ಚನ್ನರಾಯಪಟ್ಟಣ ಹೌಸಿಂಗ್‌ ಬೋರ್ಡ್‌ನ 96 ಮನೆಗಳಿಗೆ ಹಕ್ಕುಪತ್ರ ವಿತರಣೆಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪುರಸಭೆ ವ್ಯಾಪ್ತಿ ಹೌಸಿಂಗ್‌ಬೋರ್ಡ್‌ ಬಡಾವಣೆಗೆ ಸಾಕಷ್ಟು ಮೂಲ ಸೌಲಭ್ಯ ನೀಡುವ ಮೂಲಕ ಅಭಿವೃದ್ದಿ ಕೆಲಸ ಮಾಡಿಸಲಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.

ಹೊಳೆನರಸೀಪುರ ರಸ್ತೆಯಲ್ಲಿನ ಹೌಸಿಂಗ್‌ ಬೋರ್ಡ್ ಸರ್ವೆ ನಂಬರ್‌ ೧೦೧ ರಲ್ಲಿ ಹುಡ್ಕೋ ಯೋಜನೆ ಮೂಲಕ ಮಾಜಿ ಮಂತ್ರಿ ಶ್ರೀಕಂಠಯ್ಯ ಅವರ ಅವಧಿಯಲ್ಲಿ ನಿರ್ಮಾಣ ಮಾಡಿದ್ದ ೧೪೦ ಮನೆಗಳಲ್ಲಿ ೯೬ ಮನೆ ಮಾಲೀಕರಿಗೆ ಹಕ್ಕು ಪತ್ರ ವಿತರಣೆ ಮಾಡಿ ಅವರು ಮಾತನಾಡಿದರು. ಹೌಸಿಂಗ್‌ ಬೋರ್ಡ್‌ ಕಾಲೋನಿಗೆ ವಿಘ್ನೇಶ್ವರ ದೇವಸ್ಥಾನ, ಯುಜಿಡಿ ವ್ಯವಸ್ಥೆ ಮಾಡಿಸಲಾಗಿದೆ. ಕಾಂಕ್ರೀಟ್‌ ರಸ್ತೆ, ಡಾಂಬರ್‌ ರಸ್ತೆ, ಉದ್ಯಾನವನಗಳ ಅಭಿವೃದ್ಧಿಯನ್ನು ಪುರಸಭೆ ವತಿಯಿಂದ ಮಾಡಿಸಲಾಗಿದೆ ಎಂದು ಅವರು ತಿಳಿಸಿದರು.

ಉದ್ಯಾನವನಕ್ಕೆ ಸುಮಾರು ೩೦ಲಕ್ಷ ವೆಚ್ಚ ಮಾಡಿ ಓಪನ್‌ ಜಿಮ್‌ ಪರಿಕರಗಳನ್ನು ಅಳವಡಿಸಲಾಗಿದೆ. ವಾಯು ವಿಹಾರ ನಡೆಸಲು ಪಾತ್‌ ನಿರ್ಮಾಣ ಮಾಡಲಾಗಿದೆ. ದೇವಾಲಯ ಮುಂಭಾಗ ಪ್ರಾಂಗಣ ಮಾಡಲಾಗುವುದು ಎಂದು ಭರವಸೆ ನೀಡಿದರು.

೧೪೦ ಮನೆಗಳಲ್ಲಿ ೯೬ ಮನೆಗಳಿಗೆ ಹಕ್ಕು ಪತ್ರ ನೀಡಲಾಗುತ್ತಿದೆ. ಉಳಿದ ಮನೆಗಳಿಗೆ ಹಕ್ಕು ಪತ್ರ ವಿತರಣೆ ಮಾಡಲು ತಾಂತ್ರಿ ದೋಶ ಇರುವುದರಿಂದ ಈ ಬಗ್ಗೆ ಅಧಿಕಾರಿಗಳು ಹಾಗೂ ಸಂಬಂಧ ಪಟ್ಟ ಮಂತ್ರಿಗಳೊಂದಿಗೆ ಚರ್ಚಿಸಿ ಹಕ್ಕು ಪತ್ರ ನೀಡಲಾಗುವುದು. ಯುಜಿಡಿ ವ್ಯವಸ್ಥೆಯನ್ನು ಮಾಡಿಸಲು ಅನುದಾನ ಕೊರತೆ ಇದೆ. ಈಗಾಗಲೆ ಪುರಸಭೆ ವ್ಯಾಪ್ತಿಯ ಯುಜಿಡಿ ವ್ಯವಸ್ಥೆಗೆ ೧೪೦ ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.


ಪುರಸಭೆ ಮಾಜಿ ಅಧ್ಯಕ್ಷ ಕೋಟೆಮೋಹನ್, ಮಾಜಿ ಸದಸ್ಯರಾದ ಮಂಜುನಾಥ್, ಕುಮಾರ್, ಮುಖ್ಯಾಧಿಕಾರಿ ಯತೀಶ್, ಟಿಎಪಿಎಂಎಸ್ ನಿರ್ದೇಶಕ ಅನಿಲ್ ಮೊದಲಾದವರು ಉಪಸ್ಥಿತರಿದ್ದರು.

------------------------

ಕಾಂಗ್ರೆಸ್ - ಜೆಡಿಎಸ್‌ನಿಂದ ಪ್ರತ್ಯೇಕ ಕಾರ್ಯಕ್ರಮ

ಚನ್ನರಾಯಪಟ್ಟಣ : ಪುರಸಭೆ ವ್ಯಾಪ್ತಿಯ ಹೌಸಿಂಗ್‌ಬೋರ್ಡ್ ಬಳಿ ಕೊಳೆಗೇರಿ ಅಭಿವೃದ್ಧಿ ನಿಮಗದಿಂದ ಮಾಜಿ ಮಂತ್ರಿ ಶ್ರೀಕಂಠಯ್ಯ ಅವರ ಅಧಿಕಾರ ಅವಧಿಯಲ್ಲಿ ಮನೆಗಳನ್ನು ನಿರ್ಮಾಣ ಮಾಡಿ ಬಡವರಿಗೆ ಹಂಚಲಾಗಿತ್ತು. ಆದರೆ ಕಳೆದ ೨೩ ವರ್ಷದಿಂದ ಹಕ್ಕು ಪತ್ರ ನೀಡಿರಲಿಲ್ಲ. ವಾರ್ಡಿನ ಪುರಸಭಾ ಸದಸ್ಯೆ ಭಾಗ್ಯಲಕ್ಷ್ಮೀ ಗಿರೀಶ್‌ಶ್ರಮದಿಂದ ಸರ್ಕಾರದ ಮೇಲೆ ಒತ್ತಡ ಹಾಕಿ ಹಕ್ಕು ಪತ್ರ ವಿತರಣೆ ಮುಂದಾಗಿದ್ದು ದಿನಾಂಕ ನಿಗದಿಯಾಗಿತ್ತು. ಅದರೆ ಒಂದೇ ದಿವಸ ಒಂದೇ ವೇದಿಕೆ ಮೇಲೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರತ್ಯೇಕವಾಗಿ ಹಕ್ಕು ಪತ್ರ ವಿತರಣೆ ಮಾಡಿದರು.

೯೬ ಮನೆ ಮಾಲೀಕರಿಗೆ ಹಕ್ಕು ಪತ್ರ ವಿತರಣೆ ಮಾಡಲು ಬೆಳಗ್ಗೆ ೧೧ ಗಂಟೆಗೆ ಸಮಯ ನಿಗದಿಯಾಗಿದ್ದು ಜೆಡಿಎಸ್ ಶಾಸಕ ಬಾಲಕೃಷ್ಣ ಹಾಗೂ ಕಾಂಗ್ರೆಸ್ ಸಂಸದ ಶ್ರೇಯಸ್‌ ಪಟೇಲ್ ಆಗಮಿಸಿ ಒಟ್ಟಾಗಿ ಮನೆ ಮಾಲೀಕರಿಗೆ ಹಕ್ಕು ಪತ್ರ ವಿತರಣೆ ಮಾಡಬೇಕಿತ್ತು. ಆದರೆ ಶಾಸಕ ಬಾಲಕೃಷ್ಣ ಜೆಡಿಎಸ್ ಮುಖಂಡರೊಂದಿಗೆ ಬೆಳಗ್ಗೆ ೧೦.೨೦ಕ್ಕೆ ಆಗಮಿಸಿ ತರಾತುರಿಯಲ್ಲಿ ಹಕ್ಕು ಪತ್ರ ವಿತರಣೆ ಮಾಡಿ ತೆರಳಿದರು.

ಸಂಸದ ಶ್ರೇಯಸ್‌ಪಟೇಲ್ ಮಧ್ಯಾಹ್ನ ೧೨.೪೫ ಕ್ಕೆ ಕಾಂಗ್ರೆಸ್ ಮುಖಂಡರೊಂದಿಗೆ ಆಗಮಿಸಿ ಮನೆ ಮಾಲೀಕರಿಗೆ ಹಕ್ಕು ಪತ್ರ ವಿತರಣೆ ಮಾಡಿದರು. ಆದರೆ ಇಲಾಖೆ ಅಧಿಕಾರಿಗಳು ಎರಡೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

--------------

ಹೇಳಿಕೆಗಳು

- ತುರ್ತು ಕೆಲಸ ಇದೆ. ಹಾಗಾಗಿ ಬೇಗ ಬಂದು ಹೌಸಿಂಗ್‌ ಬೋರ್ಡ್‌ಮನೆ ಮಾಲೀಕರಿಗೆ ಹಕ್ಕು ಪತ್ರ ನೀಡಿದ್ದೇನೆ. ಸಂಸದರು ಬಂದ ಬಳಿಕೆ ಉಳಿದವರು ಹಕ್ಕು ಪತ್ರವನ್ನು ಅವರಿಂದ ಪಡೆದುಕೊಳ್ಳಿ. ಇದಕ್ಕೆ ರಾಜಕೀಯ ಬೆರೆಸುವುದು ಬೇಡ. ನನ್ನ ಸಮಯಕ್ಕೆ ನಾನು ಬಂದಿದ್ದೇನೆ. ಅವರ ಸಮಯಕ್ಕೆ ಅವರು ಬರುತ್ತಾರೆ.

- ಸಿ. ಎನ್. ಬಾಲಕೃಷ್ಣ ಶಾಸಕರು.- ಶ್ರವಣಬೆಳಗೊಳ ವಿಧಾನಸಭಾ ಶಾಸಕರು ನನ್ನೊಂದಿಗೆ ವೇದಿಕೆ ಹಂಚಿಕೊಂಡರೆ ರೇವಣ್ಣರ ಕೆಂಗಣಿಗೆ ಗುರಿಯಾಗುತ್ತಾರೆ. ಹಾಗಾಗಿ ನಾನು ಬರುವ ಮೊದಲೇ ಬಂದು ತರಾತುರಿಯಲ್ಲಿ ಹಕ್ಕು ಪತ್ರ ವಿತರಣೆ ಮಾಡಿದ್ಧಾರೆ.

- ಶ್ರೇಯಸ್ ಪಟೇಲ್, ಸಂಸದರು ಹಾಸನ ಶಾಸಕ ಸ್ವರೂಪ್‌ಪ್ರಕಾಶ್ ಅವರನ್ನು ಸಾಕಷ್ಟು ವೇದಿಕೆ ಮೇಲೆ ಹಾಗೂ ಖಾಸಗಿಯಾಗಿ ಸಂಸದ ಶ್ರೇಯಸ್‌ಪಟೇಲ್ ಹೊಗಳುತ್ತಿದ್ಧಾರೆ. ಇದರಿಂದ ರೇವಣ್ಣ ಅವರಿಗೆ ನುಂಗಲಾರದ ತುತ್ತಾಗಿದೆ. ಇಂತಹ ಸಮಯದಲ್ಲಿ ಶಾಸಕ ಬಾಲಕೃಷ್ಣ ಸಂಸದರೊಂದಿಗೆ ವೇದಿಕೆ ಹಂಚಿಕೊಂದರೆ ಶ್ರವಣಬೆಳಗೊಳಕ್ಕೆ ರೇವಣ್ಣ ತಮ್ಮ ಪುತ್ರ ಎಂಎಲ್‌ಸಿ ಡಾ.ಸೂರಜ್‌ ರೇವಣ್ಣ ಅವರನ್ನು ಮುಂದಿನ ಚುನಾವಣೆಯಲ್ಲಿ ಅಖಾಡಕ್ಕೆ ಇಳಿಸುತ್ತಾರೆ ಎನ್ನುವ ಭಯದಲ್ಲಿ ನಿಗದಿತ ಸಮಯಕ್ಕೆ ಮೊದಲೇ ಬಂದು ಹಕ್ಕುಪತ್ರ ವಿತರಣೆ ಮಾಡಿದ್ದಾರೆ.

- ಗೋಪಾಲಸ್ವಾಮಿ, ಮಾಜಿ ಶಾಸಕ.