ಸಾರಾಂಶ
‘ನಿಮ್ಮ ಬದುಕು, ಆಸ್ತಿ, ಖಾತೆಗಳ ರಕ್ಷಣೆಯೇ ನಮ್ಮ ಗ್ಯಾರಂಟಿ. ಸಾರ್ವಜನಿಕರ ಖಾಸಗಿ ಆಸ್ತಿ ರಕ್ಷಣೆಗೆ ಸರ್ಕಾರವೇ ಜನರ ಮನೆ ಬಾಗಿಲಿಗೆ ಬಂದಿದೆ.
ಬೆಂಗಳೂರು : ‘ನಿಮ್ಮ ಬದುಕು, ಆಸ್ತಿ, ಖಾತೆಗಳ ರಕ್ಷಣೆಯೇ ನಮ್ಮ ಗ್ಯಾರಂಟಿ. ಸಾರ್ವಜನಿಕರ ಖಾಸಗಿ ಆಸ್ತಿ ರಕ್ಷಣೆಗೆ ಸರ್ಕಾರವೇ ಜನರ ಮನೆ ಬಾಗಿಲಿಗೆ ಬಂದಿದೆ. ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ಆಸ್ತಿಗಳನ್ನು ಡಿಜಿಟಲೀಕರಣಗೊಳಿಸಿ ಸಾರ್ವಜನಿಕರ ಮನೆ ಬಾಗಿಲಿಗೆ ಖಾತಾ ನೀಡುವ ಕ್ರಾಂತಿಕಾರಿ ‘ಮನೆ ಮನೆಗೆ ಇ-ಖಾತಾ’ ಕಾರ್ಯಕ್ರಮಕ್ಕೆ ಪ್ರಾಯೋಗಿಕ ಚಾಲನೆ ನೀಡಿದ್ದೇವೆ’ ಎಂದು ಬೆಂಗಳೂರು ನಗರ ಅಭಿವೃದ್ಧಿ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 25 ಲಕ್ಷ ಆಸ್ತಿಗಳಿದ್ದು, ಈ ಎಲ್ಲಾ ಆಸ್ತಿಗಳ ಡಿಜಿಟಲೀಕರಣಗೊಳಿಸಿ ನಿಮ್ಮ ಮನೆ ಬಾಗಿಲಿಗೆ ನೀಡುವಂತೆ ಕ್ರಾಂತಿಕಾರಿ ಬದಲಾವಣೆ ತರಲು ತೀರ್ಮಾನಿಸಿದ್ದೇನೆ. ಕಂದಾಯ ಇಲಾಖೆಯಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಚಾಲನೆ ನೀಡುತ್ತಿದ್ದೇವೆ. ಜನರ ಹಿತ, ಬದುಕು ಹಾಗೂ ಆಸ್ತಿ ರಕ್ಷಣೆಗಾಗಿ ಕೆಲಸ ಮಾಡುತ್ತೇವೆ ಎಂದೂ ಅವರು ಭರವಸೆ ನೀಡಿದ್ದಾರೆ.
ಬಿಬಿಎಂಪಿ ಹಾಗೂ ಕಂದಾಯ ಇಲಾಖೆ ಸಹಯೋಗದಲ್ಲಿ ಬ್ಯಾಟರಾಯನಪುರದ ಸಹಕಾರನಗರ ಮೈದಾನದಲ್ಲಿ ಭಾನುವಾರ ನಡೆದ ಬೃಹತ್ ಇ ಖಾತಾ ಮೇಳ ಹಾಗೂ ಮನೆ ಮನೆಗೆ ಇ-ಖಾತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಜುಲೈ 1ರಿಂದ ಒಂದು ತಿಂಗಳ ಕಾಲ ಇ-ಖಾತಾ ಅಭಿಯಾನ ನಡೆಯಲಿದೆ. ಈ ಅಭಿಯಾನದಲ್ಲಿ ಜನರು ಭಾಗವಹಿಸಿ ತಮ್ಮ ಆಸ್ತಿ ಇ-ಖಾತೆ ಮಾಡಿಸಿಕೊಂಡು ವಂಚನೆಯಿಂದ ತಪ್ಪಿಸಿಕೊಳ್ಳಬಹುದು. ನಂತರ ಬೆಂಗಳೂರಿನ ಎಲ್ಲಾ ವಾರ್ಡ್‌ಗಳಲ್ಲೂ ಇಂತಹ ಕಾರ್ಯಕ್ರಮ ಮಾಡುತ್ತೇವೆ.
ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 25 ಲಕ್ಷ ಆಸ್ತಿಗಳಿದ್ದು, ಈ ಎಲ್ಲಾ ಆಸ್ತಿಗಳ ಡಿಜಿಟಲಿಕರಣಗೊಳಿಸಿ ನಿಮ್ಮ ಮನೆ ಬಾಗಿಲಿಗೆ ನೀಡುವಂತೆ ಕ್ರಾಂತಿಕಾರಿ ಬದಲಾವಣೆ ತರಲು ತೀರ್ಮಾನಿಸಿದ್ದೇನೆ. ನೀವು ನಿಮ್ಮ ಆಸ್ತಿ ದಾಖಲೆಗಳನ್ನು ಅಪ್ ಲೋಡ್ ಮಾಡಿ ಇ- ಖಾತಾ ಮಾಡಿಕೊಳ್ಳಿ. ಒಂದು ವೇಳೆ ನಿಮಗೆ ಇದು ಸಾಧ್ಯವಾಗದೆ ಇದ್ದರೆ ನಿಮಗೆ ನೀಡಲಾಗಿರುವ ದೂರವಾಣಿಗೆ ಕರೆ ಮಾಡಿ. ಅವರೇ ಬಂದು ನಿಮ್ಮ ದಾಖಲೆ ಅಪ್‌ಲೋಡ್ ಮಾಡಿ ಮನೆ ಬಾಗಿಲಿಗೆ ಇ-ಖಾತಾ ನೀಡುತ್ತಾರೆ ಎಂದು ಡಿ.ಕೆ.ಶಿವಕುಮಾರ್ ವಿವರಿಸಿದರು.
ಈವರೆಗೂ 5 ಲಕ್ಷ ಇ-ಖಾತಾ ವಿತರಣೆ:
ಪಾಲಿಕೆ ವ್ಯಾಪ್ತಿಯ 25 ಲಕ್ಷ ಆಸ್ತಿಗಳ ಪೈಕಿ 5 ಲಕ್ಷ ಆಸ್ತಿಗಳ ಕರಡು ಇ-ಖಾತಾ ವಿತರಣೆ ಮಾಡಲಾಗಿದೆ. ಬ್ಯಾಟರಾಯನಪುರ ಕ್ಷೇತ್ರದಲ್ಲಿ 50 ಸಾವಿರ ಮನೆಗಳಿಗೆ ಈ ಖಾತಾ ದಾಖಲೆ ವಿತರಣೆ ಮಾಡಲಾಗಿದೆ. ನಿಮ್ಮ ಗುರುತಿನ ಚೀಟಿಗೆ ಹೇಗೆ ಪ್ರತ್ಯೇಕ ಸಂಖ್ಯೆ ನೀಡಲಾಗಿದೆಯೋ ಅದೇ ರೀತಿ ನಿಮ್ಮ ಆಸ್ತಿಗಳಿಗೂ ಪ್ರತ್ಯೇಕ ಸಂಖ್ಯೆ ನೀಡಲು ನಿಮ್ಮ ಸರ್ಕಾರ ಬದ್ಧವಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಉಳುವವನಿಗೆ ಭೂಮಿ ಕೊಟ್ಟಿದ್ದೇವೆ. ಎ ಖಾತಾ ಇಲ್ಲದವರಿಗೆ ಬಿ ಖಾತಾ ಕೊಟ್ಟಿದ್ದೇವೆ. ಬಗರ್ ಹುಕುಂ ಸಾಗುವಳಿ ರೈತರಿಗೆ ಭೂಮಿ ನೀಡಿದ್ದೇವೆ. ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಅಕ್ರಮ ಸಕ್ರಮ ಯೋಜನೆ ಮಾಡಿದ್ದೇವೆ. ಭೂಮಿ ಯೋಜನೆ ಮೂಲಕ ರೈತರಿಗೆ ಕೇವಲ 5 ರು.ಗೆ ಖಾತಾ ದಾಖಲೆ ನೀಡಿದ್ದೇವೆ. ತಾಂಡಾ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆ ಮಾಡಿ 1,11,111 ಜನರಿಗೆ ಉಚಿತವಾಗಿ ದಾಖಲೆ ಪತ್ರ ನೀಡಿದ್ದೇವೆ. ಇದೀಗ ಬೆಂಗಳೂರಿನಲ್ಲೇ ಖಾತಾ ಕ್ರಾಂತಿ ಮಾಡುತ್ತಿದ್ದೇವೆ ಎಂದರು.