ಮೈಸೂರಿನಲ್ಲಿ ನಾಲ್ಕು ಬಾರಿ, ಚಾಮರಾಜನಗರದಲ್ಲಿ ಒಮ್ಮೆ ‘ಅರಳಿದ ಕಮಲ’..!

| Published : Mar 29 2024, 12:48 AM IST

ಸಾರಾಂಶ

ಮೈಸೂರಿನಿಂದ ತಲಾ ಎರಡು ಬಾರಿ ಸಿ.ಎಚ್. ವಿಜಯಶಂಕರ್, ಪ್ರತಾಪ್ ಸಿಂಹ ಆಯ್ಕೆ, ತೋಂಟದಾರ್ಯಕ್ಕೆ ಎರಡು ಬಾರಿ, ಒಡೆಯರ್ಗೆ ಒಮ್ಮೆ ಸೋಲು, ಚಾಮರಾಜನಗರದಲ್ಲಿ ಎರಡು ಬಾರಿ ಸ್ಪರ್ಧಿಸಿ ಗಮನ ಸೆಳೆದಿದ್ದ ಎಲ್. ಶಿವಲಿಂಗಯ್ಯ, ಒಮ್ಮೆ ಲೋಕಶಕ್ತಿಗೆ, ಎರಡು ಬಾರಿ ಜೆಡಿಯುಗೆ ಸ್ಥಾನ ಬಿಟ್ಟುಕೊಟ್ಟಿದ್ದರು, ಚಾಮರಾಜನಗರದಲ್ಲಿ ಶ್ರೀನಿವಾಸಪ್ರಸಾದ್ ಒಮ್ಮೆ ಜೆಡಿಯು, ಮತ್ತೊಮ್ಮೆ ಬಿಜೆಪಿಯಿಂದ ಆಯ್ಕೆ

ಅಂಶಿ ಪ್ರಸನ್ನಕುಮಾರ್

ಕನ್ನಡಪ್ರಭ ವಾರ್ತೆ ಮೈಸೂರು

ಒಂದು ಕಾಲಕ್ಕೆ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ನಾಲ್ಕು ಬಾರಿ, ಚಾಮರಾಜನಗರದಲ್ಲಿ ಒಮ್ಮೆ ಕಮಲ ಅರಳಿಸಿದೆ.

ಮೈಸೂರಿನಲ್ಲಿ 1952 ರಲ್ಲಿ ಕಾಂಗ್ರೆಸ್, ಕಿಸಾನ್ ಮಜ್ದೂರ್ ಪ್ರಜಾಪಾರ್ಟಿ (ಕೆಎಂಪಿಪಿ), 1957 ರಲ್ಲಿ ಕಾಂಗ್ರೆಸ್, ಪ್ರಜಾ ಸೋಷಲಿಸ್ಟ್ ಪಾರ್ಟಿ (ಪಿಎಸ್ಪಿ) ಮಾತ್ರ ಸ್ಪರ್ಧಿಸಿದ್ದವು. 1962 ರಲ್ಲಿ ಮೈಸೂರಿನಲ್ಲಿ ಕಾಂಗ್ರೆಸ್, ಪಿಎಸ್ಪಿ, ಸ್ವತಂತ್ರ ಪಾರ್ಟಿ, ಜನಸಂಘ ಸ್ಪರ್ಧಿಸಿದವು. ಜನಸಂಘದ ವಿ. ಶ್ರೀನಿವಾಸ ಅಯ್ಯಂಗಾರ್ ಅವರು ಶೇ.4.17 ರಷ್ಟು ಮತಗಳನ್ನು ಪಡೆದರು. ಆ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಎಂ. ಶಂಕರಯ್ಯ ಶೇ.42.85 ರಷ್ಟು ಮತಗಳೊಂದಿಗೆ ಗೆದ್ದರು.

1967 ರಲ್ಲಿ ಮೈಸೂರಿನಲ್ಲಿ ಕಾಂಗ್ರೆಸ್, ಎಸ್ಎಸ್ಪಿ, ಸ್ವತಂತ್ರ ಪಾರ್ಟಿ ಜೊತೆಗೆ ಭಾರತೀಯ ಜನಸಂಘದಿಂದ ಜೆ.ಎಸ್. ರಾಮನ್ ಕಣಕ್ಕಿಳಿದಿದ್ದರು. ಆಗ ಗೆದ್ದ ಕಾಂಗ್ರೆಸ್ಸಿನ ಎಚ್.ಡಿ. ತುಳಸಿದಾಸ್ ಶೇ.40.09 ರಷ್ಟು ಮತಗಳನ್ನು ಪಡೆದರೆ ರಾಮನ್ ಪಡೆದಿದ್ದು ಕೇವಲ ಶೇ. 6.83 ರಷ್ಟು ಮತಗಳು ಮಾತ್ರ.

ಚಾಮರಾಜನಗರದಲ್ಲಿ 1962 ರಲ್ಲಿ ಕಾಂಗ್ರೆಸ್, ಪ್ರಜಾ ಸೋಷಲಿಸ್ಟ್ ಪಾರ್ಟಿ, 1967 ರಲ್ಲಿ ಕಾಂಗ್ರೆಸ್ ಸ್ವತಂತ್ರ ಪಾರ್ಟಿ ಮಾತ್ರ ಸ್ಪರ್ಧಿಸಿದ್ದವು. 1971 ರಲ್ಲಿ ಎರಡೂ ಕಡೆ ಕಾಂಗ್ರೆಸ್ ಮತ್ತು ಸಂಸ್ಥಾ ಕಾಂಗ್ರೆಸ್ ಸ್ಪರ್ಧಿಸಿದ್ದವು. ಮೈಸೂರಿನಲ್ಲಿ ಕಾಂಗ್ರೆಸ್ಸಿನ ಎಚ್.ಡಿ. ತುಳಸಿದಾಸ್ ಸಂಸ್ಥಾ ಕಾಂಗ್ರೆಸ್ಸಿನ ಎಂ.ಎಲ್. ತಿಮ್ಮೇಗೌಡರನ್ನು, ಚಾಮರಾಜನಗರದಲ್ಲಿ ಕಾಂಗ್ರೆಸ್ಸಿನ ಎಸ್.ಎಂ. ಸಿದ್ದಯ್ಯ ಅವರು ಸಂಸ್ಥಾ ಕಾಂಗ್ರೆಸ್ಸಿನ ಎನ್.ಸಿ. ಬಿಳಿಗಿರಿರಂಗಯ್ಯ ಅವರನ್ನು ಸೋಲಿಸಿದರು.

1977 ರ ಹೊತ್ತಿಗೆ ಜನತಾ ಪಕ್ಷ ಅಸ್ತಿತ್ವಕ್ಕೆ ಬಂದಿತ್ತು. ಹೀಗಾಗಿ ಎರಡೂ ಕಡೆಯೂ ಭಾರತೀಯ ಲೋಕದಳ (ಬಿಎಲ್ಡಿ) ಹೆಸರಿನಲ್ಲಿ ಅಭ್ಯಥಿಗಳು ಕಣಕ್ಕಿಳಿದಿದ್ದರು. ಮೈಸೂರಿನಲ್ಲಿ ಕಾಂಗ್ರೆಸ್ಸಿನ ಎಚ್.ಡಿ. ತುಳಸಿದಾಸ್ ಅವರು ಬಿಎಲ್ಡಿಯ ಎಂ.ಎಸ್. ಗುರುಪಾದಸ್ವಾಮಿ ಅವರನ್ನು, ಚಾಮರಾಜನಗರದಲ್ಲಿ ಕಾಂಗ್ರೆಸ್ಸಿನ ಬಿ. ರಾಚಯ್ಯ ಅವರು ಬಿಎಲ್ಡಿಯ ವಿ. ಶ್ರೀನಿವಾಸಪ್ರಸಾದ್ ಅವರನ್ನು ಸೋಲಿಸಿದರು.

1980 ರಲ್ಲಿ ಭಾರತೀಯ ಜನತಾಪಾರ್ಟಿ ರಚನೆಯಾದರೂ ಎರಡೂ ಕಡೆಯೂ ಸ್ಪರ್ಧಿಸಿರಲಿಲ್ಲ. 1984ರ ಚುನಾವಣೆಯಲ್ಲಿ ಕೂಡ ಸ್ಪರ್ಧಿಸಲಿಲ್ಲ.

ಬಿಜೆಪಿಯ ಮೊದಲ ಅಭ್ಯರ್ಥಿ ತೋಂಟದಾರ್ಯ:

1989 ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮೊದಲ ಬಾರಿಗೆ ತೋಂಟದಾರ್ಯ ಸ್ಪರ್ಧಿಸಿ, 25,398 ಮತಗಳನ್ನು ಪಡೆದರು. ಚಾಮರಾಜನಗರದಲ್ಲಿ ಯಾರೂ ಸ್ಪರ್ಧಿಸಲಿಲ್ಲ. 1991ರ ಚುನಾವಣೆ ವೇಳೆಗೆ ದೇಶಾದ್ಯಂತ ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಪ್ರಕರಣ ಭಾರಿ ಸದ್ದು ಮಾಡಿತ್ತು. ಚಾಮರಾಜನಗರದಿಂದ ಎಲ್. ಶಿವಲಿಂಗಯ್ಯ ಸ್ಪರ್ಧಿಸಿ 1,48,456 ಮತಗಳನ್ನು ಪಡೆದು ಗಮನ ಸೆಳೆದರು. ಆಗ ಗೆದ್ದಿದ್ದು ಕಾಂಗ್ರೆಸ್ಸಿನ ವಿ. ಶ್ರೀನಿವಾಸಪ್ರಸಾದ್.

ಮೈಸೂರಿನಿಂದ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬಿಜೆಪಿಯಿಂದ ಸ್ಪರ್ಧಿಸಿ 2,08,999 ಮತಗಳನ್ನು ಪಡೆದು, ಕಾಂಗ್ರೆಸ್ಸಿನ ಚಂದ್ರಪ್ರಭಾ ಅರಸು ಅವರ ಎದುರು ಸೋತರು.

1996 ರಲ್ಲಿ ಮತ್ತೆ ಚಾಮರಾಜನಗರದಿಂದ ಎಲ್. ಶಿವಲಿಂಗಯ್ಯ ಸ್ಪರ್ಧಿಸಿ 94,373 ಮತಗಳಿಗೆ ತೃಪ್ತಿಪಟ್ಟುಕೊಂಡರು. ಮೈಸೂರಿನಿಂದ ತೋಂಟದಾರ್ಯ ಎರಡನೇ ಬಾರಿಗೆ ಸ್ಪರ್ಧಿಸಿ 1,62,630 ಮತಗಳನ್ನು ಪಡೆದರು. 1998ರ ಚುನಾವಣೆಯಲ್ಲಿ ಒಡೆಯರ್ ಸ್ಪರ್ಧಿಸಿರಲಿಲ್ಲ . ಬಿಜೆಪಿ ಆಗ ಹುಣಸೂರಿನ ಶಾಸಕರಾಗಿದ್ದ ಕುರುಬ ಜನಾಂಗದ ಸಿ.ಎಚ್. ವಿಜಯಶಂಕರ್ ಅವರಿಗೆ ಟಿಕೆಟ್ ನೀಡಿತ್ತು. ಇದರ ಲಾಭ ಪಡೆದ ಅವರು ಗೆಲುವಿನ ನಗೆ ಬೀರಿದರು. ವಿಜಯಶಂಕರ್ ಅವರಿಗೆ 3,55,846 ಮತಗಳು, ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಎಸ್. ಚಿಕ್ಕಮಾದು ಅವರಿಗೆ 2,52,822 ಮತಗಳು ದೊರೆತವು.

ಚಾಮರಾಜನಗರ ಕ್ಷೇತ್ರವನ್ನು ಬಿಜೆಪಿಯು ಲೋಕಶಕ್ತಿಗೆ ಬಿಟ್ಟುಕೊಟ್ಟಿತ್ತು. ಸುಶೀಲಾ ಕೇಶವಮೂರ್ತಿ ಸ್ಪರ್ಧಿಸಿ. 75,165 ಮತಗಳನ್ನು ಗಳಿಸಿದ್ದರು. 1999 ರಲ್ಲಿ ಮೈಸೂರಿನಿಂದ ಸಿ.ಎಚ್. ವಿಜಯಶಂಕರ್ ಮತ್ತೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಆದರೆ ಕಾಂಗ್ರೆಸ್ಸಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಎದುರು 13,431 ಮತಗಳ ಅಂತರದಿಂದ ಸೋತರು. ಚಾಮರಾಜನಗರ ಟಿಕೆಟ್ ಅನ್ನು ಜೆಡಿಯುನ ವಿ. ಶ್ರೀನಿವಾಸಪ್ರಸಾದ್ ಅವರಿಗೆ ಬಿಟ್ಟುಕೊಡಲಾಗಿತ್ತು. ಅವರು ಗೆದ್ದರು. 2004 ರಲ್ಲಿ ಮೈಸೂರಿನಿಂದ ಬಿಜೆಪಿಯ ಸಿ.ಎಚ್. ವಿಜಯಶಂಕರ್ ಎರಡನೇ ಬಾರಿ ಗೆದ್ದರು. ಚಾಮರಾಜನಗರದಲ್ಲಿ ಜೆಡಿಯುಗೆ ಸ್ಥಾನಬಿಟ್ಟು ಕೊಡಲಾಗಿತ್ತು. ಎನ್. ಚಾಮರಾಜ್ ಅಭ್ಯರ್ಥಿಯಾಗಿ 91,716 ಮತಗಳನ್ನು ಗಳಿಸಿದ್ದರು.

2009ರ ಚುನಾವಣೆ ವೇಳೆಗೆ ಮೈಸೂರು ಸಾಮಾನ್ಯ ಕ್ಷೇತ್ರದ ಸ್ಪರೂಪವೇ ಬದಲಾಗಿತ್ತು. ಕೆ.ಆರ್. ನಗರ ಪಕ್ಕದ ಮಂಡ್ಯಕ್ಕೂ, ಎಚ್.ಡಿ. ಕೋಟೆ ಪಕ್ಕದ ಚಾಮರಾಜನಗರಕ್ಕೂ ಸೇರ್ಪಡೆಯಾಗಿತ್ತು. ಹೊಸದಾಗಿ ಇಡೀ ಕೊಡಗು ಜಿಲ್ಲೆ ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬಂದಿತ್ತು. ಬಿಜೆಪಿಯಿಂದ ವಿಜಯಶಂಕರ್ ನಾಲ್ಕನೇ ಬಾರಿ ಸ್ಪರ್ಧಿಸಿ, ಕಾಂಗ್ರೆಸ್ಸಿನ ಎಚ್. ವಿಶ್ವನಾಥ್ ಅವರ ಎದುರು 7,691 ಮತಗಳ ಅಂತರದಿಂದ ಎರಡನೇ ಸೋಲು ಅನುಭವಿಸಿದರು. ಚಾಮರಾಜನಗರದಲ್ಲಿ ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ ಬಿಜೆಪಿ ಅಭ್ಯರ್ಥಿಯಾಗಿ ಕಾಂಗ್ರೆಸ್ಸಿನ ಆರ್. ಧ್ರುವನಾರಾಯಣ ಅವರಿಗೆ ಪ್ರಬಲ ಪೈಪೋಟಿ ನೀಡಿ, 4002 ಮತಗಳ ಅಂತರದಿಂದ ಸೋತರು.

2014ರ ಚುನಾವಣೆಯಲ್ಲಿ ಮೈಸೂರಿನಿಂದ ಬಿಜೆಪಿಯ ಪ್ರತಾಪ್ ಸಿಂಹ ಕಾಂಗ್ರೆಸ್ಸಿನ ಎಚ್. ವಿಶ್ವನಾಥ್ ಅವರನ್ನು 31,600 ಮತಗಳ ಅಂತರದಿಂದ ಸೋಲಿಸಿದರು. ಅವರಿಗೆ 5,03,908 ವಿಶ್ವನಾಥ್ ಅವರಿಗೆ 4,72,300 ಮತಗಳು ದೊರೆತವು.

ಆದರೆ ಚಾಮರಾಜನಗರದಲ್ಲಿ ಎ.ಆರ್. ಕೃಷ್ಣಮೂರ್ತಿ ಮತ್ತೆ ಕಾಂಗ್ರೆಸ್ಸಿನ ಆರ್. ಧ್ರುವನಾರಾಯಣ ಅವರೆದುರು 1,41.182 ಮತಗಳ ಭಾರಿ ಅಂತರದಿಂದ ಸೋತರು. ಧ್ರುವನಾರಾಯಣ- 5,67,782, ಕೃಷ್ಣಮೂರ್ತಿ- 4,26,600 ಮತಗಳನ್ನು ಗಳಿಸಿದರು.

2019 ರಲ್ಲಿ ಮೈಸೂರಿನಲ್ಲಿ ಬಿಜೆಪಿಯ ಪ್ರತಾಪ್ ಸಿಂಹ ಅವರು ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟದ ಸಿ.ಎಚ್. ವಿಜಯಶಂಕರ್ ಅವರನ್ನು 1,38.647 ಮತಗಳ ಭಾರಿ ಅಂತರದಿಂದ ಸೋಲಿಸಿದರು. ಪ್ರತಾಪ್ ಸಿಂಹ- 6,88,974, ವಿಜಯಶಂಕರ್- 5,50,327 ಮತಗಳನ್ನು ಗಳಿಸಿದರು.

ಚಾಮರಾಜನಗರದಲ್ಲಿ ಬಿಜೆಪಿಯ ವಿ. ಶ್ರೀನಿವಾಸಪ್ರಸಾದ್ ಅವರು ಕಾಂಗ್ರೆಸ್ಸಿನ ಆರ್. ಧ್ರುವನಾರಾಯಣ್ ಅವರನ್ನು 1m817 ಮತಗಳ ಅಂತರದಿಂದ ಸೋಲಿಸಿದರು. ಶ್ರೀನಿವಾಸಪ್ರಸಾದ್- 5,68,537, ಧ್ರುವನಾರಾಯಣ- 5,66,720 ಮತಗಳನ್ನು ಗಳಿಸಿದರು.

ಈ ಬಾರಿ ಮೈಸೂರಿನಿಂದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಚಾಮರಾಜನಗರದಿಂದ ಮಾಜಿ ಶಾಸಕ ಎಸ್. ಬಾಲರಾಜ್ ಅವರು ಬಿಜೆಪಿ ಹುರಿಯಾಳುಗಳು. ಕ್ರಮವಾಗಿ ಕಾಂಗ್ರೆಸ್ನಿಂದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್ ಎದುರಾಳಿಗಳು.