ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಬದಲಾವಣೆಯಾಗಿದ್ದು, ಅಭಿವೃದ್ಧಿ ಕಾಣುತ್ತಿದೆ. ಇದಕ್ಕೆ ಮತ್ತಷ್ಟು ವೇಗ ಸಿಗಲು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಮಾಜಿ ಸಚಿವ ಡಾ.ಕೆ. ಸುಧಾಕರ್ ಮನವಿ ಮಾಡಿದರು.
ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ರಾಮ ಮಂದಿರ ಯಶಸ್ವಿ ಉದ್ಘಾಟನೆಯಾಗಿದ್ದರಿಂದ ಪ್ರತಿ ಮನೆ, ಮನಗಳಲ್ಲಿ ರಾಮನ ಜಪವೇ ತುಂಬಿದೆ, ಇದರೊಂದಿಗೆ ಪ್ರಧಾನಿ ಮೋದಿಯವರ ಕಳೆದ ಹತ್ತು ವರ್ಷಗಳ ಅವಧಿಯ ಅಭಿವೃದ್ಧಿ ಕೆಲಸಗಳು ಈ ಭಾರಿ ಲೋಕಸಭೆಯಲ್ಲಿ ನಮ್ಮ ಪಕ್ಷ ಗೆಲುವು ಸಾಧಿಸಲು ಅನುಕೂಲವಾಗಲಿದೆ ಎಂದರು.
ಜಿಲ್ಲೆ ಅನೇಕ ಸೌಲಭ್ಯ ದೊರೆತಿವೆ
ಕೋವಿಡ್ ನಂತರ ಜಿಲ್ಲಾ, ತಾಲೂಕು ಆಸ್ಪತ್ರೆಗಳಲ್ಲಿ ಆಮೂಲಾಗ್ರ ಬದಲಾವಣೆ ಆಗಿದೆ. ಅನೇಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ದೇಶ ಮೊದಲು, ಪಕ್ಷ ನಂತರ ಆಮೇಲೆ ಕಾರ್ಯಕರ್ತ ಎಂಬ ಸಿದ್ಧಾಂತ ಬಿಜೆಪಿಯದ್ದು. ನಾವು ಮೊದಲು ದೇಶದ ಅಭಿವೃದ್ಧಿಯ ಬಗ್ಗೆ ಚಿಂತನೆ ಮಾಡುತ್ತೇವೆ. ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೂ ಕೇಂದ್ರ ಸರ್ಕಾರ ಶೇ. 10 ರಷ್ಟು ಮೀಸಲಾತಿ ಕಲ್ಪಿಸುವ ಮೂಲಕ ಎಲ್ಲ ಸಮುದಾಯವನ್ನು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ನೋಡುತ್ತಿದೆ. ಉಚಿತ ಪಡಿತರ ಆಹಾರ ಧಾನ್ಯ ನೀಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿನ ಎಲ್ಲ ಮನೆಗಳಿಗೆ ಶುದ್ಧ ಕುಡಿಯುವ ನೀರು, ರಸ್ತೆ ಹಾಗೂ ಮೂಲಸೌಲಭ್ಯ ಒದಗಿಸುವ ಕೆಲಸ ಪ್ರಧಾನಿ ಮಾಡುತ್ತಿದ್ದಾರೆ ಎಂದು ಹೇಳಿದರು. ಎನ್‌ಡಿಎಗೆ 400 ಸ್ಥಾನ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎನ್ ಡಿಎ ಈ ಬಾರಿ ಲೋಕಸಭೆಯಲ್ಲಿ 400 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸಮಾರಂಭವೊಂದರಲ್ಲಿ ಹೇಳಿದ್ದಾರೆ. ಅವರು ಹೇಳಿದಂತೆ ನಾವು ದೇಶದಲ್ಲಿ ಬರುವ ಲೋಕಸಭೆ ಚುನಾವಣೆಯಲ್ಲಿ ಎನ್ ಡಿಎ ಒಕ್ಕೂಟ 400 ಸ್ಥಾನಗಳನ್ನು ಗೆಲ್ಲಲು ಎಲ್ಲರೂ ಶ್ರಮ ವಹಿಸಬೇಕು. ಹಿಂದಿನ ವಿಧನಸಭಾ ಚುನಾವಣೆಯಲ್ಲಿ ನನ್ನ ಮೇಲೆ ಯಾರ್ಯಾರು ಸೇಡು ತೀರಿಸಿಕೊಂಡರೋ ನನಗೆ ತಿಲಳಿದಿದೆ. ಈ ಬಾರಿ ಹಾಗೇ ಪಕ್ಷಕ್ಕೆ ದ್ರೋಹ ಮಾಡುವವರು ಇದ್ದರೆ ಪಕ್ಷ ಬಿಟ್ಟು ತೊಲಗಿ, ಪಕ್ಷದಲ್ಲಿ ಇದ್ದು ಪಕ್ಷಕ್ಕೆ ದ್ರೋಹ ಮಾಡ ಬೇಡಿ ಎಂದು ಹೇಳಿದರು.
ಸಭೆಯನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ರಾಜ್ಯದ ಎಲ್ಲಾ 28 ಲೋಕಭಾ ಕ್ಷೇತ್ರಗಳಲ್ಲಿ ಕಮಲ ಅರಳಿಸಿ ಅಭಿವೃದ್ಧಿಗೆ ನಾಂದಿ ಹಾಡಬೇಕು. ಜಿಲ್ಲೆಯಲ್ಲಿ ಬದಲಾವಣೆಯಾಗಿದ್ದು, ಅಭಿವೃದ್ಧಿ ಕಾಣುತ್ತಿದೆ. ಇದಕ್ಕೆ ಮತ್ತಷ್ಟು ವೇಗ ಸಿಗಲು ಬಿಜೆಪಿಯನ್ನು ಬೆಂಬಲಿಸಬೇಕು ಎಂದರು.
ರಾಜ್ಯ ಸರ್ಕಾರ ದಲಿತ ವಿರೋಧಿ
ಸಭೆಯಲ್ಲಿ ಮಾತನಾಡಿದ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು, ರಾಜ್ಯ ಸರ್ಕಾರ ಬಡವರ ಮತ್ತು ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ. ರಾಜ್ಯದಲ್ಲಿ ವಿವಿಧ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳಿಗೆ ಸಮರ್ಪಕ ಅನುದಾನವಿಲ್ಲ. ಅಗತ್ಯವಿಲ್ಲದಿದ್ದರೂ ಸರ್ಕಾರ ಖಾತರಿ ಯೋಜನೆಗಳ ಮೂಲಕ ಅನುದಾನ ನೀಡಿದೆ. ಪಕ್ಷವನ್ನು ನೆಲಮಟ್ಟದಿಂದ ಬಲಪಡಿಸುವ ನಿಟ್ಟಿನಲ್ಲಿ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದೆ ಎಂದರು. ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಿ.ರಾಮಲಿಂಗಪ್ಪ, ಮಾಜಿ ಶಾಸಕ ಎಂ. ರಾಜಣ್ಣ,ಪಕ್ಷದ ಮುಖಂಡರಾದ ಡಾ.ಜಿ.ವಿ. ಮಂಜುನಾಥ್, ಪಿ.ಎನ್.ಕೇಶವರೆಡ್ಡಿ, ಸೀಕಲ್ ರಾಮಚಂದ್ರಗೌಡ, ವೇಣುಗೋಪಾಲ್, ಮರಳ ಕುಂಟೆ ಕೃಷ್ಣ ಮೂರ್ತಿ, ಕೆ.ವಿ. ನಾಗರಾಜ್, ಬಳುವನಹಳ್ಳೀ ಲೋಕೇಶ್ ಗೌಡ, ಕೃಷ್ಣಾರೆಡ್ಡಿ, ಅನು ಆನಂದ್, ಸುರೇಂದ್ರಗೌಡ,ಅಶೋಕ್ ಕುಮಾರ್, ಮತ್ತಿತರರು ಇದ್ದರು.