ಸಾರಾಂಶ
ರಾಜ್ಯದಲ್ಲಿ ಉಪಚುನಾವಣೆ ಘೋಷಣೆಯಾಗಿರುವ ಮೂರು ವಿಧಾನಸಭಾ ಕ್ಷೇತ್ರಗಳ ಪೈಕಿ ಶಿಗ್ಗಾವಿ ಮತ್ತು ಸಂಡೂರು ಕ್ಷೇತ್ರಗಳಿಗೆ ಬಿಜೆಪಿಯು ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.
ಬೆಂಗಳೂರು : ರಾಜ್ಯದಲ್ಲಿ ಉಪಚುನಾವಣೆ ಘೋಷಣೆಯಾಗಿರುವ ಮೂರು ವಿಧಾನಸಭಾ ಕ್ಷೇತ್ರಗಳ ಪೈಕಿ ಶಿಗ್ಗಾವಿ ಮತ್ತು ಸಂಡೂರು ಕ್ಷೇತ್ರಗಳಿಗೆ ಬಿಜೆಪಿಯು ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.
ಶಿಗ್ಗಾವಿ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ, ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಅವರಿಗೆ ಮತ್ತು ಸಂಡೂರು ಕ್ಷೇತ್ರದಿಂದ ರಾಜ್ಯ ಬಿಜೆಪಿ ಎಸ್‌ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು ಅವರಿಗೆ ಟಿಕೆಟ್ ನೀಡಲಾಗಿದೆ.
ತೀವ್ರ ಕುತೂಹಲ ಮೂಡಿಸಿರುವ ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಜೆಡಿಎಸ್ ಪಾಲಾಗುವ ಸಾಧ್ಯತೆ ತೋರುತ್ತಿದೆ. ಬಿಜೆಪಿ ಆಕಾಂಕ್ಷಿ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರೇ ಜೆಡಿಎಸ್ ಅಭ್ಯರ್ಥಿ ಆಗುತ್ತಾರೋ ಅಥವಾ ಬೇರೆಯವರಿಗೆ ಟಿಕೆಟ್ ಲಭಿಸುವುದೋ ಕಾದು ನೋಡಬೇಕು. ಇನ್ನೆರಡು ದಿನಗಳಲ್ಲಿ ಇತ್ಯರ್ಥವಾಗುವ ನಿರೀಕ್ಷೆಯಿದೆ.
ತಮ್ಮ ಪುತ್ರ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ತಮಗೆ ಆಸಕ್ತಿ ಇಲ್ಲ, ಆತ ಸ್ಪರ್ಧಿಸುವುದಿಲ್ಲ ಎಂದು ಬಸವರಾಜ ಬೊಮ್ಮಾಯಿ ಅವರು ಪದೇ ಪದೇ ಹೇಳುತ್ತಲೇ ತೆರೆಮರೆಯಲ್ಲಿ ಪ್ರಯತ್ನ ನಡೆಸಿದ್ದರು. ಸ್ಥಳೀಯ ಮಟ್ಟದಲ್ಲಿನ ವಿರೋಧದ ನಡುವೆಯೂ ಪುತ್ರನಿಗೆ ಅಂತಿಮವಾಗಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಥಳೀಯವಾಗಿ ಹಲವು ಮುಖಂಡರು ಸ್ಪರ್ಧೆಗಾಗಿ ಪ್ರಬಲ ಇಚ್ಛೆ ವ್ಯಕ್ತಪಡಿಸಿದರೂ ಭರತ್ ಬೊಮ್ಮಾಯಿ ಪ್ರಬಲ ಅಭ್ಯರ್ಥಿ ಆಗಬಲ್ಲರು ಎನ್ನುವುದನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಸಲಹೆ ನೀಡಿದ್ದರು. ಹೀಗಾಗಿ ಹೈಕಮಾಂಡ್ 35 ವರ್ಷ ವಯಸ್ಸಿನ ಭರತ್ ಬೊಮ್ಮಾಯಿ ಅವರಿಗೆ ಮಣೆ ಹಾಕಲು ನಿರ್ಧರಿಸಿತು ಎಂದು ಮೂಲಗಳು ತಿಳಿಸಿವೆ.
ಅಲ್ಲದೆ ಕಳೆದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಮುನ್ನವೇ ಬಸವರಾಜ ಬೊಮ್ಮಾಯಿ ಅವರು ಮುಂದೆ ಉಪಚುನಾವಣೆಯಲ್ಲಿ ತಮ್ಮ ಪುತ್ರನಿಗೆ ಟಿಕೆಟ್ ನೀಡಿದರೆ ಮಾತ್ರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪರ್ಧಿಸುವುದಾಗಿ ಷರತ್ತು ವಿಧಿಸಿದ್ದರು ಎಂದೂ ಹೇಳಲಾಗುತ್ತಿದೆ.
ಇನ್ನು ಸಂಡೂರು ಎಸ್ಟಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಬಂಗಾರು ಹನುಮಂತು ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.
ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿದ ಬಂಗಾರು ಹನುಮಂತು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಳಗದಲ್ಲಿ ಗುರುತಿಸಿಕೊಂಡಿದ್ದರು. ರೆಡ್ಡಿ ಬಳ್ಳಾರಿಗೆ ಪ್ರವೇಶ ಆಗಿರುವ ಹಿನ್ನೆಲೆಯಲ್ಲಿ ಅವರ ಮಾತಿಗೆ ಬಿಜೆಪಿ ನಾಯಕರು ಸಮ್ಮತಿಸಿದ್ದಾರೆ. 2018ರಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದ ಕಾರಣಕ್ಕಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲನುಭವಿಸಿದ್ದರು. ಬಳಿಕ ಮತ್ತೆ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.