ಎಚ್‌ ಡಿ ಕುಮಾರಸ್ವಾಮಿ ಮುನಿಸು ಶಮನ: ಮೈಸೂರಿಗೆ ನಾಳೆಯಿಂದಲೇ ಬಿಜೆಪಿ-ಜೆಡಿಎಸ್ ಜಂಟಿ ಪಾದಯಾತ್ರೆ

| Published : Aug 02 2024, 01:30 AM IST / Updated: Aug 02 2024, 04:42 AM IST

ಸಾರಾಂಶ

ಮುಡಾ ಹಗರಣ ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬೆಂಗಳೂರಿನಿಂದ ಮೈಸೂರುವರೆಗೆ ಬಿಜೆಪಿ ಆಯೋಜಿಸಿರುವ ಪಾದಯಾತ್ರೆಯಿಂದ ದೂರವುಳಿಯಲು ನಿರ್ಧರಿಸಿದ್ದ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಕೊನೆಗೂ ತಮ್ಮ ನಿಲುವು ಬದಲಿಸಿದ್ದಾರೆ.

 ನವದೆಹಲಿ : ಮುಡಾ ಹಗರಣ ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬೆಂಗಳೂರಿನಿಂದ ಮೈಸೂರುವರೆಗೆ ಬಿಜೆಪಿ ಆಯೋಜಿಸಿರುವ ಪಾದಯಾತ್ರೆಯಿಂದ ದೂರವುಳಿಯಲು ನಿರ್ಧರಿಸಿದ್ದ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಕೊನೆಗೂ ತಮ್ಮ ನಿಲುವು ಬದಲಿಸಿದ್ದಾರೆ. 

ಬಿಜೆಪಿ ವರಿಷ್ಠರ ಮನವೊಲಿಕೆ ಬಳಿಕ ಮುನಿಸು ಮರೆತು ಎಂಟು ದಿನಗಳ ಈ ಪಾದಯಾತ್ರೆಗೆ ಬಹಿರಂಗ ಬೆಂಬಲ ಘೋಷಿಸಿದ್ದಾರೆ. ಅದರಂತೆ ಪೂರ್ವನಿಗದಿಯಂತೆ ಜೆಡಿಎಸ್‌-ಬಿಜೆಪಿ ಜಂಟಿ ನೇತೃತ್ವದಲ್ಲಿ ಶನಿವಾರ ಪಾದಯಾತ್ರೆ ಆರಂಭವಾಗಲಿದೆ.ಮಿತ್ರಪಕ್ಷವಾದ ಜೆಡಿಎಸ್‌ ಅನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ರಾಜ್ಯ ಬಿಜೆಪಿ ಮುಖಂಡರು ಏಕಾಏಕಿ ಪಾದಯಾತ್ರೆ ಘೋಷಿಸಿದ್ದಾರೆ, ಈ ಸಂಬಂಧ ಕರೆಯಲಾಗಿದ್ದ ಪೂರ್ವಭಾವಿ ಸಭೆಗೆ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಕುಟುಂಬದ ವಿರುದ್ಧ ಪೆನ್‌ಡ್ರೈವ್‌ ಷಡ್ಯಂತ್ರ ರೂಪಿಸಿದ ಆರೋಪವಿರುವ ಹಾಸನದ ಮುಖಂಡ ಪ್ರೀತಂ ಗೌಡರನ್ನು ಆಹ್ವಾನಿಸಿದ್ದಾರೆಂದು ಆರೋಪಿಸಿ ಕುಮಾರಸ್ವಾಮಿ ಅವರು ಪಾದಯಾತ್ರೆಯಿಂದ ದೂರವುಳಿಯುವ ನಿರ್ಧಾರ ಪ್ರಕಟಿಸಿದ್ದರು.

ಇದರ ಬೆನ್ನಲ್ಲೇ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್‌ ಅಗರ್‌ವಾಲ್‌, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ಮಾತುಕತೆ ನಡೆಸಿ ಪಾದಯಾತ್ರೆ ಸಂಬಂಧ ಸೃಷ್ಟಿಯಾಗಿದ್ದ ಗೊಂದಲಕ್ಕೆ ಇತಿಶ್ರೀ ಹಾಡಿದ್ದಾರೆ. 

ದೆಹಲಿಯಲ್ಲಿ ಮಾತುಕತೆ:

ಪಾದಯಾತ್ರೆಯಿಂದ ಜೆಡಿಎಸ್‌ ದೂರವುಳಿಯುವ ನಿರ್ಧಾರ ಘೋಷಣೆ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವ ಅಮಿತ್‌ ಶಾರನ್ನು ಭೇಟಿಯಾಗಿದ್ದರು. ಆ ಬಳಿಕ ಗುರುವಾರ ರಾಜ್ಯ ಉಸ್ತುವಾರಿ ರಾಧಾಮೋಹನ್‌ ಅಗರ್‌ವಾಲ್‌ ಉಪಸ್ಥಿತಿಯಲ್ಲಿ ಕುಮಾರಸ್ವಾಮಿ, ವಿಜಯೇಂದ್ರ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಮುಕ್ತ ಮಾತುಕತೆ ನಡೆಸಿದ್ದು, ಪಾದಯಾತ್ರೆಗೆ ಸಂಬಂಧಿಸಿ ಸೃಷ್ಟಿಯಾಗಿದ್ದ ಗೊಂದಲ ಪರಿಹರಿಸುವ ಪ್ರಯತ್ನ ನಡೆಸಿದರು. 

ಇದೇ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರೂ ಕುಮಾರಸ್ವಾಮಿ ಅವರಿಗೆ ಕರೆ ಮಾಡಿ ಮಾತನಾಡಿ ಕುಮಾರಸ್ವಾಮಿ ಮನವೊಲಿಸುವಲ್ಲಿ ಯಶಸ್ವಿಯಾದರು.

ನಡ್ಡಾ ಅವರ ಜತೆಗಿನ ಮಾತುಕತೆ ವೇಳೆ ಕುಮಾರಸ್ವಾಮಿ ಅವರು ಪಾದಯಾತ್ರೆ ವಿಚಾರವಾಗಿ ರಾಜ್ಯ ಬಿಜೆಪಿ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದೆ ಮತ್ತು ತಮ್ಮ ಕುಟುಂಬದ ವಿರೋಧಿ ಪ್ರೀತಂಗೌಡ ರನ್ನು ಜತೆಗಿಟ್ಟುಕೊಂಡು ಪಾದಯಾತ್ರೆಗೆ ಹೋಗುತ್ತಿರುವ ಕುರಿತು ಆಕ್ಷೇಪವಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಈ ವೇಳೆ ನಡ್ಡಾ ಅವರು ರಾಜ್ಯ ಮುಖಂಡರ ಜತೆಗೆ ಮಾತುಕತೆ ನಡೆಸುವುದಾಗಿ ಹೇಳುವ ಮೂಲಕ ಪಾದಯಾತ್ರೆ ವಿಚಾರವಾಗಿ ಸೃಷ್ಟಿಯಾಗಿದ್ದ ಗೊಂದಲ ಪರಿಹರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗಿದೆ.

ಬೆಂಬಲ ಘೋಷಣೆ: ಆ ಬಳಿಕ ಸಂಜೆ ಸುದ್ದಿಗಾರರ ಜತೆಗೆ ಮಾತನಾಡಿದ ಕುಮಾರಸ್ವಾಮಿ ಅವರು ಪಾದಯಾತ್ರೆಗೆ ಬೆಂಬಲ ನೀಡುವ ಘೋಷಣೆ ಮಾಡಿದರು. ಪಾದಯಾತ್ರೆ ವಿಚಾರವಾಗಿ ಸೃಷ್ಟಿಯಾಗಿದ್ದ ಕೆಲ ಸಣ್ಣಪುಟ್ಟ ಸಮಸ್ಯೆಗಳ ಕುರಿತು ಬಿಜೆಪಿ ನಾಯಕರು ಮತ್ತು ನಾವು ಮುಕ್ತವಾಗಿ ಚರ್ಚೆ ಮಾಡಿದ್ದೇವೆ. ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ ಹೋಗಬೇಕೆಂದೇ ಕಳೆದ ವರ್ಷ ಮೈತ್ರಿ ಮಾಡಿಕೊಂಡಿದ್ದೆವು. ಇದೀಗ ಪಾದಯಾತ್ರೆ ವಿಚಾರದಲ್ಲಿ ಕೇವಲ ಪ್ರೀತಂಗೌಡ ಅವರೊಬ್ಬರೇ ನಮ್ಮ ಸಮಸ್ಯೆ ಆಗಿರಲಿಲ್ಲ, ಅದೊಂದು ಉದಾಹರಣೆಯಷ್ಟೆ ಆಗಿತ್ತು. ಪಾದಯಾತ್ರೆಯನ್ನು ಬಿಜೆಪಿ ಕಾರ್ಯಕ್ರಮ ಎಂಬಂತೆ ಬಿಂಬಿಸಲು ಹೊರಟಿದ್ದರು ಎಂದು ತಮ್ಮ ಆಕ್ಷೇಪಕ್ಕೆ ಕಾರಣಗಳನ್ನು ಬಹಿರಂಗಪಡಿಸಿದ ಕುಮಾರಸ್ವಾಮಿ, ಈ ವಿಚಾರದಲ್ಲಿ ಹಲವು ತಪ್ಪುಗಳಾಗಿದ್ದು, ಅದನ್ನು ಮಾತುಕತೆ ಮೂಲಕ ಸರಿಪಡಿಸುವ ಕೆಲಸ ಆಗಿದೆ. ಹಾಗಾಗಿ ತಾವು ಪಾದಯಾತ್ರೆಗೆ ಬೆಂಬಲ ನೀಡುತ್ತಿರುವುದಾಗಿ ತಿಳಿಸಿದರು.