ಗೌಡ್ರು 48 ಸೈಟ್‌ ಹಂಚಿದ್ದಾರೆಂದಿದ್ದ ಬಿಜೆಪಿ ತನಿಖೆಗೆ ಆಗ್ರಹಿಸುತ್ತಾ?: ಕಾಂಗ್ರೆಸ್

| Published : Jul 14 2024, 01:42 AM IST / Updated: Jul 14 2024, 04:48 AM IST

Congress
ಗೌಡ್ರು 48 ಸೈಟ್‌ ಹಂಚಿದ್ದಾರೆಂದಿದ್ದ ಬಿಜೆಪಿ ತನಿಖೆಗೆ ಆಗ್ರಹಿಸುತ್ತಾ?: ಕಾಂಗ್ರೆಸ್
Share this Article
  • FB
  • TW
  • Linkdin
  • Email

ಸಾರಾಂಶ

‘ಮುಡಾ  ಹಂಚಿಕೆಯಲ್ಲಿ  ಎಚ್‌.ಡಿ. ದೇವೇಗೌಡ ಅಕ್ರಮ ನಡೆಸಿದ್ದು, ತಮ್ಮ ಕುಟುಂಬ ಸದಸ್ಯರಿಗೇ 48 ನಿವೇಶನ ಹಂಚಿಕೆ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿಧಾನಪರಿಷತ್‌ ಸಭಾಪತಿಗಳಿಗೆ ದಾಖಲೆ ಸಲ್ಲಿಸಿದ್ದರು. ಈ ಬಗ್ಗೆ ಸಿಬಿಐ ತನಿಖೆಗೆ ಬಿಜೆಪಿ ಈಗ ಒತ್ತಾಯಿಸುತ್ತದೆಯೇ?’  

 ಬೆಂಗಳೂರು :  ‘ಮುಡಾ ನಿವೇಶನ ಹಂಚಿಕೆಯಲ್ಲಿ ಮಾಜಿ ಪ್ರಧಾನಮಂತ್ರಿ ಎಚ್‌.ಡಿ. ದೇವೇಗೌಡ ಅಕ್ರಮ ನಡೆಸಿದ್ದು, ತಮ್ಮ ಕುಟುಂಬ ಸದಸ್ಯರಿಗೇ 48 ನಿವೇಶನ ಹಂಚಿಕೆ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿಧಾನಪರಿಷತ್‌ ಸಭಾಪತಿಗಳಿಗೆ ದಾಖಲೆ ಸಲ್ಲಿಸಿದ್ದರು. ಈ ಬಗ್ಗೆ ಸಿಬಿಐ ತನಿಖೆಗೆ ಬಿಜೆಪಿ ಈಗ ಒತ್ತಾಯಿಸುತ್ತದೆಯೇ?’ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ವಿಧಾನಪರಿಷತ್‌ ಮಾಜಿ ಸದಸ್ಯ ಹಾಗೂ ಕೆಪಿಸಿಸಿ ವಕ್ತಾರರಾದ ರಮೇಶ್ ಬಾಬು, ‘ಎಚ್.ಡಿ. ದೇವೇಗೌಡ ತಮ್ಮ ಕುಟುಂಬಕ್ಕೆ 48 ನಿವೇಶನ ಹಂಚಿಕೆ ಮಾಡಿರುವುದಾಗಿ 2011ರಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪರಿಷತ್ ಸಭಾಪತಿಗಳಿಗೆ ದಾಖಲೆ ಸಲ್ಲಿಕೆ ಮಾಡಿದ್ದರು. ಇದರಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ 300/200 (60,000 ಅಡಿ) ನಿವೇಶನ ಹಂಚಿಕೆ ಮಾಡಿರುವುದಾಗಿ ಯಡಿಯೂರಪ್ಪ ಹೇಳಿದ್ದರು. ಇದು ವಿಧಾನಪರಿಷತ್ ನಡಾವಳಿಯಲ್ಲೂ ಸ್ಪಷ್ಟವಾಗಿ ದಾಖಲಾಗಿದೆ. ಈ ಬಗ್ಗೆ ಬಿಜೆಪಿಯವರ ನಿಲುವೇನು’ ಎಂದು ಪ್ರಶ್ನಿಸಿದ್ದಾರೆ.

ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪರಿಹಾರ ರೂಪದಲ್ಲಿ ಭೂ ಮಾಲೀಕರಿಗೆ ನಿವೇಶನ ನೀಡಿರುವ ವಿರುದ್ಧ ಬಿಜೆಪಿ ನಾಯಕರು ರಾಜಕೀಯಕ್ಕಾಗಿ ಆರೋಪ ಮಾಡುತ್ತಿದ್ದಾರೆ. ಆದರೆ ಯಾವುದೇ ಭೂಮಿಯನ್ನು ಕಳೆದುಕೊಳ್ಳದೆ ತಮ್ಮ ರಾಜಕೀಯ ಪ್ರಭಾವದ ಮೂಲಕ ಒಂದೇ ಕುಟುಂಬ 48 ನಿವೇಶನಗಳನ್ನು ಪಡೆದುಕೊಂಡ ಅಕ್ರಮ ಕುರಿತು ಬಿಜೆಪಿ ಚಕಾರ ಎತ್ತುತ್ತಿಲ್ಲ. ಅದೇ ರೀತಿ ಒಬ್ಬನೇ ವ್ಯಕ್ತಿಗೆ ಯಾವ ಆಧಾರದ ಮೇಲೆ 60 ಸಾವಿರ ಅಡಿ ಅಳತೆಯ ನಿವೇಶನ ಮಂಜೂರಾಗಿತ್ತು? ಸದನದ ಒಳಗೆ ದಾಖಲೆಯಿಟ್ಟು ಮಾತನಾಡಿದ ಯಡಿಯೂರಪ್ಪನವರಿಗೆ ಸಾರ್ವಜನಿಕವಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ ಏಕೆ? ಎಂದು ಕಿಡಿಕಾರಿದ್ದಾರೆ.

ಜತೆಗೆ ವಿಧಾನಪರಿಷತ್ತಿನಲ್ಲಿ ಮಾತನಾಡುವಾಗ ಬಿ.ಎಸ್.ಕೆ. ಮೈನಿಂಗ್ ಕಂಪನಿಯಿಂದ ದೇವೇಗೌಡರ ಕುಟುಂಬದವರಿಗೆ 167 ಕೋಟಿ ರು. ಜಮಾ ಆಗಿದೆ ಎಂದು ಯಡಿಯೂರಪ್ಪ ಆರೋಪಿಸಿದ್ದಾರೆ. ಅಲ್ಲದೆ, ಜಂತ್ಕಲ್ ಎಂಟರ್ಪ್ರೈಸಸ್ ಗೆ 40 ವರ್ಷ ನವೀಕರಣ ಮಾಡಿ ಅದರಲ್ಲಿ ಇವರ ಕುಟುಂಬದವರು ಸಹಭಾಗಿತ್ವ ಪಡೆದಿದ್ದಾರೆ ಎಂದೂ ಆರೋಪಿಸಿದ್ದರು. ತಾವು ಮಾಡಿದ ಆರೋಪಗಳಿಗೆ ಪೂರಕವಾಗಿ ದಾಖಲೆಗಳನ್ನೂ ಸಭಾಪತಿಗಳಿಗೆ ಸದನದಲ್ಲಿ ನೀಡಿದ್ದರು. ದೇವೇಗೌಡರ ಕುಟುಂಬದ ಮೇಲೆ ಮಾಡಿರುವ ಗಂಭೀರ ಆರೋಪದ ಮೇಲೆ ತನಿಖೆಗೆ ಒತ್ತಾಯಿಸಲು ಈಗ ತಾಕತ್ತು ಇದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

ಅವಕಾಶವಾದದ ರಾಜಕಾರಣ ಮತ್ತು ಅನುಕೂಲ ಸಿಂಧು ರಾಜಕಾರಣಕ್ಕೆ ಬಿಜೆಪಿ ಶರಣಾಗಿದೆ. ಮುಡಾ ಹಗರಣದಲ್ಲಿ ಯಾವ ಯಾವ ಬಿಜೆಪಿ ನಾಯಕರು ಎಷ್ಟು ಎಷ್ಟು ನಿವೇಶನಗಳನ್ನು ಪಡೆದುಕೊಂಡಿದ್ದಾರೆ ಎಂಬುದನ್ನು ಬಹಿರಂಗಗೊಳಿಸಲಿ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಮೈಸೂರಿನ ಮುಡಾದಲ್ಲಿ ಹೆಚ್ಚು ಹಗರಣಗಳು ನಡೆದಿವೆ ಎಂದು ದೂರಿದ್ದಾರೆ.