ಪಾದಯಾತ್ರೆಗೆ ಕಾಂಗ್ರೆಸ್‌ ಸಡ್ಡು: ಇಂದಿನಿಂದಲೇ ಸರಣಿ ಸಮಾವೇಶ - ಬಿಜೆಪಿ, ದಳ ನಾಯಕರ ಭ್ರಷ್ಟಾಚಾರ ಬಿಚ್ಚಿಡುತ್ತೇವೆ: ಡಿಕೆಶಿ

| Published : Aug 02 2024, 04:57 AM IST / Updated: Aug 02 2024, 12:51 PM IST

DK shivakumar
ಪಾದಯಾತ್ರೆಗೆ ಕಾಂಗ್ರೆಸ್‌ ಸಡ್ಡು: ಇಂದಿನಿಂದಲೇ ಸರಣಿ ಸಮಾವೇಶ - ಬಿಜೆಪಿ, ದಳ ನಾಯಕರ ಭ್ರಷ್ಟಾಚಾರ ಬಿಚ್ಚಿಡುತ್ತೇವೆ: ಡಿಕೆಶಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ-ಜೆಡಿಎಸ್‌ ಹಮ್ಮಿಕೊಂಡಿರುವ ಪಾದಯಾತ್ರೆಗೆ ತಿರುಗೇಟು ನೀಡಲು ಮುಂದಾಗಿರುವ ಕಾಂಗ್ರೆಸ್‌, ವಿಪಕ್ಷಗಳ ಪಾದಯಾತ್ರೆ ಸಾಗುವ ಮಾರ್ಗದ ಪ್ರಮುಖ ಸ್ಥಳಗಳಲ್ಲಿ ಬಿಜೆಪಿ ವಿರುದ್ಧ ಸಾರ್ವಜನಿಕ ಸಭೆ ನಡೆಸಲು ನಿರ್ಧರಿಸಿದೆ.

ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ-ಜೆಡಿಎಸ್‌ ಹಮ್ಮಿಕೊಂಡಿರುವ ಪಾದಯಾತ್ರೆಗೆ ತಿರುಗೇಟು ನೀಡಲು ಮುಂದಾಗಿರುವ ಕಾಂಗ್ರೆಸ್‌, ವಿಪಕ್ಷಗಳ ಪಾದಯಾತ್ರೆ ಸಾಗುವ ಮಾರ್ಗದ ಪ್ರಮುಖ ಸ್ಥಳಗಳಲ್ಲಿ ಬಿಜೆಪಿ ವಿರುದ್ಧ ಸಾರ್ವಜನಿಕ ಸಭೆ ನಡೆಸಲು ನಿರ್ಧರಿಸಿದೆ. ಶುಕ್ರವಾರದಿಂದಲೇ ಸಾರ್ವಜನಿಕ ಸಭೆ ಆಯೋಜಿಸಲಾಗುತ್ತಿದ್ದು, ಈ ವೇಳೆ ಬಿಜೆಪಿ ಸರ್ಕಾರದ ಅವಧಿಯ ಭ್ರಷ್ಟಾಚಾರದ ಕುರಿತಂತೆ ಜನರಿಗೆ ತಿಳಿಸುವ ಕೆಲಸ ಮಾಡಲಾಗುತ್ತದೆ.

ಕಾಂಗ್ರೆಸ್‌ ಸರಣಿ ಸಾರ್ವಜನಿಕ ಸಭೆ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಬಿಜೆಪಿ-ಜೆಡಿಎಸ್‌ ಪಕ್ಷದಲ್ಲಿರುವವರೆಲ್ಲ ಸತ್ಯಹರಿಶ್ಚಂದ್ರನ ಮೊಮ್ಮಕ್ಕಳು. ಹೀಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಅವರ ಈ ಪಾದಯಾತ್ರೆಗೆ ಉತ್ತರ ನೀಡಲು ಅವರ ಅವಧಿಯಲ್ಲಾಗಿರುವ ಭ್ರಷ್ಟಾಚಾರವನ್ನೆಲ್ಲ ಜನರಿಗೆ ತಿಳಿಸುವ ಕೆಲಸ ಮಾಡುತ್ತೇವೆ. ಅದಕ್ಕಾಗಿ ಶುಕ್ರವಾರದಿಂದ ಸರಣಿ ಸಾರ್ವಜನಿಕ ಸಭೆಗಳನ್ನು ಆಯೋಜಿಸಲಾಗುತ್ತಿದೆ. ಪಾದಯಾತ್ರೆ ಸಾಗುವ ಮಾರ್ಗದಲ್ಲಿನ ಪ್ರಮುಖ ನಗರಗಳಲ್ಲಿ ಸಾರ್ವನಿಕ ಸಭೆ ನಡೆಸಲಾಗುತ್ತದೆ. ಪಾದಯಾತ್ರೆ ತಂಗುವುದಕ್ಕೂ ಮುಂಚಿನ ದಿನದಂದೇ ಸಾರ್ವಜನಿಕ ಸಭೆ ನಡೆಸಲಿದ್ದೇವೆ ಎಂದು ಹೇಳಿದರು.

 ನಮ್ಮ ಪ್ರಶ್ನೆಗೆ ಜನರ ಬಳಿ ಉತ್ತರಿಸಲಿ 

ಬಿಜೆಪಿ-ಜೆಡಿಎಸ್‌ ಪಾದಯಾತ್ರೆ ಶನಿವಾರದಿಂದ ಆರಂಭಿಸುವುದಾಗಿ ಘೋಷಿಸಿದ್ದಾರೆ. 7 ದಿನಗಳ ಪಾದಯಾತ್ರೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಅದಕ್ಕಾಗಿ ನಾವು ಶುಕ್ರವಾರದಿಂದಲೇ ಸಾರ್ವಜನಿಕ ಸಭೆ ಆಯೋಜಿಸುತ್ತಿದ್ದೇವೆ. ಪ್ರತಿ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ-ಜೆಡಿಎಸ್ ನಾಯಕರಿಗೆ ಅವರ ಕಾಲದ ಭ್ರಷ್ಟಾಚಾರದ ಕುರಿತಂತೆ ಉತ್ತರಿಸಿ ಎಂದು ಮೂರ್ನಾಲ್ಕು ಸಚಿವರು ಪ್ರಶ್ನೆ ಕೇಳಲಿದ್ದಾರೆ. ಅವರು ಪಾದಯಾತ್ರೆ ಮೂಲಕ ಆ ನಗರಕ್ಕೆ ಬಂದಾಗ ನಾವು ಕೇಳುವ ಪ್ರಶ್ನೆಗೆ ಜನರ ಬಳಿ ಉತ್ತರ ಹೇಳಲಿ. ಅಲ್ಲದೆ, ಪ್ರತಿ ಸಾರ್ವಜನಿಕ ಸಭೆಯಲ್ಲೂ ವಿಪಕ್ಷಗಳ ಎರಡರಿಂದ ಮೂರು ಭ್ರಷ್ಟಾಚಾರ ಪ್ರಕರಣ ಕುರಿತಂತೆ ಜನರಿಗೆ ಮಾಹಿತಿ ನೀಡಲಾಗುವುದು ಎಂದು ಡಿ.ಕೆ.ಶಿವಕುಮಾರ್‌ ಮಾಹಿತಿ ನೀಡಿದರು.

 ಆ.9ಕ್ಕೆ ಮೈಸೂರಿನಲ್ಲಿ ಬೃಹತ್‌ ಸಮಾವೇಶ 

ಆ.2ರಂದು ಬಿಡದಿಯಲ್ಲಿ ಬಹಿರಂಗ ಸಭೆ ನಡೆಸಲಿದ್ದೇವೆ. ಅದಾದ ನಂತರ ಆ.3ರಂದು ರಾಮನಗರ, ಆ.4ರಂದು ಚನ್ನಪಟ್ಟಣ, ಆ.5ರಂದು ಮದ್ದೂರು, ಆ.6ರಂದು ಮಂಡ್ಯ ಹಾಗೂ ಆ.9ರಂದು ಮೈಸೂರಿನಲ್ಲಿ ಬೃಹತ್‌ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಪ್ರತಿ ಸಾರ್ವಜನಿಕ ಸಭೆಯನ್ನೂ ಬೆಳಗ್ಗೆ 11 ಗಂಟೆಗೆ ಆರಂಭಿಸಲಾಗುವುದು. ಈ ಸಭೆಗಳಿಗೆ ಎಲ್ಲ ಸಚಿವರು, ಶಾಸಕರು ಭಾಗವಹಿಸುವಂತೆ ಸೂಚಿಸಲಾಗಿದೆ. ಸಿಎಂ ಮತ್ತು ನಾನು ಕೂಡ ಸಭೆಗಳಲ್ಲಿ ಪಾಲ್ಗೊಳ್ಳುತ್ತೇವೆ. ಜತೆಗೆ ಸಂಸತ್‌ ಅಧಿವೇಶನವನ್ನು ಬದಿಗೊತ್ತಿ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಸಂಸದರಿಗೂ ತಿಳಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು. 

ರಾಜ್ಯಕ್ಕಾಗುತ್ತಿರುವ ಅನ್ಯಾಯದ ಬಗ್ಗೆ ಪ್ರಶ್ನೆ

ಸಾರ್ವಜನಿಕ ಸಭೆಗಳಲ್ಲಿ ವಿಪಕ್ಷಗಳ ಅಕ್ರಮದ ಜತೆಗೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕಾಗುತ್ತಿರುವ ಅನ್ಯಾಯದ ಬಗ್ಗೆಯೂ ಜನರ ಗಮನಕ್ಕೆ ತರಲಾಗುವುದು. ಅನುದಾನ ನೀಡುವುದು ಸೇರಿದಂತೆ ಇನ್ನಿತರ ವಿಚಾರದಲ್ಲಿ ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯ ಬಗ್ಗೆಯೂ ಪ್ರಶ್ನೆ ಕೇಳಲಾಗುವುದು. ಪಾದಯಾತ್ರೆ ಮೂಲಕ ಬರುವ ವಿಪಕ್ಷ ನಾಯಕರು ಅದಕ್ಕೆಲ್ಲ ಉತ್ತರಿಸಬೇಕು ಎಂದು ಆಗ್ರಹಿಸುತ್ತೇವೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಮೈತ್ರಿ ಪಾದಯಾತ್ರೆಗೆ ಅನುಮತಿ ನೀಡುತ್ತೇವೆ

ಬಿಜೆಪಿ-ಜೆಡಿಎಸ್‌ ಪಾದಯಾತ್ರೆ ತಡೆಯುವ ಕೆಲಸ ಸರ್ಕಾರ ಮಾಡುವುದಿಲ್ಲ. ಪಾದಯಾತ್ರೆ ಮಾಡುವುದು ಅವರ ಹಕ್ಕು. ಅದಕ್ಕೆ ಬೇಕಾಗುವ ಎಲ್ಲ ಅನುಮತಿ, ಸಹಕಾರವನ್ನು ನಾವು ನೀಡುತ್ತೇವೆ. ಆದರೆ, ನ್ಯಾಯಾಲಯಗಳ ಆದೇಶದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮಾತ್ರ ಪಾದಯಾತ್ರೆಗೆ ಅವಕಾಶ ನೀಡುವುದಿಲ್ಲ ಎಂದು ಡಿ.ಕೆ. ಶಿವಕುಮಾರ್‌ ಸ್ಪಷ್ಟಪಡಿಸಿದರು.

ಬಿಜೆಪಿಯೊಂದಿಗೆ ಜೆಡಿಎಸ್‌ ವಿಲೀನಗೊಳಿಸಲಿ

ಪಾದಯಾತ್ರೆ ವಿಚಾರವಾಗಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಈವರೆಗೆ ಹೊಂದಾಣಿಕೆ ಇರಲಿಲ್ಲ. ಆದರೀಗ, ಜೆಡಿಎಸ್‌ ಪಾದಯಾತ್ರೆಗೆ ಬೆಂಬಲ ನೀಡಿದ್ದಾರೆ. ಈವರೆಗೆ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿಯ ಪಾದಯಾತ್ರೆಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಬೆಂಬಲ ನೀಡಿಲ್ಲ ಎಂದು ತಿಳಿದಿದ್ದೆ. ಆದರೆ, ಈಗ ಪಾದಯಾತ್ರೆಗೆ ಬೆಂಬಲ ನೀಡಿ ಜೆಡಿಎಸ್‌ ಅನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸುವುದಕ್ಕಾಗಿ ಈ ನಿರ್ಧಾರ ಮಾಡಿರಬಹುದು ಎಂದು ಡಿ.ಕೆ.ಶಿವಕುಮಾರ್‌ ಅಭಿಪ್ರಾಯಪಟ್ಟರು.