ ಕೇಳಿ ಬಂದಿದ್ದು, ಮುಡಾಗೆ ಸೇರಿದ 20 ಗುಂಟೆ ಜಾಗವನ್ನು ಪಾರ್ವತಿ ಅವರು 2023ರ ಸೆಪ್ಟೆಂಬರ್ 29ರಂದು ರಿಜಿಸ್ಟ್ರಾರ್ ಮೂಲಕ ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತ ಗಂಗರಾಜು ಆಪಾದಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೈಸೂರಿನ ಹೆಬ್ಬಾಳ್ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಿರುವ ಕೆಆರ್‌ಎಸ್ ರಸ್ತೆಯಲ್ಲಿರುವ ಸರ್ವೇ ನಂಬರ್ 454ರ ಗಣೇಶ್ ದೀಕ್ಷಿತ್ ಎಂಬವರಿಗೆ ಸೇರಿದ 4 ಎಕರೆ 11 ಗುಂಟೆ ಜಾಗದಲ್ಲಿ 20 ಗುಂಟೆ ಜಾಗವನ್ನು ಪಾರ್ವತಿ ಅವರು, ₹1.85 ಕೋಟಿಗೆ ಖರೀದಿಸಿದ್ದಾರೆ. 21,771,99 ಚದರಡಿ ಜಾಗವನ್ನು (20 ಗುಂಟೆ) ರಿಜಿಸ್ಟರ್ ಮಾಡಿಸಿಕೊಂಡಿದ್ದು, ಅದರಲ್ಲಿ 8998 ಚದರಡಿ ಜಾಗ ರಸ್ತೆ ಮತ್ತು ಪೈಪ್‌ಲೈನ್‌ಗೆ ಸೇರಿದ್ದ ಜಾಗವಾಗಿತ್ತು. ಅದನ್ನು ಸೇರಿಸಿಕೊಂಡು ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದರು.
ಈ ಸಂಬಂಧ ನಾನು ಆರ್‌ಟಿಐ ಅಡಿಯಲ್ಲಿ ಅರ್ಜಿ ಹಾಕುತ್ತಿದ್ದಾಗ ಎಚ್ಚೆತ್ತ ಪಾರ್ವತಿ ಅವರು, 2024 ಆಗಸ್ಟ್ 31ರಂದು ಮತ್ತೆ ತಿದ್ದುಪಡಿ ಮಾಡಿಸಿದ್ದು, ಮುಡಾ ಜಾಗವನ್ನು ಬಿಟ್ಟು ಇನ್ನುಳಿದ 12,782 ಚದರಡಿ ಜಾಗಕ್ಕೆ ಮಾತ್ರ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ. ಈ ಬಗ್ಗೆ ದಾಖಲೆಗಳಿದ್ದು, ರಾಜ್ಯಪಾಲರಿಗೆ ದೂರು ನೀಡುವೆ ಎಂದು ಗಂಗರಾಜು ತಿಳಿಸಿದ್ದಾರೆ.