ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಮೇಕೆದಾಟು ಸಮತೋಲನ ಜಲಾಶಯ ಮತ್ತು ಕಳಸಾ ಬಂಡೂರಿ ಯೋಜನೆಗಳಿಗೆ ತುರ್ತು ಅನುಮತಿ ನೀಡುವಂತೆ ಮನವಿ ಮಾಡಿದರು. ಅಲ್ಲದೆ, ನಬಾರ್ಡ್ ನೆರವು ಹೆಚ್ಚಳಕ್ಕೆ ಆಗ್ರಹಿಸಿದರು.
ನವದೆಹಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಮೇಕೆದಾಟು ಸಮತೋಲನ ಜಲಾಶಯ ಮತ್ತು ಕಳಸಾ ಬಂಡೂರಿ ಯೋಜನೆಗಳಿಗೆ ತುರ್ತು ಅನುಮತಿ ನೀಡುವಂತೆ ಮನವಿ ಮಾಡಿದರು. ಅಲ್ಲದೆ, ನಬಾರ್ಡ್ ನೆರವು ಹೆಚ್ಚಳಕ್ಕೆ ಆಗ್ರಹಿಸಿದರು.
ದೆಹಲಿಯ ಪಾರ್ಲಿಮೆಂಟ್ ಕಾಂಪ್ಲೆಕ್ಸ್ ನಲ್ಲಿ ನಡೆದ ಸಭೆಯಲ್ಲಿ ಕೃಷಿ, ಜಲಸಂಪನ್ಮೂಲ ಮತ್ತು ನಗರ ಮೂಲಸೌಕರ್ಯ ಸೇರಿದಂತೆ ನಿರ್ಣಾಯಕ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುವ ಹಲವಾರು ವಿಷಯಗಳಿಗೆ ಕೇಂದ್ರ ಸರ್ಕಾರ ತುರ್ತು ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿಯನ್ನು ಅವರು ಒತ್ತಾಯಿಸಿದರು. ಉಪಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್, ಇಂಧನ ಸಚಿವ ಕೆ.ಜೆ.ಜಾರ್ಜ್ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಸಿಎಂ ಜತೆ ಸಭೆಯಲ್ಲಿ ಹಾಜರಿದ್ದರು.
ನಬಾರ್ಡ್ ನೆರವು ಹೆಚ್ಚಳಕ್ಕೆ ಮನವಿ:
ರಾಜ್ಯಕ್ಕೆ ನಬಾರ್ಡ್ ನೆರವು ಕಡಿತಗೊಳಿಸಿರುವುದರಿಂದ ರಾಜ್ಯದ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದೆ. 2023-24ರ ಸಾಲಿನಲ್ಲಿ 5,600 ಕೋಟಿ ರು.ಗಳನ್ನು ಮಂಜೂರು ಮಾಡಲಾಗಿತ್ತು. ಆದರೆ, 2024 -25ರ ಸಾಲಿನಲ್ಲಿ ಕೇವಲ 2,340 ಕೋಟಿ ರು.ಗಳನ್ನು ಮಂಜೂರು ಮಾಡಲಾಗಿದೆ. ಇದರಿಂದಾಗಿ ನಬಾರ್ಡ್ ನೆರವು ಪ್ರಸಕ್ತ ಸಾಲಿನಲ್ಲಿ ಶೇ.58ರಷ್ಟು ಕಡಿತವಾಗಿದೆ.
ಈ ಹಿನ್ನೆಲೆಯಲ್ಲಿ ನಬಾರ್ಡ್ ನೆರವು ಹೆಚ್ಚಳಕ್ಕೆ ಆಗ್ರಹಿಸಿ ಈಗಾಗಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಹೀಗಾಗಿ, ತಾವು ಹಣಕಾಸು ಸಚಿವಾಲಯಕ್ಕೆ ಈ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.
ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಲ್ಲಿ ಒಂದಾದ ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ 2023-24ರ ಕೇಂದ್ರ ಬಜೆಟ್ ನಲ್ಲಿ ಅನುಮೋದನೆಯಾಗಿರುವ 5,300 ಕೋಟಿ ರು. ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ಪ್ರಸಕ್ತ ಯೋಜನೆ ಶೀಘ್ರವೇ ಅನುಮೋದನೆಗೊಂಡಲ್ಲಿ ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಗೆ ಒಳಪಡುವ ಮಧ್ಯ ಕರ್ನಾಟಕದ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಅನುಕೂಲವಾಗುತ್ತದೆ. ಆದ್ದರಿಂದ ಈ ಪ್ರಸ್ತಾವನೆಗೆ ಶೀಘ್ರ ಅನುಮೋದನೆ ನೀಡಬೇಕೆಂದು ಮನವಿ ಮಾಡಿದರು.
ಜೊತೆಗೆ, ಕಾವೇರಿ ನದಿ ಪಾತ್ರದ ಮೇಕೆದಾಟು ಯೋಜನೆ ಹಾಗೂ ಕಳಸಾ ಬಂಡೂರಿ ಯೋಜನೆಗಳಗತ್ತ ತಾವು ತುರ್ತು ಗಮನ ಹರಿಸಬೇಕಿದೆ. ಈ ಯೋಜನೆಗಳಿಗೆ ಜಲಶಕ್ತಿ ಹಾಗೂ ಅರಣ್ಯ, ಪರಿಸರ ಸಚಿವಾಲಯಗಳಿಂದ ಶೀಘ್ರ ತೀರುವಳಿ ದೊರಕಿಸಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ 13 ಮಹಾನಗರ ಪಾಲಿಕೆಗಳಿದ್ದು, ಈ ಎರಡನೇ ಸ್ತರದ ನಗರಗಳ ಅಭಿವೃದ್ಧಿಗೆ ಹೆಚ್ಚಿನ ಬಂಡವಾಳದ ಅಗತ್ಯವಿದೆ. ರಾಜ್ಯ ಸರ್ಕಾರ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿ ಮುಂದಿನ ಮೂರು ವರ್ಷಗಳ ಅವಧಿಗೆ 2 ಸಾವಿರ ಕೋಟಿ ರು,ಗಳನ್ನು ಈ ಉದ್ದೇಶಕ್ಕಾಗಿ ತೆಗೆದಿರಿಸಿದೆ. ಆದರೆ, ಈ ನಗರಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸಲು ಈ ಅನುದಾನ ಸಾಕಾಗುವುದಿಲ್ಲ. ಆದ್ದರಿಂದ ಅಮೃತ್ ಅಥವಾ ಇನ್ನಾವುದೇ ಯೋಜನೆಯಡಿ ಕರ್ನಾಟಕ ರಾಜ್ಯಕ್ಕೆ 10ಸಾವಿರ ಕೋಟಿ ರು. ಬಿಡುಗಡೆ ಮಾಡುವಂತೆ ಕೇಂದ್ರ ನಗರಾಭಿವೃದ್ಧಿ ಇಲಾಖೆಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದರು.
ಅಲ್ಲದೆ, 15ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ಸರಿಯಾದ ನ್ಯಾಯ ಒದಗಿಸುತ್ತಿಲ್ಲ ಎಂದು ನಾವು ನಿರಂತರವಾಗಿ ಪ್ರಸ್ತಾಪಿಸುತ್ತಾ ಬಂದಿದ್ದೇವೆ. ತೆರಿಗೆ ಹಂಚಿಕೆಯಲ್ಲಿ ರಾಜ್ಯದ ಪಾಲನ್ನು ಶೇ.1ರಷ್ಟು ಕಡಿಮೆ ಮಾಡಿರುವ ಶಿಫಾರಸ್ಸನ್ನು ಹಣಕಾಸು ಇಲಾಖೆ ಸರಿಪಡಿಸಬೇಕಾಗಿದೆ. ಹಣಕಾಸು ಆಯೋಗವು ರಾಜ್ಯಕ್ಕೆ ಹಂಚಿಕೆ ಕಡಿಮೆಯಾಗಿರುವುದಕ್ಕೆ ಪರಿಹಾರವಾಗಿ 5,495 ಕೋಟಿ ರು. ಅನುದಾನ ಬಿಡುಗಡೆಗೆ ಮತ್ತು ಪೆರಿಫೆರಲ್ ರಿಂಗ್ ರಸ್ತೆ ಮತ್ತು ನೀರಿನ ಮೂಲಗಳ ಪುನರುಜ್ಜೀವನಕ್ಕೆ 6 ಸಾವಿರ ಕೋಟಿ ರು. ವಿಶೇಷ ಅನುದಾನ ನೀಡುವ ಬಗ್ಗೆ ಶಿಫಾರಸು ಮಾಡಿದೆ. ಕನಿಷ್ಟ ಪಕ್ಷ ಹಣಕಾಸು ಆಯೋಗ ಈ ಎರಡು ಶಿಫಾರಸ್ಸುಗಳನ್ನು ಒಪ್ಪಿಕೊಳ್ಳಬೇಕಾಗಿದೆ. ಜೊತೆಗೆ, ನಾವು ಇನ್ನೂ 15ನೇ ಹಣಕಾಸು ಆಯೋಗದ ಅವಧಿಯಲ್ಲಿರುವುದರಿಂದ ರಾಜ್ಯಕ್ಕೆ ಹೆಚ್ಚುವರಿ ಅನುದಾನ ಒದಗಿಸಲು ಹಣಕಾಸು ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.
ಜೊತೆಗೆ, 16ನೇ ಹಣಕಾಸು ಆಯೋಗದ ಅವಧಿಯಲ್ಲಿ ರಾಜ್ಯಕ್ಕೆ ಕೇಂದ್ರದ ತೆರಿಗೆ ಪಾಲಿನಲ್ಲಿ ಕಡಿತ ಮಾಡಬಾರದು ಎಂದು ಮನವಿ ಮಾಡಿದರು.