ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಹಾಲು ಉತ್ಪಾದಕರಿಗೆ ಬಾಕಿ ಉಳಿಸಿಕೊಂಡಿರುವ 716 ಕೋಟಿ ರು. ಪ್ರೋತ್ಸಾಹ ಧನವನ್ನು ರಾಜ್ಯ ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರದ ಧೋರಣೆಯಿಂದ ಜನರು ಮಾತ್ರವಲ್ಲ ಜಾನುವಾರುಗಳೂ ಈ ಸರ್ಕಾರಕ್ಕೆ ಶಾಪ ಹಾಕುತ್ತಿವೆ.
ರಾಜ್ಯದ ರೈತರು, ಬಡವರ ಕೋಪವಷ್ಟೇ ಅಲ್ಲ, ಜಾನುವಾರುಗಳ ಕೋಪಕ್ಕೂ ಕೂಡ ರಾಜ್ಯ ಸರ್ಕಾರ ಸಿಲುಕಿದೆ ಎಂದು ಹೇಳಿದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನವನ್ನು ನೀಡುತ್ತಿದ್ದರು.
ಅದರ ಪರಿಣಾಮವಾಗಿ ಬಿಜೆಪಿ ಆಡಳಿತದಲ್ಲಿದ್ದಾಗ 26 ಲಕ್ಷ ಗ್ರಾಮೀಣ ರೈತರಿಂದ ಪ್ರತಿದಿನ 80-85 ಲಕ್ಷ ಲೀಟರ್ ಹಾಲು ಸಂಗ್ರಹಿಸಲಾಗುತ್ತಿತ್ತು. ಇಂದಿನ ಕಾಂಗ್ರೆಸ್ ಸರ್ಕಾರವು ಹಾಲು ಉತ್ಪಾದಕ ರೈತರಿಗೆ 716 ಕೋಟಿ ರು. ಬಾಕಿ ಪ್ರೋತ್ಸಾಹಧನವನ್ನು ಉಳಿಸಿಕೊಂಡಿದೆ.
ಇದರ ಪರಿಣಾಮವಾಗಿ 10 ಲಕ್ಷ ಲೀಟರ್‌ನಷ್ಟು ಹಾಲು ಸಂಗ್ರಹಣೆ ಕಡಿಮೆ ಆಗಿದೆ ಎಂದರು.ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ನೈಜ ಕಾಳಜಿ ಇದ್ದರೆ ಬಾಕಿ ಉಳಿಸಿದ ಹೈನುಗಾರರ ಪ್ರೋತ್ಸಾಹಧನವನ್ನು ಗೌರವಯುತವಾಗಿ ತಕ್ಷಣ ಬಿಡುಗಡೆ ಮಾಡಬೇಕು.
ಇಲ್ಲದಿದ್ದರೆ ಜನರು ಮತ್ತು ಜಾನುವಾರುಗಳು ಒಟ್ಟಿಗೆ ಸೇರಿ ಹೋರಾಟಕ್ಕೆ ಇಳಿಯುವ ಅನಿವಾರ್ಯತೆ ಬರಲಿದೆ ಎಂದು ವಿಜಯೇಂದ್ರ ಎಚ್ಚರಿಸಿದರು.