ಹಂದಿಕುಸ್ತಿ ಬಗ್ಗೆ ಜಂಗಿಕುಸ್ತಿ! - ಎಚ್‌ಡಿಕೆ-ಐಪಿಎಸ್‌ ಅಧಿಕಾರಿ ಕಿತ್ತಾಟಕ್ಕೆ ಘಟಾನುಘಟಿಗಳ ಎಂಟ್ರಿ

| Published : Sep 30 2024, 07:39 AM IST

Union Minister HD Kumaraswamy
ಹಂದಿಕುಸ್ತಿ ಬಗ್ಗೆ ಜಂಗಿಕುಸ್ತಿ! - ಎಚ್‌ಡಿಕೆ-ಐಪಿಎಸ್‌ ಅಧಿಕಾರಿ ಕಿತ್ತಾಟಕ್ಕೆ ಘಟಾನುಘಟಿಗಳ ಎಂಟ್ರಿ
Share this Article
  • FB
  • TW
  • Linkdin
  • Email

ಸಾರಾಂಶ

 . ಕುಮಾರಸ್ವಾಮಿ ವಿಚಾರವಾಗಿ ಸಿಬ್ಬಂದಿಗೆ ಬರೆದ ಪತ್ರದಲ್ಲಿ ಲೋಕಾಯುಕ್ತ ಅಧಿಕಾರಿ ಎಂ.ಚಂದ್ರಶೇಖರ್‌ ಅವರು ‘ಹಂದಿಗಳ ಜತೆಗೆ ಕುಸ್ತಿಯಾಡಲ್ಲ’ ಎಂದು ಉಲ್ಲೇಖಿಸಿರುವುದು ಆಡಳಿತ ಮತ್ತು ಪ್ರತಿಪಕ್ಷ ನಡುವೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

ಬೆಂಗಳೂರು : ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮತ್ತು ಲೋಕಾಯುಕ್ತ ಎಡಿಜಿಪಿ ನಡುವಿನ ಕಿತ್ತಾಟ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಕುಮಾರಸ್ವಾಮಿ ವಿಚಾರವಾಗಿ ಸಿಬ್ಬಂದಿಗೆ ಬರೆದ ಪತ್ರದಲ್ಲಿ ಲೋಕಾಯುಕ್ತ ಅಧಿಕಾರಿ ಎಂ.ಚಂದ್ರಶೇಖರ್‌ ಅವರು ‘ಹಂದಿಗಳ ಜತೆಗೆ ಕುಸ್ತಿಯಾಡಲ್ಲ’ ಎಂದು ಉಲ್ಲೇಖಿಸಿರುವುದು ಆಡಳಿತ ಮತ್ತು ಪ್ರತಿಪಕ್ಷ ನಡುವೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

ತಮ್ಮನ್ನು ಭ್ರಷ್ಟ ಎಂದು ಕರೆದಿದ್ದ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆರೋಪಕ್ಕೆ ಸಂಬಂಧಿಸಿ ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್‌ ಅವರು ಸಹೋದ್ಯೋಗಿಗಳಿಗೆ ಬರೆದ ಪತ್ರದಲ್ಲಿ, ಹಂದಿಗಳೊಂದಿಗೆ ಯಾವತ್ತಿಗೂ ಕುಸ್ತಿಯಾಡಬೇಡಿ. ನೀವಿಬ್ಬರೂ ಕೊಳಕಾಗುತ್ತೀರಿ ಮತ್ತು ಹಂದಿ ಅದನ್ನು ಇಷ್ಟಪಡುತ್ತದೆ ಎಂದು ಉಲ್ಲೇಖಿಸಿದ್ದರು. ಇದರ ಕುರಿತು ಇದೀಗ ಕಾಂಗ್ರೆಸ್‌ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರ ಶುರುವಾಗಿದ್ದು, ಕುಮಾರಸ್ವಾಮಿ ಅವರು ಮತ್ತೊಮ್ಮೆ ಎಡಿಜಿಪಿ ವಿರುದ್ಧ ಕಿಡಿಕಾರಿದ್ದಾರೆ.

ಲೋಕಾಯುಕ್ತ ಐಜಿಪಿ ಒಬ್ಬ ಬ್ಲ್ಯಾಕ್‌ ಮೇಲರ್‌, ಕ್ರಿಮಿನಲ್‌. ಆ ವ್ಯಕ್ತಿ ಬಗ್ಗೆ ಹೇಳಿದ್ದು ಸತ್ಯಮೇವ ಜಯತೇ ಕಾರಣಕ್ಕಾಗಿಯೇ. ಅವರು ಸಹೋದ್ಯೋಗಿಗಳಿಗೆ ಬರೆದಿರುವ ಪತ್ರವನ್ನು ಚೆನ್ನಾಗಿ ಸಿದ್ಧ ಮಾಡಿಕೊಟ್ಟಿದ್ದಾರೆ. ಆ ಪತ್ರವನ್ನು ಯಾರು, ಎಲ್ಲಿ ತಯಾರು ಮಾಡಿಕೊಟ್ಟರು ಎನ್ನುವುದು ಗೊತ್ತಿದೆ. ನಾನು ದಾಖಲೆ ಇಲ್ಲದೆ ಮಾತನಾಡುವುದಿಲ್ಲ. ನಾನು ಶನಿವಾರ ಬೆಳಗ್ಗೆ ಮಾಧ್ಯಮಗೋಷ್ಠಿ ಮಾಡಿದ ಮೇಲೆ, ಸಂಜೆ ಆ ಅಧಿಕಾರಿ ಎಲ್ಲಿ ಹೋಗಿದ್ದ ಎಂಬ ಮಾಹಿತಿ ಇದೆ. ಆ ಪತ್ರವನ್ನು ಅಲ್ಲಿ ಯಾವ ಕಾನೂನು ಪಂಡಿತರು ರೆಡಿ ಮಾಡಿಕೊಟ್ಟರು, ಅವರೊಂದಿಗೆ ಇನ್ನೊಬ್ಬರು ಯಾರಿದ್ದರು ಎನ್ನುವುದು ನನಗೆ ಗೊತ್ತಿದೆ ಎಂದು ಕುಮಾರಸ್ವಾಮಿ ಅವರು ಪರೋಕ್ಷವಾಗಿ ಕಾಂಗ್ರೆಸ್‌ ಮುಖಂಡರ ಹೆಸರೇಳದೆ ಮತ್ತೊಮ್ಮೆ ಗುಡುಗಿದರೆ, ಮತ್ತೊಬ್ಬ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಲೋಕಾಯುಕ್ತ ಅಧಿಕಾರಿಯ ಪದ ಬಳಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಿಎಂ ಸಮರ್ಥನೆ: ಇನ್ನು ಕುಮಾರಸ್ವಾಮಿ ಅವರನ್ನು ಎಡಿಜಿಪಿ ಹಂದಿ ಅಂತ ಕರೆದಿಲ್ಲ, ದಾರ್ಶನಿಕ ಬರ್ನಾರ್ಡ್‌ ಷಾ ಅವರ ವಾಕ್ಯ ಉಲ್ಲೇಖಿಸಿದ್ದಾರೆ ಅಷ್ಟೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರೆ, ಆ ಪತ್ರದ ಹಿಂದೆ ಕಾಂಗ್ರೆಸ್‌ ಕೈವಾಡ ಇದ್ದರೆ ದಾಖಲೆ ಬಿಡುಗಡೆ ಮಾಡಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕುಮಾರಸ್ವಾಮಿಗೆ ಸವಾಲು ಹಾಕಿದ್ದಾರೆ.

-----

ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖ‌ರ್ ಅವರು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಹಂದಿ ಪದ ಬಳಸಿ ಪತ್ರ ಬರೆದಿರುವುದು ಕಾಂಗ್ರೆಸ್‌ಗೆ ಮುಳುವಾಗಲಿದೆ. ಗೌರವಯುತ ಪದ ಬಳಕೆ ಮಾಡುವುದು ಅಧಿಕಾರಿಯ ಕರ್ತವ್ಯ. ಇದು ಅಧಿಕಾರಿಯ ಅಹಂಕಾರದ ಪರಮಾವಧಿ. ಈ ಕೂಡಲೇ ಅವರು ಕುಮಾರಸ್ವಾಮಿ ಅವರಲ್ಲಿ ಕ್ಷಮೆ ಕೋರಬೇಕು. ಇದನ್ನು ಇಷ್ಟಕ್ಕೆ ನಾವು ಬಿಡುವುದಿಲ್ಲ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತೇವೆ.

- ಪ್ರಹ್ಲಾದ್‌ ಜೋಶಿ, ಕೇಂದ್ರ ಸಚಿವ

ಯಾರು ಆ ಪತ್ರ ಸಿದ್ಧಪಡಿಸಿ ಲೋಕಾಯುಕ್ತ ಎಡಿಡಿಪಿ ಕೈಯಲ್ಲಿ ಸಹಿ ಹಾಕಿಸಿದ್ದಾರೆ ಎಂಬುದು ಗೊತ್ತು. ಸರ್ಕಾರ ಎಷ್ಟರ ಮಟ್ಟಿಗೆ ಅಧಿಕಾರ ದುರುಪಯೋಗ, ದ್ವೇಷದ ರಾಜಕಾರಣ ಮಾಡುತ್ತಿದೆ ಎಂಬುದು ಗೊತ್ತಾಗುತ್ತಿದೆ.

- ನಿಖಿಲ್‌ ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ

---

ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಆ ಅಧಿಕಾರಿ(ಎಡಿಜಿಪಿ ಚಂದ್ರಶೇಖರ್‌) ಇರ್ಲಿಲ್ವಾ? ಆಗ ಅವರು ಎಂತಹವರು ಎಂದು ಗೊತ್ತಿರಲಿಲ್ಲವೇ? ಅಧಿಕಾರಿಯೊಬ್ಬ ಇವರ ಪರವಾಗಿ ಕೆಲಸ ಮಾಡಿದರೆ ಒಳ್ಳೆಯವನು ಕಾನೂನು ಪಾಲನೆ ಮಾಡಿದರೆ ಕೆಟ್ಟವನಾ?

- ಪ್ರಿಯಾಂಕ್‌ ಖರ್ಗೆ, ಐಟಿಬಿಟಿ ಸಚಿವ