ಚಿಕ್ಕಬಳ್ಳಾಪುರದಲ್ಲೂ ಕೈ ಭಿನ್ನಮತ, ಬಂಡಾಯದ ಎಚ್ಚರಿಕೆ

| Published : Mar 29 2024, 12:50 AM IST / Updated: Mar 29 2024, 02:58 PM IST

Congres

ಸಾರಾಂಶ

ಚಿಕ್ಕಬಳ್ಳಾಪುರದಲ್ಲಿ ಅಭ್ಯರ್ಥಿ ಘೋಷಣೆಗೂ ಮುನ್ನವೇ ಕಾಂಗ್ರೆಸ್​ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಲೋಕಸಭಾ ಕ್ಷೇತ್ರದ ಸಚಿವರು, ಶಾಸಕರು, ಪರಿಷತ್ ಸದಸ್ಯರು, ಡಿಸಿಸಿ ಅಧ್ಯಕ್ಷರ ಅಭಿಪ್ರಾಯ ಕಡೆಗಣಿಸಿರುವ ಆರೋಪ ಕೇಳಿಬಂದಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್​​ಗೆ ಬಂಡಾಯದ ಬಿಸಿ ಜೋರಾಗಿ ತಟ್ಟುತ್ತಿದೆ. ಕೋಲಾರ ಕ್ಷೇತ್ರ ಟಿಕೆಟ್‌ಗೆ ವಿಚಾರದಲ್ಲಿ ಒಂದು ಬಣ ರಾಜೀನಾಮೆ ನೀಡುವ ಹಂತಕ್ಕೆ ತಲುಪಿತ್ತು. ಈಗ ಚಿಕ್ಕಬಳ್ಳಾಪುರ ಟಿಕೆಟ್‌ ವಿಷಯದಲ್ಲೂ ಬಂಡಾಯದ ಪ್ರಹಸನಕ್ಕೆ ವೇದಿಕೆ ಸಿದ್ಧವಾಗಿದೆ.ಒಂದೆಡೆ ಕೋಲಾರದಲ್ಲಿ ಸಚಿವ ಕೆಹೆಚ್​ ಮುನಿಯಪ್ಪ ಸಂಬಂಧಿಕರಿಗೆ ಟಿಕೆಟ್ ನೀಡುವುದನ್ನು ವಿರೋಧಿಸಿ ಐವರು ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದರೆ ಇದೀಗ ಚಿಕ್ಕಬಳ್ಳಾಪುರದಲ್ಲಿ ಅಂಥದ್ದೇ ಆತಂಕ ಎದುರಾಗಿದೆ.

ಹೈಕಮಾಂಡ್‌ ವಿರುದ್ಧ ಆಕ್ರೋಶ

ಚಿಕ್ಕಬಳ್ಳಾಪುರದಲ್ಲಿ ಅಭ್ಯರ್ಥಿ ಘೋಷಣೆಗೂ ಮುನ್ನವೇ ಕಾಂಗ್ರೆಸ್​ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಲೋಕಸಭಾ ಕ್ಷೇತ್ರದ ಸಚಿವರು, ಶಾಸಕರು, ಪರಿಷತ್ ಸದಸ್ಯರು, ಡಿಸಿಸಿ ಅಧ್ಯಕ್ಷರ ಅಭಿಪ್ರಾಯ ಕಡೆಗಣಿಸಿರುವ ಆರೋಪ ಕೇಳಿಬಂದಿದೆ. ಕ್ಷೇತ್ರದ ಮುಖಂಡರ ಅಭಿಪ್ರಾಯ ಕಡೆಗಣಿಸಿ ರಕ್ಷಾ ರಾಮಯ್ಯಗೆ ಟಿಕೆಟ್ ನೀಡುವ ಹುನ್ನಾರ ನಡೆಯುತ್ತಿದೆ. ಒಂದು ವೇಳೆ ಅವರಿಗೆ ಟಿಕೆಟ್ ಘೋಷಣೆಯಾದರೆ ಕೋಲಾರದ ರೀತಿಯಲ್ಲೇ ನಾವೂ ಸಹ ಸಾಮೂಹಿಕವಾಗಿ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಚಿಕ್ಕಬಳ್ಳಾಪುರದ ಕಾಂಗ್ರೆಸ್ ನಾಯಕರು ಎಚ್ಚರಿಕೆ ನೀಡಿದ್ದಾರೆ.

ಸ್ಥಳೀಯರಿಗೇ ಟಿಕೆಟ್‌ ಕೊಡಿ

ಈ ಮಧ್ಯೆ, ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಹೈಕಮಾಂಡ್​ಗೆ ಸ್ಥಳೀಯ ನಾಯಕರು ಶಿಪಾರಸು ಮಾಡಿರುವ ದಾಖಲೆಗಳು ಕನ್ನಡಪ್ರಭಕ್ಕೆ ಲಭ್ಯವಾಗಿದೆ. ರಕ್ಷಾ ರಾಮಯ್ಯ ಬದಲು ಮಾಜಿ ಸಂಸದ ಡಾ.ಎಂ.ವೀರಪ್ಪ ಮೊಯಿಲಿ ಅಥವಾ ಮಾಜಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿಗೆ ಟಿಕೆಟ್ ನೀಡುವಂತೆ ಕ್ಷೇತ್ರದ ಸಚಿವರು ಕಾಂಗ್ರೆಸ್ ಶಾಸಕರು, ವಿಧಾನ ಪರಿಷತ್ ಸದಸ್ಯರು, ಡಿಸಿಸಿ ಅಧ್ಯಕ್ಷರು ಒತ್ತಾಯಿಸಿದ್ದಾರೆ. ಕ್ಷೇತ್ರಕ್ಕೆ ಸಂಬಂಧವಿಲ್ಲದವರಿಗೆ ಟಿಕೆಟ್ ನೀಡಿದರೆ ಬಂಡಾಯದ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.ಮೊಯ್ಲಿ, ಶಿವಶಂಕರ ರೆಡ್ಡಿ ಮುನ್ನೆಲೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ಶಾಸಕರಾದ ಎಸ್ಎನ್ ಸುಬ್ಬಾರೆಡ್ಡಿ, ಶರತ್ ಬಚ್ಚೇಗೌಡ, ಪುಟ್ಟಸ್ವಾಮಿ ಗೌಡ, ಪ್ರದೀಪ್ ಈಶ್ವರ್, ಎನ್.ಶ್ರೀನಿವಾಸಯ್ಯ, ಎಂಎಲ್​​ಸಿ ಎಸ್.ರವಿ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದ ಕೆ.ಎನ್.ಕೇಶವರೆಡ್ಡಿ, ಸಿ.ಆರ್.ಗೌಡ, ಮಾಜಿ ಶಾಸಕರಾದ ಎನ್.ಎಚ್.ಶಿವಶಂಕರ ರೆಡ್ಡಿ, ಟಿ.ವೆಂಕಟರಮಣಯ್ಯ ಇವರು ಡಾ.ಎಂ.ವೀರಪ್ಪಮೊಯಿಲಿ ಹಾಗೂ ಎನ್.ಎಚ್. ಶಿವಶಂಕರ ರೆಡ್ಡಿ ಹೆಸರನ್ನು ಶಿಪಾರಸ್ಸು ಮಾಡಿದ್ದಾರೆ. ವರಿಷ್ಠರಿಗೆ ಹೊಸ ತಲೆನೋವು

ಈ ಬೆಳವಣಿಗೆ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​​ಗೆ ಹೊಸ ತಲೆನೋವು ತಂದೊಡ್ಡುವ ಎಲ್ಲ ಸಾಧ್ಯತೆ ಇದೆ. ಒಂದೆಡೆ, ಕೋಲಾರದಲ್ಲಿ ಭುಗಿಲೆದ್ದಿರುವ ಭಿನ್ನಮತದ ಬೆಂಕಿಯನ್ನು ನಂದಿಸಲು ಅವರು ಯತ್ನಿಸುತ್ತಿದ್ದರೆ ಇದೀಗ ಚಿಕ್ಕಬಳ್ಳಾಪುರದಲ್ಲಿ ಅಂಥದ್ದೇ ಸಮಸ್ಯೆ ಸೃಷ್ಟಿಯಾಗುವ ಎಲ್ಲ ಸಾಧ್ಯತೆ ಗೋಚರಿಸಿದೆ.