ಸಾರಾಂಶ
ಉನ್ನತ ಸ್ಥಾನವನ್ನು ಅಲಂಕರಿಸುವ ಮಹಾನುಭಾವರು ಸೂಕ್ತ ಮಾಹಿತಿಯನ್ನು ಪಡೆದುಕೊಳ್ಳದೇ ಆರೋಪಗಳನ್ನು ಮಾಡಬಾರದು ಎಂದು ಸಂಸದ ಡಾ.ಸುಧಾಕರ್ ಹೆಸರು ಹೇಳದೆ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಟೀಕಿಸಿದರು.
ಚಿಂತಾಮಣಿ : ಉನ್ನತ ಸ್ಥಾನವನ್ನು ಅಲಂಕರಿಸುವ ಮಹಾನುಭಾವರು ಸೂಕ್ತ ಮಾಹಿತಿಯನ್ನು ಪಡೆದುಕೊಳ್ಳದೇ ಆರೋಪಗಳನ್ನು ಮಾಡಬಾರದು ಎಂದು ಸಂಸದ ಡಾ.ಸುಧಾಕರ್ ಹೆಸರು ಹೇಳದೆ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಟೀಕಿಸಿದರು.
ನಗರದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ15 ಕೋಟಿ ಹಾಗೂ ಪ್ರಥಮ ದರ್ಜೆ ಕಾಲೇಜಿನಲ್ಲಿ 10 ಕೋಟಿ ರೂ ವೆಚ್ಚದ ಕಟ್ಠಡ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ ಯಾರೇ ರಾಜಕೀಯ ಲಾಭ ಪಡೆಯಬೇಕಾದರೂ ಸೂಕ್ತ ಮಾಹಿತಿಯನ್ನು ಪಡೆದುಕೊಂಡು ಮಾತನಾಡಬೇಕೆ ಹೊರತು ಬಾಯಿಗೆ ಬಂದಂತೆ ಮಾತನಾಡಬಾರದು ಎಂದರು.
ಕೋಚಿಮುಲ್ ವಿಭಜನೆ
ಕೋಚಿಮುಲ್ ವಿಭಜನೆ ವೇಳೆ ನೀತಿ ನಿಯಮಾವಳಿಗಳನ್ನು ಪಾಲಿಸದೇ ಸರ್ವ ಸದಸ್ಯರ ಸಭೆಯನ್ನು ನಡೆಸದೇ ಆತುರಾತುರಾವಗಿ ವಿಭಜಿಸಲು ಹೊರಟ ಹಿಂದಿನ ಸರ್ಕಾರದ ಕ್ರಮವನ್ನು ತಡೆ ಹಿಡಿದ ನಮ್ಮ ಸರ್ಕಾರವು ಬಾಗೇಪಲ್ಲಿಯಲ್ಲಿ ಸರ್ವ ಸದಸ್ಯರ ಸಭೆ ಮತ್ತು ರೈತರ ನಡೆಸಿ ಪ್ರಕ್ರಿಯೆಗಳನ್ನು ನೀತಿ ನಿಯಾವಳಿಗಳಂತೆ ನಡೆಸಿ ಕಾನೂನು ಬದ್ಧವಾಗಿ ಕೋಚಿಮುಲ್ ವಿಭಜಿಸುವ ತೀರ್ಮಾನವನ್ನು ಕೈಗೊಂಡಿದೆ.
ಸರ್ಕಾರದ ನಿರ್ಧಾರವನ್ನು ರಾಜ್ಯ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದು ಈ ಪ್ರಕ್ರಿಯೆಗೆ ಉಚ್ಚನ್ಯಾಯಾಲಯವು ಸಮ್ಮತಿ ಸೂಚಿಸಿದೆ. ವಾಸ್ತವಾಂಶ ಹೀಗಿರುವಾಗ ವಿಭಜನೆಗೆ ನ್ಯಾಯಾಲಯವು ಒಪ್ಪಿಗೆ ನೀಡಿರುವುದು ಸತ್ಯಕ್ಕೆ ಸಂದ ಜಯವೆಂದು ಸಂಸದ ಡಾ. ಕೆ.ಸುಧಾಕರ್ ಹೇಳಿಕೆ ನೀಡಿರುವುದು ಅವರಿಗೆ ಮಾಹಿತಿ ಕೊರತೆ ಇದೆಯೆಂಬುದನ್ನು ಸೂಚಿಸುತ್ತದೆ ಎಂದು ಲೇವಡಿ ಮಾಡಿದರು.
6 ತಿಂಗಳಲ್ಲಿ ಚಿಮುಲ್ ಸ್ಥಾಪನೆ
ಕೋಮುಲ್ ವಿಭಜನೆಯು ವೈಜ್ಞಾನಿಕವಾಗಿ ನೀತಿ ನಿಯಮಾವಳಿಗಳಂತೆ ಆಗಿದ್ದು ಆಡಳಿತಾಧಿಕಾರಿಗಳು, ವ್ಯವಸ್ಥಾಪಕ ನಿರ್ದೇಶಕರ, ನೇಮಕಗೊಳ್ಳಲಿದ್ದು ಪ್ರಕ್ರಿಯೆಗಳು ಕಾನೂನಿನಂತೆ ನಡೆಯಲಿವೆ ಹಾಗೂ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯು ನಡೆಯಲಿದೆ, ೬ ತಿಂಗಳ ಒಳಗಾಗಿ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್) ಕಾರ್ಯನಿರ್ವಹಿಸಲು ಕ್ರಮವಹಿಸಲಾಗುತ್ತಿದೆ,
ಪ್ಯಾಕಿಂಗ್ ಘಟಕ ಬೇಕಾದ ೧೦ ಎಕರೆ ಜಮೀನನ್ನು ಒದಗಿಸುವ ನಿಟ್ಟಿನಲ್ಲಿ ತಯಾರಿ ನಡೆಸುತ್ತಿದ್ದು ಎಷ್ಟು ಎಕರೆ ನೀಡಲು ಸಾಧ್ಯವೋ ಅಷ್ಟು ಕೊಡಿಸಲು ಪ್ರಯತ್ನಿಸಲಾಗುವುದು. ಒಟ್ಟಾರೆ ವಿಭಜನೆ ಪ್ರಕ್ರಿಯೆ ವೈಜ್ಞಾನಿಕವಾಗಿ ಆಗಬೇಕೆಂಬುದು ನಮ್ಮ ಸರ್ಕಾರದ ಉದ್ದೇಶವೆಂದರು. ಸತ್ಯಕ್ಕೆ ಸಂದ ಜಯ ಕಾನೂನಾತ್ಮಕವಾಗಿ ವಿಜಭನೆ ಮಾಡಿದ್ದು ಹೊಸ ಚಿಕ್ಕಬಳ್ಳಾಪುರ ಪ್ಯಾಕಿಂಗ್ ಘಟಕ ಹೊಸದಾಗಿ ವಿಭಜನೆ ಮಾಡುವ ಉದ್ದೇಶವಿದೆಯೆಂದರು.
ಎಲ್ಲ ಶ್ರೇಯಸ್ಸು ಸುಧಾಕರ್‌ಗೆ
ಡಾ.ಕೆ.ಸುಧಾಕರ್ ಆರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಕೋವಿಡ್‌ನಲ್ಲಿ ಮೃತಪಟ್ಟ ಜನರ ಶ್ರೇಯಸ್ಸು, ಪಿಪಿಟಿ ಕಿಟ್, ಮಾಸ್ಕ್, ವೆಂಟಿಲೇಟರ್, ವಿಶೇಷ ಆಸ್ಪತ್ರೆಗಳ ಸ್ಥಾಪನೆ ವಿಚಾರದ ಕ್ರೇಡಿಟ್, ಚಾಮರಾಜನಗರದಲ್ಲಿ ಇವರ ಬೇಜವಾಬ್ದಾರಿಯಿಂದ ೨೩ ಮಂದಿ ಅಮಾಯಕರು ಬಲಿಯಾಗಿದ್ದ ಶ್ರೇಯಸ್ಸು, ಮೆಡಿಕಲ್ ಕಾಲೇಜಿನಲ್ಲಿ ಅಕ್ರಮ ನೇಮಕಾತಿಯ ಶ್ರೇಯಸ್ಸು ಸಹ ಅವರಿಗೇ ಸಲ್ಲಬೇಕೆಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಗನ್ನಾಥ್, ಉಪಾಧ್ಯಕ್ಷೆ ಕೆ.ರಾಣಿಯಮ್ಮ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಾಬುರೆಡ್ದಿ, ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ, ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಶಿವಮೂರ್ತಿ, ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ಟಿ.ಶ್ರೀನಿವಾಸ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶಪಾಲೆ ಕುಸುಮಮಂಗಳ, ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ರಮೇಶ್, ನಗರಸಭಾ ಸದಸ್ಯರಾದ ರಾಜಾಚಾರಿ, ಹರೀಶ್, ಜೈಭೀಮ್ ಮುರಳಿ, ಜಗದೀಶ್, ಸಾಧಿಕ್, ಶ್ರೀನಿವಾಸ್, ಸಿಕಂದರ್, ಮುಖಂಡರುಗಳಾದ ವೆಂಕಟರವಣಪ್ಪ, ಉಮೇಶ್, ಶೈಲಜಾ, ಸೇರಿದಂತೆ ಮತಿತ್ತರರು ಉಪಸ್ಥಿತರಿದ್ದರು.