ಸಾರಾಂಶ
ಚಿಕ್ಕಬಳ್ಳಾಪುರ : ಸೆ. 12ರಂದು ನಡೆಯಲಿರುವ ಇಲ್ಲಿಯ ನಗರಸಭೆ ಅಧ್ಯಕ್ಷ ,ಉಪಾಧ್ಯಕ್ಷ ಚುನಾವಣೆಗೆ ಕಾಂಗ್ರೆಸ್ ನವರು ಬೆಂಗಳೂರಿನಲ್ಲಿರುವ ವಿಧಾನ ಪರಿಷತ್ ಸದಸ್ಯರನ್ನು ನಗರದಲ್ಲಿ ವಾಸವಿದ್ದಾರೆಂದು ಸುಳ್ಳು ದಾಖಲೆ ಸೃಷ್ಟಿಸಿ ಮತದಾರರ ಪಟ್ಟಿಗೆ ಸೇರಿಸಿರುವುದನ್ನು ವಿರೋಧಿಸಿ ಹೈಕೋರ್ಟ್ ಮೆಟ್ಟಿಲೇರುವೆ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.
ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನದ ಕಾರ್ಯಾಗಾರದಲ್ಲಿ ಮಾತನಾಡಿ, ಕಾಂಗ್ರೆಸ್ ನವರು ನಗರಸಭೆ ಅಧ್ಯಕ್ಷ , ಉಪಾಧ್ಯಕ್ಷ ಚುನಾವಣೆಯಲ್ಲಿ ಸೋಲುವ ಹತಾಶೆಯಲ್ಲಿ ಈ ರೀತಿಯಾಗಿ ವಾಮಮಾರ್ಗ ಅನುಸರಿಸುತ್ತಿದ್ದಾರೆ ಎಂದರು.
ಒಂದು ಲಕ್ಷ ಸದಸ್ಯರ ನೋಂದಣಿ ಗುರಿ
ಬಿಜೆಪಿ ಸದಸ್ಯತ್ವ ಅಭಿಯಾನದಡಿ, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷ ಜನರ ಹೆಸರು ನೋಂದಾಯಿಸುವ ಗುರಿ ಹೊಂದಿದ್ದು, ಇದಕ್ಕಾಗಿ ಕಾರ್ಯಕರ್ತರು ಶ್ರಮಿಸಬೇಕು. ಒಂದು ಪಕ್ಷಕ್ಕೆ ಆಧಾರಸ್ತಂಭವೆಂದರೆ ಅದು ಸಕ್ರಿಯ ಕಾರ್ಯಕರ್ತರು. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 2.10 ಲಕ್ಷ ಮತದಾರರಿದ್ದಾರೆ. ಮತದಾರರನ್ನು ಈಗಲೇ ಬಿಜೆಪಿಯ ಕುಟುಂಬದ ಸದಸ್ಯರನ್ನಾಗಿ ಮಾಡಲು ಇದು ಸುವರ್ಣಾವಕಾಶ ಎಂದರು. ಟೇಪ್ ಕತ್ತರಿಸುವ ಕಾಂಗ್ರೆಸ್
ಕೃಷಿ ಸಮ್ಮಾನ್, ಫಸಲ್ ಬಿಮಾ, ಜಲಜೀವನ್ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಯೋಜನೆಗಳಿಂದಾಗಿ ಬಿಜೆಪಿ ಮೇಲೆ ಜನರಿಗೆ ಹೆಚ್ಚು ವಿಶ್ವಾಸ ಮೂಡಿದೆ. ಇತ್ತೀಚೆಗೆ 121 ಕೋಟಿ ರು.ಗಳ ವೆಚ್ಚದ ವಿವಿಧ ಯೋಜನೆಗಳನ್ನು ಜಿಲ್ಲೆಗೆ ನೀಡಲಾಗಿದೆ. ಆದರೆ ಬಿಜೆಪಿ ಮಾಡಿದ ಅಭಿವೃದ್ಧಿ ಕಾರ್ಯಗಳಿಗೆ ಕಾಂಗ್ರೆಸ್ ನಾಯಕರು ಟೇಪ್ ಕತ್ತರಿಸಿ ಹೆಸರು ಪಡೆದುಕೊಳ್ಳುತ್ತಿದ್ದಾರೆ. ಆರೋಗ್ಯ ಸಚಿವರು ಈ ಕಡೆಗೆ ಬಂದಿದ್ದರೆ, ನಮ್ಮಲ್ಲಿ ಮೆಡಿಕಲ್ ಕಾಲೇಜು ಹೇಗೆ ನಿರ್ಮಿಸಲಾಗಿದೆ ಎಂದು ತೋರಿಸುತ್ತಿದ್ದೆ ಎಂದರು.
ಜಿಲ್ಲೆಯಲ್ಲಿ ಮೇಗಾ ಡೇರಿ ಮಾತ್ರ ಆಗಿದೆ. ಆದರೆ ಪ್ಯಾಕೆಟ್, ಪನೀರ್ ಘಟಕ ಆಗಿಲ್ಲ. ಐಸ್‌ಕ್ರೀಮ್ ಘಟಕವನ್ನು ಚಿಂತಾಮಣಿಗೆ ತೆಗೆದುಕೊಂಡು ಹೋಗಲಾಗಿದೆ. ಡೇರಿಯಲ್ಲಿ 5 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಉತ್ಪಾದನೆ ಹೆಚ್ಚಳವಾದರೆ ಅದಕ್ಕೆ ಯಾವುದೇ ಸೌಲಭ್ಯವಿಲ್ಲ. ರಾಜಕೀಯ ದೃಷ್ಟಿಕೋನದಿಂದ ಎಲ್ಲವನ್ನೂ ನೋಡುತ್ತಿರುವುದರಿಂದ ಹೀಗಾಗಿದೆ ಎಂದರು.
ಹೂ ಮಾರುಕಟ್ಟೆ ಜಾಗ ಸ್ಥಳಾಂತರ
ಹೂ ಬೆಳೆಗಾರ ರೈತರಿಗೆ ನಾನು ಅಗಲಗುರ್ಕಿಯ ಬಳಿ ಜಾಗ ಹಾಗೂ ಹಣ ಮಂಜೂರು ಮಾಡಿದ್ದೆ, ಆದರೆ ಕಾಂಗ್ರೆಸ್ ಸರ್ಕಾರ ಹೂ ಬೆಳೆಗಾರ ರೈತರಿಗೆ ಡೇರಿ ಬಳಿಯೇ ಮಾರುಕಟ್ಟೆಗೆ ಜಾಗ ಮಂಜೂರು ಮಾಡಿದೆ. ರೇಷ್ಮೆ ಹೈಟೆಕ್ ಮಾರುಕಟ್ಟೆ ಯೋಜನೆಯನ್ನು ಬಿಜೆಪಿ ಸರ್ಕಾರ ಮಂಜೂರು ಮಾಡಿದ್ದು, ಅದಕ್ಕಾಗಿ ಕಾಂಗ್ರೆಸ್ ನಾಯಕರು ಹೆಸರು ಪಡೆದುಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ದೂರಿದರು.
ಎತ್ತಿನಹೊಳೆ ಯೋಜನೆಯಡಿ ಕೋಲಾರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರಕ್ಕೆ ನೀರು ಬಂದಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ ಸರ್ಕಾರ 9,200 ಕೋಟಿ ರೂ. ಅನುದಾನವನ್ನು ಯೋಜನೆಗೆ ನೀಡಿದೆ. ಆದರೆ ಈ ಬಗ್ಗೆ ಕಾಂಗ್ರೆಸ್ ನಾಯಕರು ಒಂದೇ ಒಂದು ಮಾತು ಹೇಳಿಲ್ಲ. ಮನಸ್ಸು ಮಾಡಿದ್ದರೆ ಬಿಜೆಪಿ ಸರ್ಕಾರದ ಅವಧಿಯಲ್ಲೇ ಯೋಜನೆ ಉದ್ಘಾಟನೆ ಮಾಡಬಹುದಿತ್ತು. ಬೇಕಿದ್ದರೆ ಇದರ ಕೀರ್ತಿಯನ್ನು ಕಾಂಗ್ರೆಸ್ ಸರ್ಕಾರ ಪಡೆದುಕೊಳ್ಳಲಿ. ಆದರೆ ಎರಡನೇ ಹಂತದ ಕಾಮಗಾರಿಯನ್ನು ಪೂರ್ಣಗೊಳಿಸಲಿ. ಜೊತೆಗೆ ವಿನ್ಯಾಸ ಮಾಡಿದಂತೆಯೇ ಯೋಜನೆಯನ್ನು ಅನುಷ್ಠಾನ ಮಾಡಲಿ ಎಂದು ಒತ್ತಾಯಿಸಿದರು.
ಸಿಟಿ ರವಿ ಹೇಳಿಕೆ ಪರಿಗಣಿಸಿಬಿಜೆಪಿ ಸದಸ್ಯತ್ವ ಅಭಿಯಾನದ ಕಾರ್ಯಾಗಾರದ ನಂತರ ಸುದ್ದಿಗಾರರು ದೀಪಾವಳಿ ಹಬ್ಬಕ್ಕೆ ರಾಜ್ಯ ಸರ್ಕಾರ ಉರುಳುವ ಸಿಟಿ ರವಿ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಸದ ಡಾ.ಕೆ.ಸುಧಾಕರ್, ಸಿ.ಟಿ.ರವಿ ಹೇಳಿಕೆ ಗಂಭೀರವಾಗಿ ಪರಿಗಣಿಸೋದು ಒಳ್ಳೆಯದು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿದ್ದವರು. ಅವರಿಗೆ ರಾಜಕೀಯ ಬೆಳವಣಿಗೆ ಬಗ್ಗೆ ವಿಶೇಷ ಮಾಹಿತಿ ಇರಬಹುದು. ಅವರು ಲಘುವಾಗಿ ಮಾತನಾಡುವುದಿಲ್ಲ ಎಂದರು.
ಸಿಎಂ ಸಿದ್ದರಾಮಯ್ಯ ಕೆಳಗಿಳಿಸಲು ಅವರ ಅಕ್ಕಪಕ್ಕದಲ್ಲಿರುವ ಕಾಂಗ್ರೆಸ್ ನವರೇ ಖೆಡ್ಡಾ ತೋಡಿದ್ದಾರೆ. ಬಿಜೆಪಿಯವರಿಗಿಂತ ಕಾಂಗ್ರೆಸ್ ನವರೇ ಸಿದ್ದರಾಮಯ್ಯರನ್ನು ಕೆಳಗಿಳಿಸಲು ಷಡ್ಯಂತ್ರ ಮಾಡುತ್ತಿದ್ದಾರೆ. ಸಿದ್ದರಾಮಣ್ಣ ಈ ಬಗ್ಗೆ ಎಚ್ಚರಿಕೆಯಿಂದ ಇರುವುದು ಓಳ್ಳೆಯದು ಎಂದರು.
ಧರ್ಮ ರಕ್ಷಿಸುವ ಪಕ್ಷ ಬಿಜೆಪಿ
ಬಿಜೆಪಿ ಕಚೇರಿ ಸ್ಫೋಟಕ್ಕೆ ಉಗ್ರರ ಸಂಚು ವಿಚಾರವಾಗಿ ಮಾತನಾಡಿ, ಉಗ್ರರ ಟಾರ್ಗೆಟ್ ಬಿಜೆಪಿ ಹಾಗೂ ಬಿಜೆಪಿ ಮುಖಂಡರು ಆಗಿದ್ದಾರೆ. ಬಿಜೆಪಿ ದೇಶದ ಆಶಯ ಧರ್ಮ ಉಳಿಸುವ ಪ್ರಮುಖ ರಾಜಕೀಯ ಪಕ್ಷವಾಗಿದೆ.
ಉಗ್ರ ಚಟುವಟಿಕೆಗಳಿಗೆ ಸಹಕಾರ ನೀಡುವ ಪಕ್ಷ ಮೃದು ಧೋರಣೆಯ ಸರ್ಕಾರ ಬೇಕು ಎಂಬ ಚಿತಾವಣೆಯ ಭಾಗ ಇದು ಎಂದು ಹೇಳಿದರು.ಕಾರ್ಯಾಗಾರದಲ್ಲಿ ಖಾಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್, ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಬಿ.ಮುರಳಿ,ಮರಳಕುಂಟೆ ಕೃಷ್ಣಮೂರ್ತಿ,ನಗರಸಭೆ ಮಾಜಿ ಅಧ್ಯಕ್ಷೆ ಲೀಲಾವತಿ ಸ್ರೀನಿವಾಸ್, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ,ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಪ್ರಸಾದ್, ಮುಖಂಡರಾದ ಚಿನ್ನಪ್ಪರೆಡ್ಡಿ,ಚನ್ನಕೇಶವರೆಡ್ಡಿ,ಅನು ಆನಂದ್, ಸಂತೋಷ್, ಅವುಲಕೊಂಡರಾಯಪ್ಪ,ಈರ ಚಿನ್ನಪ್ಪ, ಜಿ.ಆರ್.ಶ್ರೀನಿವಾಸ್, ಕಾಳೆಗೌಡ, ರಂಗಪ್ಪ, ಮೋಚನಬಲೆ ಶ್ರೀಧರ್, ಲಕ್ಷ್ಮಣ್, ಎಸ್.ಆರ್.ಎಸ್.ದೇವರಾಜ್, ಮತ್ತಿತರರು ಇದ್ದರು.