ಆರೋಪ ಹೊತ್ತವರು ತನಿಖೆ ಎದುರಿಸಬೇಕೇ ಹೊರತು ರಾಜ್ಯಪಾಲರಿಗೆ ಅಗೌರವ ತೋರಿಸಬಾರದು: ಎಸ್‌.ಎಲ್‌. ಭೈರಪ್ಪ

| Published : Aug 25 2024, 01:51 AM IST / Updated: Aug 25 2024, 04:18 AM IST

Dr SL Bhyrappa

ಸಾರಾಂಶ

ಆರೋಪ ಹೊತ್ತವರು ಪ್ರಾಮಾಣಿಕರಾಗಿದ್ದರೆ ತನಿಖೆ ಎದುರಿಸಬೇಕೇ ಹೊರತು ಅದನ್ನು ಬಿಟ್ಟು ರಾಜ್ಯಪಾಲರ ಹುದ್ದೆಗೆ ಅಗೌರವ ತೋರಿಸಬಾರದು ಎಂದು ಹಿರಿಯ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಅಭಿಪ್ರಾಯಪಟ್ಟರು.

 ಮೈಸೂರು  : ಆರೋಪ ಹೊತ್ತವರು ಪ್ರಾಮಾಣಿಕರಾಗಿದ್ದರೆ ತನಿಖೆ ಎದುರಿಸಬೇಕೇ ಹೊರತು ಅದನ್ನು ಬಿಟ್ಟು ರಾಜ್ಯಪಾಲರ ಹುದ್ದೆಗೆ ಅಗೌರವ ತೋರಿಸಬಾರದು ಎಂದು ಹಿರಿಯ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಅಭಿಪ್ರಾಯಪಟ್ಟರು.ನಗರದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶನಿವಾರ ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.

ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದಾಗ ಅದನ್ನು ರಾಜ್ಯ ಸರ್ಕಾರ ಸಮರ್ಥವಾಗಿ ಎದುರಿಸುವ ಬದಲು ಅವರಿಗೆ ಅಗೌರವ ತರುವಂತೆ ನಡೆದುಕೊಳ್ಳುವುದು ಸರಿಯಲ್ಲ. ಇಂಥ ದೂರುಗಳು ಬಂದಾಗ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಆದೇಶ ನೀಡಬಹುದು. ಆರೋಪ ಹೊತ್ತವರು ಪ್ರಾಮಾಣಿಕರಿದ್ದರೆ ಎದುರಿಸಬೇಕಷ್ಟೆ ಎಂದರು.

ರಾಜ್ಯಪಾಲರ ಹುದ್ದೆ ಪರಮೋಚ್ಚ ಸಾಂವಿಧಾನಿಕ ಹುದ್ದೆ. ಕಾಲಾನಂತರ ಅದು ಗಂಡಾಂತರಕಾರಿ ಸ್ಥಾನ. ದೇಶದಲ್ಲಿ ವಿರೋಧ ಪಕ್ಷಗಳು ಹುಟ್ಟಿಕೊಂಡ ಮೇಲೆ ರಾಜ್ಯಪಾಲರು ತಮ್ಮನ್ನು ನೇಮಿಸಿದ ಪಕ್ಷದ ಪರ ಹಾಗೂ ವಿರೋಧ ಪಕ್ಷದ ನಿಲುವಿಗೆ ವಿರುದ್ಧವಾಗಿ ವರ್ತಿಸುತ್ತಾರೆ ಎಂಬ ಆರೋಪ ಬರಲಾರಂಭಿಸಿತು. ಬಳಿಕ ರಾಜ್ಯಪಾಲರು ಭ್ರಷ್ಟಾಚಾರ ತಡೆಯಲು ಸಾಧ್ಯವಾಗದ ಸನ್ನಿವೇಶ ಸೃಷ್ಟಿಯಾಯಿತು ಎಂದು ಹೇಳಿದರು.