ಕೆಜಿಎಫ್ : ನಗರಸಭಾ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವ : ವಿ. ಮೋಹನ್‌ಕೃಷ್ಣ ಆರೋಪ

| Published : Oct 28 2024, 12:55 AM IST / Updated: Oct 28 2024, 04:15 AM IST

ಸಾರಾಂಶ

ಮುಂಬರಲಿರುವ ನಗರಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸುವ ಮೂಲಕ ಆರ್.ಕೆ.ಫೌಂಡೇಶನ್‌ನ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ನಗರಸಭೆಯಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ನಿರ್ಧರಿಸಲಾಗಿದೆ. ಮಾಜಿ ಶಾಸಕ ಎಸ್.ರಾಜೇಂದ್ರನ್ ಅವಧಿಯಲ್ಲಿ ಭ್ರಷ್ಟಾಚಾರ ಇರಲಿಲ್ಲ.

 ಕೆಜಿಎಫ್ :  ನಗರಸಭಾ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಸಾಮಾನ್ಯ ಜನರು ತಮ್ಮ ಹೆಸರಿನಲ್ಲೇ ಸ್ವತ್ತುಗಳಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಹೊಂದಿದ್ದರೂ ಇ-ಖಾತೆ ಮಾಡಿಸಲು ಸಾವಿರಾರು ರು. ಹಣವನ್ನು ನೀಡಬೇಕಾದ ಪರಿಸ್ಥಿತಿ ಎದುರಾಗಿದೆ. 

ಇದರ ವಿರುದ್ಧ ತಾವು ಹೋರಾಡುವುದಾಗಿ ಆರ್.ಕೆ.ಫೌಂಡೇಶನ್ ಅಧ್ಯಕ್ಷ ವಿ.ಮೋಹನ್‌ಕೃಷ್ಣ ಆರೋಪಿಸಿದರು.ನಗರದ ಕಿಂಗ್‌ಜಾರ್ಜ್ ಹಾಲ್‌ನಲ್ಲಿ ದೀಪಾವಳಿ ಹಬ್ಬಕ್ಕೆ ನಗರದ ೩೫ ವಾರ್ಡ್‌ಗಳ ಸಾರ್ವಜನಿಕರಿಗೆ ಉಚಿತವಾಗಿ ಪಟಾಕಿ ಬಾಕ್ಸ್ ಮತ್ತು ಸಿಹಿಯನ್ನು ವಿತರಿಸಿ ಮಾತನಾಡಿ, ಮಾಜಿ ಶಾಸಕ ಎಸ್.ರಾಜೇಂದ್ರನ್ ಅವಧಿಯಲ್ಲಿ ನಗರಸಭೆ ಸೇರಿದಂತೆ ತಾಲ್ಲೂಕಿನ ಯಾವುದೇ ಇಲಾಖೆಯಲ್ಲಿ ಭ್ರಷ್ಟಾಚಾರ ಇರಲಿಲ್ಲ ಎಂದರು.

 ಮುಂಬರಲಿರುವ ನಗರಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸುವ ಮೂಲಕ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ನಗರಸಭೆಯಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗುವುದು. ಆರ್‌ಕೆ ಫೌಂಡೇಶನ್ ವತಿಯಿಂದ ಇಡೀ ನಗರದಲ್ಲಿ ತಂಡವು ಕಾರ್ಯನಿರ್ವಹಿಸಲಿದ್ದು, ಯಾವುದೇ ಭಾಗದಲ್ಲಿ ಸಾರ್ವಜನಿಕರಿಗೆ ಚರಂಡಿ, ವಿದ್ಯುತ್ ದೀಪ, ಕುಡಿಯುವ ನೀರು ಸೇರಿದಂತೆ ಏನೇ ಸಮಸ್ಯೆಗಳು ಉಂಟಾದರೂ ಕೇವಲ ಒಂದು ದೂರವಾಣಿ ಕರೆಯನ್ನು ಮಾಡಿದಲ್ಲಿ ಕೂಡಲೇ ತಮ್ಮ ತಂಡದ ಸದಸ್ಯರು ನೆರವಿಗೆ ಧಾವಿಸಿ ಸಮಸ್ಯೆಗೆ ಪರಿಹಾರವನ್ನು ನೀಡಲಿದ್ದಾರೆ ಎಂದರು.

ಯಾವ ಪಕ್ಷಕ್ಕೂ ತಾವು ಸೇರಿಲ್ಲಕೆಲವರು ತಾವು ಬಿಜೆಪಿ ಪಕ್ಷದವರೇ, ಜೆಡಿಎಸ್ ಪಕ್ಷದವರೇ ಎಂದು ಪ್ರಶ್ನಿಸುತ್ತಿದ್ದು, ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೋ, ಇಲ್ಲವೋ ಗೊತ್ತಿಲ್ಲ. ಆದರೆ ಕೆಜಿಎಫ್ ಚಿನ್ನದ ಗಣಿ ಪ್ರದೇಶದಲ್ಲಿ ಇಲ್ಲಿ ಹುಟ್ಟಿ ಬೆಳೆದಂತಹ ಅಭ್ಯರ್ಥಿಯನ್ನು ಶಾಸಕರನ್ನಾಗಿ, ಜನಪ್ರತಿನಿಧಿಯನ್ನಾಗಿಸುವುದು ತಮ್ಮ ಧ್ಯೇಯವಾಗಿದೆ. ತಾವು ಬಿಜೆಪಿಯೂ ಅಲ್ಲ, ಜೆಡಿಎಸ್ ಅಲ್ಲ, ತಾವು ಕೆಜಿಎಫ್ ಚಿನ್ನದ ಗಣಿ ಪಕ್ಷಕ್ಕೆ ಸೇರಿದವರು ಎಂದರು.