ಸಾರಾಂಶ
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಲು ಪಣ ತೊಟ್ಟು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜಂಟಿಯಾಗಿ ಸಚಿವರು, ಶಾಸಕರು, ಸಂಸದರು, ಚುನಾವಣಾ ಉಸ್ತುವಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬೆಂಗಳೂರು : ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿ ವಿಧಾನಸಭೆ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಲು ಪಣ ತೊಟ್ಟು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜಂಟಿಯಾಗಿ ಸಚಿವರು, ಶಾಸಕರು, ಸಂಸದರು, ಚುನಾವಣಾ ಉಸ್ತುವಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಭಾನುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರೊಂದಿಗೆ ಸಚಿವರು, ಶಾಸಕರು, ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಚುನಾವಣೆಯ ಜವಾಬ್ದಾರಿ ವಹಿಸಿಕೊಂಡಿರುವ ನಾಯಕರು, ಮುಖಂಡರ ಜೊತೆ ವಿಡಿಯೋ ಸಂವಾದವನ್ನು ನಡೆಸಿದರು.
ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು, ಜನಪರ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮನೆ ಮನೆಗೆ ತಲುಪಿಸಿ ಮತದಾರರ ಮನವೊಲಿಸಬೇಕು ಎಂದು ಸಿದ್ದರಾಮಯ್ಯ ಸೂಚಿಸಿದರು.
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿವೆ. ಅವರ ಅಪಪ್ರಚಾರಗಳಿಗೆ ಸೂಕ್ತ ಪ್ರತ್ಯುತ್ತರಗಳನ್ನು ನೀಡಬೇಕು. ಅವರ ಸುಳ್ಳು ಆರೋಪಗಳನ್ನು ಬಯಲು ಮಾಡಬೇಕು. ಕಾರ್ಯಕರ್ತರು, ಮುಖಂಡರ ನಡುವಿನ ಭಿನ್ನಮತ, ಅಸಮಾಧಾನಗಳನ್ನು ಪರಿಹರಿಸಿಕೊಂಡು ಗೆಲುವೊಂದೇ ಗುರಿ ಎನ್ನುವ ಮೂಲಕ ಎಲ್ಲರೂ ಒಗ್ಗಟ್ಟಾಗಿ ಹುರುಪಿನೊಂದಿಗೆ ಸಾಗಬೇಕು. ಪಕ್ಷದಿಂದ ನಾಯಕರು, ಮುಖಂಡರು, ಕಾರ್ಯಕರ್ತರಿಗೆ ವಹಿಸಲಾಗಿರುವ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಬೇಕು. ಯಾವುದೇ ನೆಪ ಹೇಳಿ ಜವಾಬ್ದಾರಿಗಳಿಂದ ನುಣುಚಿಕೊಳ್ಳಬಾರದು ಎಂದು ಹೇಳಿದರು.
ಇದೇ ವೇಳೆ ಶಿವಕುಮಾರ್ ಅವರು ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರುವ ಕಾರಣ ಮೂರು ಕ್ಷೇತ್ರಗಳಲ್ಲಿ ನಾವೇ ಗೆಲ್ಲುವ ಪಣ ತೊಡಬೇಕು. ಭಿನ್ನ ಫಲಿತಾಂಶದಿಂದ ತಪ್ಪು ಸಂದೇಶ ರವಾನೆಯಾಗುವುದಕ್ಕೆ ಅವಕಾಶ ನೀಡಬಾರದು ಎಂಬ ಎಚ್ಚರಿಕೆಯನ್ನು ನೀಡಿದರು.
ವಿವಾದಾತ್ಮಕ ಹೇಳಿಕೆ ಬೇಡ- ಸುರ್ಜೇವಾಲಾ:
ಚುನಾವಣೆ ಸಂದರ್ಭದಲ್ಲಿ ಯಾರೂ ಕೂಡ ವಿವಾದಾತ್ಮಕ ಹೇಳಿಕೆಗಳನ್ನು ನೀಡಬಾರದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಪಕ್ಷದ ನಾಯಕರು, ಮುಖಂಡರಿಗೆ ಎಚ್ಚರಿಸಿದ್ದಾರೆ.
ದಿಲ್ಲಿಯಿಂದ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ ಅವರು, ವಿಪಕ್ಷಗಳು ಮಾಡುವ ಆರೋಪಗಳು, ಟೀಕೆಗಳಿಗೆ ಉತ್ತರಿಸುವ ಸಂದರ್ಭದಲ್ಲಿ ನೀಡುವ ಬಹಿರಂಗ ಹೇಳಿಕೆಗಳ ಬಗ್ಗೆ ಎಚ್ಚರ ವಹಿಸಬೇಕು. ಸರ್ಕಾರ, ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ವಿವಾದದ ಹೇಳಿಕೆಗಳು ಚುನಾವಣೆ ಮೇಲೆ ಪರಿಣಾಮ ಬೀರುತ್ತವೆ. ವಿವೇಚನೆ ಬಳಸಬೇಕು ಮತ್ತು ಅನಗತ್ಯವಾಗಿ ಮಾತನಾಡಬಾರದು. ಗಂಭೀರ ವಿಷಯಗಳು ಇದ್ದಲ್ಲಿ ಹಿರಿಯ ನಾಯಕರೊಂದಿಗೆ ಚರ್ಚೆ ನಡೆಸಬೇಕು ಎಂದು ಸುರ್ಜೇವಾಲಾ ಅವರು ಕಿವಿಮಾತು ಹೇಳಿದರು.
ಸಭೆಗೆ ಮಂತ್ರಿಗಳ ಗೈರು ಹಾಜರಿ: ಸುರ್ಜೇವಾಲಾ ತೀವ್ರ ತರಾಟೆ
ವಿಡಿಯೋ ಸಂವಾದದ ಬಗ್ಗೆ ಮುಂಚಿತವಾಗಿಯೇ ತಿಳಿಸಿದ್ದರೂ ಅನೇಕ ಸಚಿವರು ಗೈರು ಹಾಜರಾಗಿದ್ದ ಹಿನ್ನೆಲೆಯಲ್ಲಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ. ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಭೆಯಲ್ಲಿ 200 ಜನ ಹಾಜರಿದ್ದರು. ದೀಪಾವಳಿ ಹಬ್ಬ ಹತ್ತಿರದಲ್ಲಿರುವ ಕಾರಣ ಕೆಲವರು ಗೈರು ಹಾಜರಾಗಿದ್ದರು ಎಂದರು.