ಕಡಿಮೆ ಬೆಲೆಗೆ ಎಕರೆಗಟ್ಟಲೆ ಸಿಎ ನಿವೇಶನ ಕೇಳಿದ್ದರು ವಿಶ್ವನಾಥ್‌ : ಸಚಿವ ಬೈರತಿ ಸುರೇಶ್‌

| Published : Oct 26 2024, 12:51 AM IST / Updated: Oct 26 2024, 05:22 AM IST

BHYRATHI SURESH

ಸಾರಾಂಶ

 ಎಚ್‌.ವಿಶ್ವನಾಥ್‌ ಮತ್ತು ಅವರ ಮಗ ನನ್ನ ಬಳಿ ಬಂದು ಕಡಿಮೆ ಬೆಲೆಗೆ ಎಕರೆಗಟ್ಟಲೆ ಸಿಎ ನಿವೇಶನ ನೀಡುವಂತೆ ಕೇಳಿದ್ದರು. ಕಾನೂನು ಬಾಹಿರವಾದ್ದರಿಂದ ಕೊಡಲಾಗದು ಎಂದಿದ್ದಕ್ಕೆ ನನ್ನ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಧಾರರಹಿತ ಆರೋಪ ಮಾಡುತ್ತಿದ್ದಾರೆ  - ಸಚಿವ ಬೈರತಿ ಸುರೇಶ್‌ ಆರೋಪಿಸಿದರು.

 ಬೆಂಗಳೂರು : ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಮತ್ತು ಅವರ ಮಗ ನನ್ನ ಬಳಿ ಬಂದು ಕಡಿಮೆ ಬೆಲೆಗೆ ಎಕರೆಗಟ್ಟಲೆ ಸಿಎ ನಿವೇಶನ ನೀಡುವಂತೆ ಕೇಳಿದ್ದರು. ಕಾನೂನು ಬಾಹಿರವಾದ್ದರಿಂದ ಕೊಡಲಾಗದು ಎಂದಿದ್ದಕ್ಕೆ ನನ್ನ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಧಾರರಹಿತ ಆರೋಪ ಮಾಡುತ್ತಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಆರೋಪಿಸಿದರು.

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವನಾಥ್‌ ಒಬ್ಬ ವಿಚಿತ್ರ ಹುಚ್ಚ. ಬೆಳಗ್ಗೆ ಎದ್ದು ಯಾರ ಮೇಲಾದರೂ ಸುಳ್ಳು ಆರೋಪ ಮಾಡದಿದ್ದರೆ ತಿಂದಿದ್ದೂ ಕರಗಲ್ಲ, ನಿದ್ರೆಯೂ ಬರುವುದಿಲ್ಲ ಎಂದು ಕೆಂಡಕಾರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸೊಸೆ ಹೆಸರಲ್ಲಿ ಹೋಟೆಲ್‌, ಪಬ್‌ ನಡೆಸುತ್ತಿದ್ದಾರೆ. ಇದರ ಬೆಲೆ ಇನ್ನೂರು-ಮುನ್ನೂರು ಕೋಟಿ ರುಪಾಯಿ. ಅದು ಬೈರತಿ ಸುರೇಶ್‌ ಕ್ಷೇತ್ರದಲ್ಲಿದೆ. ಅವರೇ ಅದರ ಮಾಸ್ಟರ್‌ ಮೈಂಡ್‌ ಎಂಬ ಸುಳ್ಳು ಹೇಳಿಕೆಯನ್ನು ವಿಶ್ವನಾಥ್‌ ನೀಡಿದ್ದಾರೆ. ಆ ವಿಶ್ವನಾಥ್‌ ಮಾಡಿರುವ ಆರೋಪದಲ್ಲಿ ಶೇ.1ರಷ್ಟು ಸತ್ಯ ಇದ್ದರೂ ಅವರು ಹೇಳಿದ ಶಿಕ್ಷೆಗೆ ಗುರಿಯಾಗಲು ನಾನು ಸಿದ್ಧ, ಇಲ್ಲದಿದ್ದರೆ ನಾವು ಹೇಳುವ ಶಿಕ್ಷೆಯನ್ನು ಅವರು ಅನುಭವಿಸಲಿ ಎಂದು ಸವಾಲು ಹಾಕಿದರು.

ಬೆಂಗಳೂರಿನ ಹೆಣ್ಣೂರು ಬಳಿ ನನ್ನ ತಾತ ಖರೀದಿ ಮಾಡಿದ್ದ ಆಸ್ತಿ ಇದೆ. ಅಲ್ಲಿ ಎರಡು ಹೋಟೆಲ್‌ಗಳು, ಮಾಲ್‌, ಪೆಟ್ರೋಲ್‌ ಬಂಕ್‌ ಇನ್ನಿತರೆ ಬ್ಯುಸಿನೆಸ್‌ ನಡೆಯುತ್ತಿದೆ. ಇದೆಲ್ಲದಕ್ಕೂ ನನ್ನ ಬಳಿ ದಾಖಲೆಗಳೂ ಇವೆ. ನನ್ನ ಪೂರ್ವಜರಿಂದ ಬಂದ ಆಸ್ತಿ ನನ್ನದು. ಅದಕ್ಕೂ ಸಿದ್ದರಾಮಯ್ಯ ಅವರಿಗಾಗಲಿ, ಅವರ ಸೊಸೆಗಾಗಲಿ ಏನು ಸಂಬಂಧ? ಅದಕ್ಕೆ ಸಂಬಂಧ ಕಲ್ಪಿಸಿ ವಿಶ್ವನಾಥ್‌ ಏಕೆ ಆರೋಪ ಮಾಡುತ್ತಿದ್ದಾರೆ? ವಿಶ್ವನಾಥ್ ಮಾತುಗಳು ಮಿತಿ ಮೀರಿವೆ. ನಾವು ಎಷ್ಟು ಅಂತ ಸಹಿಸಿಕೊಳ್ಳಬೇಕು? ಅವರ ವಿರುದ್ಧ ಮತ್ತೊಂದು ಮಾನನಷ್ಟ ಮೊಕದ್ದಮೆ ಹಾಕಿದ್ದೇವೆ. ಈ ಹಿಂದೆ ಕೋರ್ಟ್‌ ಕೂಡ ಅವರಿಗೆ ಛೀಮಾರಿ ಹಾಕಿದೆ. ಇಷ್ಟಾದರೂ ಹುಚ್ಚನಂತೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

ಸಿಎಂಗೆ ಆಗಿರುವ ನೋವು ಇವರಿಗೆ ಗೊತ್ತಾ:

ಅವರು ಕೇಳಿದಂತೆ ಸಿಎ ನಿವೇಶನ ಕೊಡಲು ಆಗುವುದಿಲ್ಲ ಎಂದು ಹೇಳಿದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ವಿರುದ್ಧ ಅಕ್ರಮ ಮುಡಾ ನಿವೇಶನದ ಆರೋಪ ಬಂತು. ಮುಖ್ಯಮಂತ್ರಿಗಳು ಮಗನ ಕಳೆದುಕೊಂಡು ಏಳೆಂಟು ವರ್ಷಗಳಾಗಿವೆ. ಈಗ ಅವರ ಮಗ ರಾಕೇಶ್‌, ಸೊಸೆ ಹೆಸರನ್ನೂ ಎಳೆದುತಂದು ವಿಶ್ವನಾಥ್‌ ವೈಯಕ್ತಿಕವಾಗಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ವಿಶ್ವನಾಥ್‌ ಅವರಿಗೂ ಒಬ್ಬ ಮಗ ಇದ್ದಾನೆ, ಸೊಸೆ ಇದ್ದಾಳೆ. ಅವರಿಗೂ ಸಿದ್ದರಾಮಯ್ಯ ಅವರಿಗೆ ಆದಂತೆ ಆದರೆ? ಪಾಪ ಹಾಗಾಗುವುದು ಬೇಡ. ನನ್ನ ವಿರುದ್ಧ ಏನಾದರೂ ಆರೋಪ ಮಾಡಲಿ ಸಹಿಸಿಕೊಳ್ಳುತ್ತೇನೆ. ಮುಖ್ಯಮಂತ್ರಿಗಳಿಗೆ 78 ವರ್ಷ ವಯಸ್ಸಾಗಿದೆ. ಅವರಿಗೆ ಸಹಿಸುವ ಶಕ್ತಿ ಇದೆಯಾ ಎಂದು ವಾಗ್ದಾಳಿ ನಡೆಸಿದರು.

ಈ ವೇಳೆ ಶಾಸಕ ಬಂಗಾರಪೇಟೆ ನಾರಾಯಣಸ್ವಾಮಿ ಉಪಸ್ಥಿತರಿದ್ದರು.

ವಿಶ್ವನಾಥ್‌ ಬ್ಲ್ಯಾಕ್ಮೇಲರ್‌, ರೋಲ್‌ಕಾಲರ್‌: ಬೈರತಿ

ಎಚ್‌.ವಿಶ್ವನಾಥ್ ಒಬ್ಬ ಥರ್ಡ್‌ ಗ್ರೇಡ್‌ ವ್ಯಕ್ತಿ. ರೋಲ್ ಕಾಲ್ ಹಾಗೂ ನೂರಕ್ಕೆ ನೂರು ಬ್ಲಾಕ್ ಮೇಲ್‌ ರಾಜಕಾರಣಿ. ಸಹಾಯ ಮಾಡಿದವರನ್ನೇ ಕಚ್ಚುವ ಸ್ವಭಾವ ವಿಶ್ವನಾಥ್‌ಗಿದೆ. ಗೊಬೆಲ್ಸ್‌ ವಂಶಸ್ಥ. ಅವರಿಗೆ ಬುದ್ಧಿಭ್ರಮಣೆ ಆಗಿದೆ. ನಿಮ್ಹಾನ್ಸ್‌ಗೆ ಸೇರಿಸುವುದು ಬಾಕಿ ಇದೆ. ಕಾಂಗ್ರೆಸ್‌ ಪಕ್ಷ ವಿಶ್ವನಾಥ್‌ ಅವರ ಅಪ್ಪನ ಮನೆ ಆಸ್ತಿಯಲ್ಲ. ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ಗೆ ಕರೆತಂದಿದ್ದು ಸೋನಿಯಾ ಗಾಂಧಿ.

- ಬೈರತಿ ಸುರೇಶ್‌, ನಗರಾಭಿವೃದ್ಧಿ ಸಚಿವ