15 ಕ್ಷೇತ್ರಗಳಿಗೆ ಕಾಂಗ್ರೆಸ್‌ನ ಒಂದು ಹೆಸರಿನ ಪಟ್ಟಿ ಸಿದ್ಧ

| Published : Feb 06 2024, 01:33 AM IST / Updated: Feb 06 2024, 11:32 AM IST

ಸಾರಾಂಶ

ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಕಾಂಗ್ರೆಸ್‌ ಪಕ್ಷವು ಈಗಾಗಲೇ 15 ಕ್ಷೇತ್ರಗಳಿಗೆ ಒಂಟಿ ಹೆಸರು ಅಂತಿಮಗೊಳಿಸಿದೆ.

ಎಸ್‌.ಗಿರೀಶ್‌ ಬಾಬು
ಕನ್ನಡಪ್ರಭ ವಾರ್ತೆ ಬೆಂಗಳೂರು

ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಕಾಂಗ್ರೆಸ್‌ ಪಕ್ಷವು ಈಗಾಗಲೇ 15 ಕ್ಷೇತ್ರಗಳಿಗೆ ಒಂಟಿ ಹೆಸರು ಅಂತಿಮಗೊಳಿಸಿದೆ. ಆದರೆ, ಈ ಪೈಕಿ ಕನಿಷ್ಠ ಆರೇಳು ಕ್ಷೇತ್ರಗಳಲ್ಲಿ ಇನ್ನೂ ಆಕಾಂಕ್ಷಿಗಳು ತೀವ್ರ ಪೈಪೋಟಿ ನಡೆಸಿದ್ದಾರೆ. 

ಪಟ್ಟಿಯಲ್ಲಿ ಸ್ಥಾನ ಪಡೆದಿರುವ ನಾಲ್ಕು ಮಂದಿ ಸಚಿವರೂ ಸ್ಪರ್ಧೆಗೆ ಸಂಪೂರ್ಣ ಹಿಂದೇಟು ಹಾಕುತ್ತಿದ್ದಾರೆ.ಕುತೂಹಲಕಾರಿ ಸಂಗತಿಯೆಂದರೆ, ಇನ್ನೂ ಕಾಂಗ್ರೆಸ್‌ ಸೇರದ ಇಬ್ಬರ ಹೆಸರು ಅಂತಿಮ ಪಟ್ಟಿಯಲ್ಲಿದೆ. 

ಇನ್ನೂ ಒಂದು ಕ್ಷೇತ್ರದಲ್ಲಿ ಸ್ಪರ್ಧೆಗೆ ಇಬ್ಬರು ನಿವೃತ್ತ ಐಎಎಸ್‌ ಅಧಿಕಾರಿಗಳು ತೀವ್ರ ಪೈಪೋಟಿ ಮುಂದುವರೆಸಿದ್ದು, ಆ ಪೈಕಿ ಒಬ್ಬರು ಪಟ್ಟಿಯಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಲ್ಲಿ ಅತಿ ಕಡಿಮೆ ಅಂತರದಿಂದ ಜೆಡಿಎಸ್‌ನ ಎಚ್‌.ಡಿ. ರೇವಣ್ಣ ಎದುರು ಸೋಲುಂಡಿದ್ದ ಶ್ರೇಯಸ್‌ ಪಟೇಲ್‌ ಹಾಸನ ಲೋಕಸಭಾ ಕ್ಷೇತ್ರಕ್ಕೆ ಒಂಟಿ ಹೆಸರಾಗಿ ಪರಿಗಣನೆಯಾಗಿದೆ.

ರಾಜ್ಯ ನಾಯಕರು ಶಿಫಾರಸು ಮಾಡಿ ಹೈಕಮಾಂಡ್‌ ಕೂಡ ಬಹುತೇಕ ಒಪ್ಪಿದೆ ಎನ್ನಲಾದ ಈ ಪಟ್ಟಿಯಲ್ಲಿ ನಾಲ್ಕು ಮಂದಿ ಸಚಿವರಾದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಹೆಸರು ಕೋಲಾರಕ್ಕೆ, ಸಮಾಜ ಕಲ್ಯಾಣ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಚಾಮರಾಜನಗರಕ್ಕೆ, ಕ್ರೀಡಾ ಸಚಿವ ಬಿ. ನಾಗೇಂದ್ರ ಹೆಸರು ಬಳ್ಳಾರಿಗೆ ಮತ್ತು ಸಮಾಜ ಕಲ್ಯಾಣ ಸತೀಶ್‌ ಜಾರಕಿಹೊಳಿ ಅವರ ಹೆಸರು ಬೆಳಗಾವಿ ಕ್ಷೇತ್ರಕ್ಕೆ ಪಟ್ಟಿಯಲ್ಲಿ ಸೂಚಿತವಾಗಿದೆ.

ಆದರೆ, ಆ ನಾಲ್ಕು ಮಂದಿಯೂ ಸ್ಪರ್ಧೆಗೆ ಇನ್ನೂ ಒಪ್ಪಿಲ್ಲ. ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ಕೆ.ಎಚ್. ಮುನಿಯಪ್ಪ ಸುತಾರಾಂ ತಯಾರಿಲ್ಲ. ಹೀಗಿದ್ದರೂ ಅವರ ಹೆಸರು ಪಟ್ಟಿಯಲ್ಲಿದೆ. 

ಇನ್ನೂ ಡಾ. ಎಚ್‌.ಸಿ. ಮಹದೇವಪ್ಪ ಅವರಿಗೆ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಪಕ್ಷ ಹೇಳುತ್ತಿದೆ. ಆದರೆ, ಈ ಕ್ಷೇತ್ರದಲ್ಲಿ ತಮ್ಮ ಪುತ್ರನಿಗೆ ಟಿಕೆಟ್‌ ಕೊಡುವಂತೆ ಮಹದೇವಪ್ಪ ನಾಯಕತ್ವದ ಮೇಲೆ ಒತ್ತಡ ಹಾಕುವ ಪ್ರಕ್ರಿಯೆ ಕೈ ಬಿಟ್ಟಿಲ್ಲ.

ಬಳ್ಳಾರಿ ಕ್ಷೇತ್ರಕ್ಕೆ ಬಿ.ನಾಗೇಂದ್ರಗೆ ಟಿಕೆಟ್‌ ನೀಡುವ ಮನಸ್ಸು ಕಾಂಗ್ರೆಸ್‌ ನಾಯಕತ್ವಕ್ಕೆ ಇದೆ. ಆದರೆ, ನಾಗೇಂದ್ರ ಸ್ಪರ್ಧೆಯಿಂದ ತಪ್ಪಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ನಡೆಸಿದ್ದಾರೆ.

ಆದರೆ, ಕಾಂಗ್ರೆಸ್‌ ಪಡೆದುಕೊಂಡಿರುವ ಕ್ಷೇತ್ರದ ವರದಿಗಳ ಪ್ರಕಾರ ನಾಗೇಂದ್ರ ಸ್ಪರ್ಧಿಸಿದರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವಿಗೆ ಉತ್ತಮ ಅವಕಾಶವಿದೆ. ಒಂದು ವೇಳೆ ನಾಗೇಂದ್ರ ಟಿಕೆಟ್‌ ತಪ್ಪಿಸಿಕೊಳ್ಳಲು ಯಶಸ್ವಿಯಾದರೆ ಆಗ ಈ ಕ್ಷೇತ್ರದಲ್ಲಿ ಶಾಸಕ ಇ. ತುಕಾರಾಂ ಪುತ್ರಿ ಚೈತನ್ಯ ಹೆಸರು ಪರಿಗಣನೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಜಾರಕಿಹೊಳಿಗೆ ಆಯ್ಕೆ ನಿರ್ಧಾರ ಬಿಟ್ಟ ಪಕ್ಷ: ಬೆಳಗಾವಿ ಕ್ಷೇತ್ರಕ್ಕೆ ಸಚಿವ ಸತೀಶ್‌ ಜಾರಕಿಹೊಳಿ ಅವರ ಹೆಸರು ಪಟ್ಟಿಯಲ್ಲಿದೆ. ಆದರೆ, ಅಲ್ಲಿಂದ ಸ್ಪರ್ಧಿಸಬೇಕೋ ಅಥವಾ ಬೇಡವೋ ಎಂಬ ನಿರ್ಧಾರವನ್ನು ಸತೀಶ್‌ ಅವರಿಗೆ ಪಕ್ಷ ಬಿಟ್ಟಿದೆ ಎನ್ನಲಾಗಿದೆ. 

ಮೂಲಗಳ ಪ್ರಕಾರ ಸತೀಶ್‌ ಅವರಿಗೆ ತಮ್ಮ ಪುತ್ರಿ ಪ್ರಿಯಾಂಕಾ ಅವರನ್ನು ಕಣಕ್ಕೆ ಇಳಿಸುವ ಮನಸ್ಸು ಇದೆ.

ಅಧಿಕಾರಿಗಳ ಪ್ರಬಲ ಪೈಪೋಟಿ: ರಾಯಚೂರು ಕ್ಷೇತ್ರಕ್ಕೆ ನಿವೃತ್ತ ಐಎಎಸ್‌ ಅಧಿಕಾರಿ ಜಿ. ಕುಮಾರನಾಯ್ಕ್ ಅವರ ಹೆಸರು ಪಟ್ಟಿಯಲ್ಲಿ ಪರಿಗಣನೆಯಾಗಿದೆ. ಆದರೆ, ಮತ್ತೊಬ್ಬ ನಿವೃತ್ತ ಐಎಎಸ್‌ ಅಧಿಕಾರಿಯಾದ ಅನಿಲ್ ಕುಮಾರ್‌ ಅವರು ( ಈ ಹಿಂದೆ ಬಿಡಿಎ ಆಯುಕ್ತರಾಗಿದ್ದರು) ಅವರು ಇದೇ ಕ್ಷೇತ್ರಕ್ಕೆ ತೀವ್ರ ಪೈಪೋಟಿ ನಡೆಸಿದ್ದಾರೆ. ಹೀಗಾಗಿ ಕುಮಾರನಾಯ್ಕ್ ಹೆಸರು ಪಟ್ಟಿಯಲ್ಲಿ ಇದ್ದರೂ, ಪೈಪೋಟಿ ಮಾತ್ರ ನಿಂತಿಲ್ಲ.

ಪಟ್ಟಿಯಲ್ಲಿ ಅನ್ಯಪಕ್ಷೀಯರ ಹೆಸರು: ಕುತೂಹಲಕಾರಿ ಸಂಗತಿಯೆಂದರೆ, ಇನ್ನೂ ಅಧಿಕೃತವಾಗಿ ಪಕ್ಷ ಸೇರಿರದ ಮಾಜಿ ಸಂಸದ ಮುದ್ದಹನುಮೇಗೌಡ (ತುಮಕೂರು) ಮತ್ತು ಬಿಜೆಪಿಯ ರಮೇಶ್‌ ಕತ್ತಿ (ಚಿಕ್ಕೋಡಿ) ಅವರ ಹೆಸರು ಪಟ್ಟಿಯಲ್ಲಿದೆ.

ರಾಜ್ಯ ಕಾಂಗ್ರೆಸ್‌ ನಾಯಕತ್ವ ಸಿದ್ಧಪಡಿಸಿರುವ ಅಭ್ಯರ್ಥಿ ಪಟ್ಟಿ
ಕೋಲಾರ - ಕೆ.ಎಚ್.ಮುನಿಯಪ್ಪ 
ಚಾಮರಾಜನಗರ- ಡಾ.ಎಚ್‌.ಸಿ.ಮಹದೇವಪ್ಪ
ಬಳ್ಳಾರಿ- ನಾಗೇಂದ್ರ
ಬೆಳಗಾವಿ- ಸತೀಶ್‌ ಜಾರಕಿಹೊಳಿ
ತುಮಕೂರು- ಮುದ್ದಹನುಮೇಗೌಡ
ಚಿತ್ರದುರ್ಗ -ಬಿ.ಎನ್. ಚಂದ್ರಪ್ಪ
ಬೆಂಗಳೂರು ಗ್ರಾಮಾಂತರ- ಡಿ.ಕೆ. ಸುರೇಶ್
ಹಾಸನ- ಶ್ರೇಯಸ್‌ ಪಟೇಲ್
ಉತ್ತರ ಕನ್ನಡ - ಅಂಜಲಿ ನಿಂಬಾಳ್ಕರ್
ಚಿಕ್ಕೋಡಿ- ರಮೇಶ್‌ ಕತ್ತಿ
ಉಡುಪಿ-ಚಿಕ್ಕಮಗಳೂರು- ಜಯಪ್ರಕಾಶ್‌ ಹೆಗ್ಡೆ
ದಾವಣಗೆರೆ- ಪ್ರಭಾ ಮಲ್ಲಿಕಾರ್ಜುನ್‌
ಬೀದರ್‌ - ರಾಜಶೇಖರ್‌ ಪಾಟೀಲ್‌ ಹುಮ್ನಾಬಾದ್
ವಿಜಾಪುರ- ರಾಜು ಅಲಗೂರು
ರಾಯಚೂರು- ಕುಮಾರನಾಯ್ಕ್