ಹಣ ಕಮ್ಮಿಯಾದ್ರೆ ನಮ್ಮನ್ನಲ್ಲ ವಿತ್ತ ಆಯೋಗವನ್ನು ಕೇಳಿ: ನಿರ್ಮಲಾ ಸೀತಾರಾಮನ್‌

| Published : Feb 06 2024, 01:32 AM IST / Updated: Feb 06 2024, 07:32 AM IST

ಹಣ ಕಮ್ಮಿಯಾದ್ರೆ ನಮ್ಮನ್ನಲ್ಲ ವಿತ್ತ ಆಯೋಗವನ್ನು ಕೇಳಿ: ನಿರ್ಮಲಾ ಸೀತಾರಾಮನ್‌
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಬುಧವಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಕರ್ನಾಟಕ ಸರ್ಕಾರ ಸಜ್ಜಾಗಿರುವಾಗಲೇ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಾರತಮ್ಯ ಆರೋಪವನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ.

ಪಿಟಿಐ ನವದೆಹಲಿ

ಕೇಂದ್ರ ಸರ್ಕಾರ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಬುಧವಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಕರ್ನಾಟಕ ಸರ್ಕಾರ ಸಜ್ಜಾಗಿರುವಾಗಲೇ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಾರತಮ್ಯ ಆರೋಪವನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ. 

ಬಿಜೆಪಿಯೇತರ ಸರ್ಕಾರಗಳು ಆಳ್ವಿಕೆ ನಡೆಸುತ್ತಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅನುದಾನ ತಡೆ ಹಿಡಿದಿದೆ ಎಂಬುದು ರಾಜಕೀಯ ಪ್ರೇರಿತ ಆರೋಪ. ಅದನ್ನು ಹೇಳಿಕೊಳ್ಳಲು ಪಟ್ಟಭದ್ರ ಹಿತಾಸಕ್ತಿಗಳಿಗೆ ಸಂತೋಷವಿದೆ ಎಂದು ಚಾಟಿ ಬೀಸಿದ್ದಾರೆ.

ಕೇಂದ್ರ ಸರ್ಕಾರ ತನಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಕರ್ನಾಟಕ ಸರ್ಕಾರ ಆರೋಪಿಸುತ್ತಿದೆ ಎಂದು ಲೋಕಸಭೆಯ ಶೂನ್ಯವೇಳೆಯಲ್ಲಿ ಸೋಮವಾರ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಅವರು ಗಮನಸೆಳೆದರು. 

ಇದಕ್ಕೆ ಪ್ರತಿಕ್ರಿಯೆ ನೀಡಿದ ನಿರ್ಮಲಾ, ಆ ರೀತಿ ಆಗಲು ಸಾಧ್ಯವೇ ಇಲ್ಲ. ಏಕೆಂದರೆ, ವ್ಯವಸ್ಥೆ ಅತ್ಯುತ್ತಮವಾಗಿದೆ. ಹಣಕಾಸು ಆಯೋಗದ ವರದಿಯನುಸಾರ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಹೇಳಿದರು.

‘ನನಗೆ ಈ ರಾಜ್ಯ ಇಷ್ಟವಿಲ್ಲ, ಅನುದಾನ ನಿಲ್ಲಿಸಿಬಿಡಿ’ ಎಂದು ಯಾವುದೇ ಹಣಕಾಸು ಸಚಿವರು ಕೂಡ ಮಧ್ಯಪ್ರವೇಶಿಸಿ ಸೂಚನೆ ನೀಡಲು ಆಗದು. ಆ ರೀತಿ ಆಗಲು ಅವಕಾಶವೇ ಇಲ್ಲ. ಏಕೆಂದರೆ ವ್ಯವಸ್ಥೆ ಅತ್ಯುತ್ತಮವಾಗಿದೆ. 

ನನ್ನ ಮನಸ್ಸಿಗೆ ತೋಚಿದಂತೆ ನಿಯಮಗಳನ್ನು ಬದಲಾವಣೆ ಮಾಡಲು ಆಗುವುದಿಲ್ಲ. ನಾನು ಶೇ.100ರಷ್ಟು ನಿಯಮಗಳನ್ನು ಪಾಲಿಸಬೇಕಾಗುತ್ತದೆ. 

ಅದನ್ನೇ ನನ್ನ ಅವಧಿಯಲ್ಲಿ ಮಾಡಿದ್ದೇನೆ. ಎಲ್ಲ ಹಣಕಾಸು ಸಚಿವರೂ ಅದನ್ನೇ ಮಾಡುತ್ತಾರೆ. ಹಣಕಾಸು ಆಯೋಗದ ಶಿಫಾರಸುಗಳನ್ನು ಜಾರಿ ಮಾಡಬೇಕಾಗುತ್ತದೆ ಎಂದರು.

ಯಾರಿಗಾದರೂ ನಾನು ಅನುದಾನ ತಡೆ ಹಿಡಿದಿದ್ದೇನೆ ಎಂದು ಅನ್ನಿಸಿದರೆ, ಅಂಥವರು ಹಣಕಾಸು ಆಯೋಗದ ಜತೆ ಮಾತನಾಡಿ. ಬೇಡಿಕೆಗಳು, ಅವಶ್ಯಕತೆಗಳು ಹಾಗೂ ಸ್ಥಿತಿಗತಿಯನ್ನು ಹೇಳಿಕೊಳ್ಳಿ. 

ಸಾಂವಿಧಾನಿಕ ಸಂಸ್ಥೆಯಾಗಿರುವ ಆಯೋಗವೇ ನಿರ್ಧಾರ ಕೈಗೊಳ್ಳಲಿ. ಕರ್ನಾಟಕದ ಉಪಮುಖ್ಯಮಂತ್ರಿಗಳು ತಮ್ಮನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. 

ಅವರಿಗೆ ವಾಸ್ತವ ತಿಳಿಸಿದ್ದೇನೆ ಎಂದು ವಿವರಿಸಿದರು.ಹಣಕಾಸು ಆಯೋಗ ಹೇಳಿದ್ದನ್ನು ಬಿಟ್ಟು ನಾನು ಬೇರೆ ಏನೂ ಮಾಡಲು ಆಗುವುದಿಲ್ಲ. ಹಣಕಾಸು ಆಯೋಗ ಇಂಥದ್ದು ಮಾಡು ಎಂದರೆ, ಅದನ್ನು ಬಿಟ್ಟು ಬೇರೆ ಏನೂ ಮಾಡುವುದಿಲ್ಲ. 

ಹಣಕಾಸು ಆಯೋಗದ ಶಿಫಾಸುಗಳ ವಿಚಾರದಲ್ಲಿ ನನಗೆ ನನ್ನದೇ ಆದ ವಿವೇಚನೆ ಇದೆ ಎಂದು ಕಲ್ಪಿಸಿಕೊಳ್ಳಬೇಡಿ. ದಯವಿಟ್ಟು ಹಣಕಾಸು ಆಯೋಗದ ಜತೆ ಮಾತನಾಡಿ ಎಂದರು.

ಗ್ಯಾರಂಟಿ ಯೋಜನೆಗಳಿಗೆ ನಿರ್ಮಲಾ ಪರೋಕ್ಷ ಚಾಟಿ: ಆರು ತಿಂಗಳ ಹಿಂದೆ ಎಲ್ಲವೂ ಸರಿ ಇತ್ತು. ಈಗ ಏನಾಗಿದೆ? ಕರ್ನಾಟಕದಲ್ಲಿ ನಿಗದಿತ ಉದ್ದೇಶಗಳಿಗೆ ಹಣ ಖರ್ಚು ಮಾಡಲಾಗಿದೆಯೇ? ನಾನು ಇದನ್ನು ಪ್ರಶ್ನಿಸುತ್ತಿಲ್ಲ. ನೀವು ಖರ್ಚು ಮಾಡಿ. 

ಆದರೆ ನಮ್ಮ ಮೇಲೆ ಗೂಬೆ ಕೂರಿಸಬೇಡಿ. ನಿಮ್ಮ ಬಜೆಟ್‌ಗಿಂತ ಮೀರಿದ ವೆಚ್ಚಗಳಿಗೆ ನಾನು ಉತ್ತರದಾಯಿ ಅಲ್ಲ ಎಂದು ಗ್ಯಾರಂಟಿ ಯೋಜನೆಗಳ ಬಗ್ಗೆ ನಿರ್ಮಲಾ ಸೀತಾರಾಮನ್‌ ಪರೋಕ್ಷವಾಗಿ ತಿವಿದರು.