ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಗೆ ಸೋಲು ಕಟ್ಟಿಟ್ಟ ಬುತ್ತಿ: ಶಾಸಕ ಕೆ.ಎಂ.ಉದಯ್

| Published : Oct 26 2024, 01:00 AM IST / Updated: Oct 26 2024, 05:16 AM IST

ಸಾರಾಂಶ

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ತಮ್ಮ ಕುಟುಂಬಕ್ಕೆ ಟಿಕೆಟ್ ನೀಡಬೇಕೆಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಯಸಿದ್ದರು. ಅದರಂತೆ ಈಗ ನಿಖಿಲ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವ ಮೂಲಕ ತಮ್ಮ ಕುಟುಂಬ ಪ್ರೀತಿಯನ್ನು ತೋರಿಸಿದ್ದಾರೆ.

 ಮದ್ದೂರು :  ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಜೆಡಿಎಸ್ ನಾಯಕರ ದೊಂಬರಾಟಕ್ಕೆ ಮರಳಾಗುವುದಿಲ್ಲ. ಹೀಗಾಗಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಶಾಸಕ ಕೆ.ಎಂ.ಉದಯ್ ಶುಕ್ರವಾರ ವ್ಯಂಗ್ಯವಾಡಿದರು.

ತಾಲೂಕಿನ ಕದಲೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ಉಪ ಚುನಾವಣೆಯಲ್ಲಿ ತಮ್ಮ ಕುಟುಂಬಕ್ಕೆ ಟಿಕೆಟ್ ನೀಡಬೇಕೆಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಯಸಿದ್ದರು. ಅದರಂತೆ ಈಗ ನಿಖಿಲ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವ ಮೂಲಕ ತಮ್ಮ ಕುಟುಂಬ ಪ್ರೀತಿಯನ್ನು ತೋರಿಸಿದ್ದಾರೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಬಿಜೆಪಿ ಪಕ್ಷದಲ್ಲಿ ಉಳಿದಿದ್ದರೆ ಅವರ ರಾಜಕೀಯ ಭವಿಷ್ಯಕ್ಕೆ ಹಿನ್ನಡೆಯಾಗುತ್ತಿತ್ತು. ಇದರಿಂದ ಎಚ್ಚೆತ್ತುಕೊಂಡ ಯೋಗೇಶ್ವರ್ ಒಳ್ಳೆಯ ನಿರ್ಧಾರ ಕೈಗೊಂಡು ಕಾಂಗ್ರೆಸ್ ಸೇರಿದ್ದಾರೆ. ಯೋಗೇಶ್ವರ್ ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕ್ಷೇತ್ರದ ಜನರು ಚುನಾವಣೆಯಲ್ಲಿ ಅವರನ್ನು ಕೈ ಹಿಡಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಎರಡು ಬಾರಿ ಚನ್ನಪಟ್ಟಣ ಕ್ಷೇತ್ರದಿಂದ ಆಯ್ಕೆಯಾಗಿದ್ದರೂ ಸಹ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಕೇವಲ ಕಾಲಹರಣ ಮಾಡುವ ಮೂಲಕ ತಮ್ಮ ಅವಧಿ ಮುಗಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿದ ಮತಗಳಿಂದ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯೋಗೇಶ್ವರ್‌ಗೆ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಎರಡೂ ಪಕ್ಷಗಳು ತೀರ್ಮಾನ ಮಾಡಿದ್ದರು. ಆದರೆ, ಟಿಕೆಟ್ ನೀಡುವ ಬಗ್ಗೆ ಗೊಂದಲ ಉಂಟಾಗಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೂಚನೆ ಮೇರೆಗೆ ಮಾಜಿ ಸಂಸದ ಡಿ.ಕೆ.ಸುರೇಶ್ ಮತ್ತು ಶಾಸಕ ಬಾಲಕೃಷ್ಣ ಹಾಗೂ ನಾನು ಯೋಗೇಶ್ವರ್ ಅವರೊಂದಿಗೆ ನಿರಂತರ ಮಾತುಕತೆ ನಡೆಸುವ ಮೂಲಕ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿ ಉಪ ಚುನಾವಣೆಯಲ್ಲಿ ಕಣಕ್ಕಿಳಿಸಿದ್ದೇವೆ. ಕನಿಷ್ಠ 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸುತ್ತೇವೆ ಎಂದರು.

ಉಪ ಚುನಾವಣೆಯಲ್ಲಿ ನಿಖಿಲ್‌ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ಅವರ ಕುಟುಂಬದಲ್ಲಿ ಈ ಹಿಂದೆಯೇ ತೀರ್ಮಾನವಾಗಿತ್ತು. ಆದರೆ, ಕುಮಾರಸ್ವಾಮಿ ಅವರು ಡೊಂಬರಾಟ ಆಡುವ ಮೂಲಕ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂದು ನಾಟಕವಾಡುತ್ತಿದ್ದರು ಎಂದು ದೂರಿದರು.

ಯೋಗೇಶ್ವರ್ ಬಿಜೆಪಿ ತೊರೆಯುವವರೆಗೆ ಕಾದಿದ್ದ ಕುಮಾರಸ್ವಾಮಿ ಅವರು ನಿಖಿಲ್ ಅವರನ್ನು ಮೈತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದಾರೆ. ಉಪ ಚುನಾವಣೆಯಲ್ಲೇ ನಿಖಿಲ್ ಸೋಲು ಕಟ್ಟಿಟ್ಟ ಬುತ್ತಿ ಎಂದು ವ್ಯಂಗ್ಯವಾಡಿದರು.