ಸಾರಾಂಶ
ಬೆಂಗಳೂರು : ಕೇಂದ್ರ ಸರ್ಕಾರ, ಬಿಜೆಪಿ ಮುಖಂಡರು, ವಿಶ್ವ ಹಿಂದೂ ಪರಿಷತ್ ಮತ್ತು ಆರೆಸ್ಸೆಸ್‌ನವರಿಗೆ ಗೋವುಗಳ ಬಗ್ಗೆ ನಿಜವಾಗಿಯೂ ಪ್ರೀತಿ ಇದ್ದರೆ ಭಾರತದಿಂದ ವಿದೇಶಗಳಿಗೆ ಆಗುತ್ತಿರುವ ಗೋಮಾಂಸ ರಫ್ತನ್ನು ನಿಲ್ಲಿಸಬೇಕೆಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಇದೇ ವೇಳೆ ಒತ್ತಾಯಿಸಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಗೋಮಾಂಸ ರಫ್ತಿನಲ್ಲಿ ಭಾರತ 3ನೇ ಸ್ಥಾನದಲ್ಲಿತ್ತು. ಬಿಜೆಪಿ ನೇತೃತ್ವದ ಸರ್ಕಾರ ಬಂದ ಬಳಿಕ 2ನೇ ಸ್ಥಾನಕ್ಕೇರಿದೆ. ಇವರಿಗೆ ಗೋವುಗಳ ಬಗ್ಗೆ ನಿಜವಾದ ಪ್ರೀತಿ ಇದ್ದರೆ, ಗೋಮಾಂಸ ರಪ್ತನ್ನು ನಿಲ್ಲಿಸಬೇಕು ಎಂದು ನಾನು ಕೇಂದ್ರ ಸರ್ಕಾರ, ಎಲ್ಲಾ ಬಿಜೆಪಿ ಮುಖಂಡರು, ವಿಶ್ವ ಹಿಂದೂ ಪರಿಷತ್, ಆರೆಸ್ಸೆಸ್‌ನವರಿಗೆ ಒತ್ತಾಯ ಮಾಡುತ್ತೇನೆ. ಇದನ್ನು ನಿಲ್ಲಿಸಿದರೆ ಮಾತ್ರ ಗೋವುಗಳು ಉಳಿಯುತ್ತದೆ. ಹಿಂದೂ ಧರ್ಮ, ಗೋ ಸಂರಕ್ಷಣೆ ಹೆಸರಲ್ಲಿ ಬರೀ ರಾಜಕೀಯ ಮಾಡುವುದರಿಂದ ಗೋವುಗಳನ್ನು ಉಳಿಸಲು ಸಾಧ್ಯವಿಲ್ಲ ಎಂದರು.
ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಬರೀ ಗೋವುಗಳ ಹತ್ಯೆ ಮಾತ್ರವಲ್ಲ ಯಾವುದೇ ಪ್ರಾಣಿಗಳ ಹತ್ಯೆಯನ್ನೂ ಮಾಡಬಾರದು. ಯಾವ ಪ್ರಾಣಿಯ ಹತ್ಯೆ ಮಾಡುವ ಅಧಿಕಾರವೂ ನಮಗಿಲ್ಲ. ಪ್ರಪಂಚದಲ್ಲಿ 84 ಲಕ್ಷ ಜೀವರಾಶಿಗಳಿವೆ. ಆ ಎಲ್ಲಾ ಪ್ರಾಣಿಗಳನ್ನೂ ಸೃಷ್ಟಿಸಿದ ದೇವರು ಅವುಗಳಿಗೆ ಅವುಗಳದ್ದೇ ಆಹಾರ ವ್ಯವಸ್ಥೆ ಸೇರಿದಂತೆ ಬದುಕುವ ಹಕ್ಕು ಕೊಟ್ಟಿದ್ದಾನೆ. ಹಾಗಾಗಿ ಯಾವ ಪ್ರಾಣಿಗಳ ಹತ್ಯೆಯೂ ಆಗಬಾರದು. ಸಂಪೂರ್ಣ ಪ್ರಾಣಿ ಹತ್ಯೆ ನಿಲ್ಲಬೇಕು ಎಂದರು.