ಬಿಜೆಪಿ, ಜೆಡಿಎಸ್‌ ಮೈತ್ರಿ ಪಕ್ಷದೊಳಗೆ ‘ಲೋಕ ಟಿಕೆಟ್’ ಕದನ...!

| Published : Feb 06 2024, 01:31 AM IST

ಬಿಜೆಪಿ, ಜೆಡಿಎಸ್‌ ಮೈತ್ರಿ ಪಕ್ಷದೊಳಗೆ ‘ಲೋಕ ಟಿಕೆಟ್’ ಕದನ...!
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯದೊಳಗೆ ಜೆಡಿಎಸ್ ೧ ಕ್ಷೇತ್ರದಲ್ಲಷ್ಟೇ ಗೆಲುವು ಸಾಧಿಸಿದ್ದು, ೬ ಕ್ಷೇತ್ರಗಳಲ್ಲಿ ಸೋಲನುಭವಿಸಿದೆ. ಜೆಡಿಎಸ್‌ಗೆ ಸರಿಸಮನಾಗಿ ಬಿಜೆಪಿ ಪ್ರಾಬಲ್ಯ ವೃದ್ಧಿಸಿದೆ. ಜಿಲ್ಲೆಯಲ್ಲಿ ಬಿಜೆಪಿ ಪರವಾದ ಮತದಾರರು ಹೆಚ್ಚಾಗಿದ್ದಾರೆ. ಶ್ರೀರಾಮಮಂದಿರ ಉದ್ಘಾಟನೆ ಬಳಿಕ ಜಿಲ್ಲೆಯೊಳಗೆ ಬಿಜೆಪಿ ವೋಟ್ ಬ್ಯಾಂಕ್ ವೃದ್ಧಿಸಿದೆ. ಹಾಗಾಗಿ ಕ್ಷೇತ್ರವನ್ನು ಉಳಿಸಿಕೊಂಡು ನಾವೇ ಗೆಲುವಿಗೆ ಶ್ರಮಿಸಬಹುದು ಎಂಬ ಅಭಿಪ್ರಾಯವನ್ನು ಬಿಜೆಪಿಗರು ವರಿಷ್ಠರ ಮುಂದಿಡುತ್ತಿದ್ದಾರೆ.

ಮಂಡ್ಯ ಮಂಜುನಾಥಕನ್ನಡಪ್ರಭ ವಾರ್ತೆ ಮಂಡ್ಯ

ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳೊಳಗೆ ಚಟುವಟಿಕೆಗಳು ಚುರುಕನ್ನು ಪಡೆದುಕೊಂಡಿವೆ. ಮಂಡ್ಯ ಕ್ಷೇತ್ರಕ್ಕಾಗಿ ಜೆಡಿಎಸ್-ಬಿಜೆಪಿ ಮಿತ್ರ ಪಕ್ಷಗಳಲ್ಲೇ ಬಿರುಸಿನ ಪೈಪೋಟಿ ಶುರುವಾಗಿದೆ. ಹಾಲಿ ಸಂಸದೆ ಸುಮಲತಾ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಬಿಜೆಪಿ ಟಿಕೆಟ್ ಬೇಡಿಕೆಯನ್ನು ವರಿಷ್ಠರ ಮುಂದಿಟ್ಟು ಹೋರಾಡುತ್ತಿದ್ದಾರೆ. ಇದರ ನಡುವೆ ಜೆಡಿಎಸ್ ಮಂಡ್ಯ ಕ್ಷೇತ್ರ ತಮಗೆ ಸಿಕ್ಕೇ ಸಿಗುವುದೆಂಬ ಖಚಿತ ವಿಶ್ವಾಸದಲ್ಲಿ ಚುನಾವಣಾ ಸಿದ್ಧತೆಯನ್ನು ಆರಂಭಿಸಿದೆ.

ಮಂಡ್ಯ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧೆಗಿಳಿಯುವರೆಂಬ ವದಂತಿಗಳ ನಡುವೆ ಮಾಜಿ ಸಂಸದ ಸಿ.ಎಸ್.ಪುಟ್ಟರಾಜು ಸದ್ದಿಲ್ಲದೆ ಚುನಾವಣಾ ಪೂರ್ವ ಸಿದ್ಧತೆಗಳನ್ನು ವ್ಯವಸ್ಥಿತವಾಗಿ ನಡೆಸುತ್ತಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನದಲ್ಲಿ ಅವಿರತವಾಗಿ ಮುನ್ನಡೆದಿದ್ದಾರೆ. ಬಿಜೆಪಿಯವರೊಂದಿಗೆ ಕೇಸರಿ ಶಾಲು ಹಾಕಿಕೊಂಡು ಮಿತ್ರ ಪಕ್ಷದವರ ವಿಶ್ವಾಸವನ್ನು ಗಳಿಸುವ ಪ್ರಯತ್ನದಲ್ಲಿ ತೊಡಗಿರುವುದು ವಿಶೇಷವಾಗಿದೆ.

ಸುಮಲತಾ ಬಿಗಿಪಟ್ಟು:

ಹಾಲಿ ಸಂಸದೆ ಸುಮಲತಾ ಅವರು ನಾನು ಸ್ಪರ್ಧಿಸುವುದಾದರೆ ಮಂಡ್ಯ ಕ್ಷೇತ್ರದಿಂದ ಮಾತ್ರ. ಅಲ್ಲಿಯೇ ತಮಗೆ ಅವಕಾಶ ನೀಡಬೇಕು. ಬೇರಾವುದೇ ಕ್ಷೇತ್ರದ ಟಿಕೆಟ್ ನೀಡಿದರೆ ನಾನು ಒಪ್ಪುವುದಿಲ್ಲ. ನಾನು ಹಾಲಿ ಮಂಡ್ಯ ಸಂಸದೆ. ಹಾಲಿ ಸಂಸದರಿಗೇ ಟಿಕೆಟ್ ನೀಡುವಂತೆ ನನಗೆ ಅವಕಾಶ ನೀಡಬೇಕೆಂಬ ಬಿಗಿಪಟ್ಟನ್ನು ಬಿಜೆಪಿ ವರಿಷ್ಠರ ಮುಂದಿಟ್ಟಿದ್ದಾರೆ.

ಇದರ ನಡುವೆ ಸುಮಲತಾ ಅವರಿಗೇ ಬಿಜೆಪಿ ಟಿಕೆಟ್ ನೀಡುವಂತೆ ಮಾಜಿ ಸಚಿವ ಕೆ.ಸಿ.ನಾರಾಯಣಗೌಡರೂ ಸಹ ಒತ್ತಾಯಿಸಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಕ್ಷೇತ್ರ ಬಿಟ್ಟುಕೊಡುವುದು ಬೇಡ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮಂಡ್ಯ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಸೋಲನುಭವಿಸಿದೆ. ಪಕ್ಷದ ಪ್ರಾಬಲ್ಯ ಕುಸಿದಿರುವುದರಿಂದ ಸುಮಲತಾ ಅವರಿಗೇ ಟಿಕೆಟ್ ನೀಡುವಂತೆ ಬಿಜೆಪಿ ಪಕ್ಷದ ಕೆಲವು ಮುಖಂಡರು ವರಿಷ್ಠರೆದುರು ಬೇಡಿಕೆ ಇಟ್ಟಿದ್ದಾರೆ.

ಕ್ಷೇತ್ರ ಹಂಚಿಕೆ ಸಮಯದಲ್ಲಿ ಒಮ್ಮೆ ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾಗಿ ಸುಮಲತಾ ಅವರಿಗೆ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಟಿಕೆಟ್ ಸಿಗದಿದ್ದರೆ ಆಗ ಅವರು ರಾಜಕೀಯವಾಗಿ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವುದು ರಹಸ್ಯವಾಗಿ ಉಳಿದಿದೆ. ಬಿಜೆಪಿ ವರಿಷ್ಠರ ಮನವೊಲಿಕೆ ಮಾತಿಗೆ ಮಣಿದು ತಮ್ಮ ನಿರ್ಧಾರ ಬದಲಿಸುವರೋ ಅಥವಾ ಅದನ್ನು ಧಿಕ್ಕರಿಸಿ ಕಾಂಗ್ರೆಸ್ ಸೇರುವ ನಿರ್ಧಾರ ಮಾಡುವರೋ ಅಥವಾ ಮತ್ತೊಮ್ಮೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಹಸ ಮಾಡುವರೋ ಎನ್ನುವುದು ಸದ್ಯಕ್ಕೆ ನಿಗೂಢವಾಗಿದೆ.

ಡಾ.ಸಿದ್ದರಾಮಯ್ಯ ಶಕ್ತಿ ಪ್ರದರ್ಶನ:

ಇನ್ನೊಂದೆಡೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯನವರು ತಮಗೇ ಬಿಜೆಪಿ ಟಿಕೆಟ್ ನೀಡುವಂತೆ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ. ಇದಕ್ಕಾಗಿ ಫೆ.೨ರಂದು ಮಂಡ್ಯದಲ್ಲಿ ಅಭಿಮಾನಿಗಳು ಮತ್ತು ಕಾರ್ಯಕರ್ತರ ಸಮಾವೇಶ ನಡೆಸಿ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ೨೦೧೮ರ ಲೋಕಸಭೆ ಉಪ ಚುನಾವಣೆಯಲ್ಲಿ ಬಿಜೆಪಿಗೆ ಮೊದಲಬಾರಿಗೆ ೨.೪೪ ಲಕ್ಷ ಮತಗಳನ್ನು ಗಳಿಸಿಕೊಟ್ಟಿದ್ದಾರೆ. ೨೦೧೯ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಪಕ್ಷದ ಬೆಂಬಲಿತ ಅಭ್ಯರ್ಥಿ ಸುಮಲತಾ ಬೆಂಬಲಕ್ಕೆ ನಿಂತು ಗೆಲುವಿಗೆ ಶ್ರಮಿಸಿದ್ದಾರೆ. ಈ ಚುನಾವಣೆಯಲ್ಲಿ ಡಾ. ಸಿದ್ದರಾಮಯ್ಯನವರಿಗೆ ಟಿಕೆಟ್ ನೀಡುವಂತೆ ಕಾರ್ಯಕರ್ತರು, ಅಭಿಮಾನಿಗಳು ಒಕ್ಕೊರಲಿನಿಂದ ಮನವಿ ಮಾಡಿದ್ದಾರೆ.

ಇದರ ಜೊತೆಗೆ ಸುಮಲತಾ ಅವರು ಇನ್ನೂ ಬಿಜೆಪಿ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆ ಆಗಿಲ್ಲ. ಕಳೆದ ಐದು ವರ್ಷಗಳಲ್ಲಿ ಅವರ ಗೆಲುವಿಗೆ ಶ್ರಮಿಸಿದ ಕಮಲ ಕಾರ್ಯಕರ್ತರಿಗೆ ಯಾವುದೇ ಚುನಾವಣೆಯಲ್ಲೂ ಬೆಂಬಲ ಸೂಚಿಸಲಿಲ್ಲ. ಬಿಜೆಪಿ ಟಿಕೆಟ್ ಸಿಗದಿದ್ದರೆ ಈಗಲೂ ಕಾಂಗ್ರೆಸ್ ಸೇರುವ ಅವಕಾಶವನ್ನು ಮುಕ್ತವಾಗಿ ತೆರೆದಿರಿಸಿಕೊಂಡಿದ್ದಾರೆ. ಹಾಗಾಗಿ ಜನರ ಕೈಗೆ ಸಿಗುವ ಡಾ.ಸಿದ್ದರಾಮಯ್ಯನವರಂತಹ ಸ್ಥಳೀಯರಿಗೆ ಟಿಕೆಟ್ ನೀಡುವುದೇ ಸೂಕ್ತ ಎಂಬ ಅಭಿಪ್ರಾಯವನ್ನು ಬಿಜೆಪಿಯ ಹಲವು ಮುಖಂಡರು- ಕಾರ್ಯಕರ್ತರು ವ್ಯಕ್ತಪಡಿಸುತ್ತಿದ್ದಾರೆ.

ಜೆಡಿಎಸ್ ಪಾಲಾಗದಂತೆ ತಡೆಗೆ ಕಸರತ್ತು:

ಇನ್ನು ಹಾಸನ ಕ್ಷೇತ್ರದ ಮಾಜಿ ಶಾಸಕ ಪ್ರೀತಂಗೌಡ ಅವರು ಕ್ಷೇತ್ರ ಹಂಚಿಕೆ ಸಮಯದಲ್ಲಿ ಜೆಡಿಎಸ್‌ಗೆ ನೀಡಲಾಗುವ ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಬಿಜೆಪಿ ಕಾರ್ಯಕರ್ತರ ಒಪ್ಪಿಗೆ ಪಡೆಯಬೇಕು ಎಂಬ ಮನವಿ ಮಾಡಿದ್ದಾರೆ. ಇದರೊಂದಿಗೆ ಜೆಡಿಎಸ್‌ಗೆ ಮಂಡ್ಯ ಕ್ಷೇತ್ರ ಕೈಬಿಟ್ಟು ಹೋಗುವಂತೆ ಮಾಡುವ ಕಸರತ್ತು ಆರಂಭಿಸಿದ್ದಾರೆ.

ಮಂಡ್ಯದೊಳಗೆ ಜೆಡಿಎಸ್ ೧ ಕ್ಷೇತ್ರದಲ್ಲಷ್ಟೇ ಗೆಲುವು ಸಾಧಿಸಿದ್ದು, ೬ ಕ್ಷೇತ್ರಗಳಲ್ಲಿ ಸೋಲನುಭವಿಸಿದೆ. ಜೆಡಿಎಸ್‌ಗೆ ಸರಿಸಮನಾಗಿ ಬಿಜೆಪಿ ಪ್ರಾಬಲ್ಯ ವೃದ್ಧಿಸಿದೆ. ಜಿಲ್ಲೆಯಲ್ಲಿ ಬಿಜೆಪಿ ಪರವಾದ ಮತದಾರರು ಹೆಚ್ಚಾಗಿದ್ದಾರೆ. ಶ್ರೀರಾಮಮಂದಿರ ಉದ್ಘಾಟನೆ ಬಳಿಕ ಜಿಲ್ಲೆಯೊಳಗೆ ಬಿಜೆಪಿ ವೋಟ್ ಬ್ಯಾಂಕ್ ವೃದ್ಧಿಸಿದೆ. ಹಾಗಾಗಿ ಕ್ಷೇತ್ರವನ್ನು ಉಳಿಸಿಕೊಂಡು ನಾವೇ ಗೆಲುವಿಗೆ ಶ್ರಮಿಸಬಹುದು ಎಂಬ ಅಭಿಪ್ರಾಯವನ್ನು ವರಿಷ್ಠರ ಮುಂದಿಡುತ್ತಿದ್ದಾರೆ.

ಜೆಡಿಎಸ್‌ನೊಳಗೆ ಸಿ.ಎಸ್.ಪುಟ್ಟರಾಜು ಚುರುಕು:

ಬಿಜೆಪಿಯೊಳಗೆ ನಡಯುತ್ತಿರುವ ಬೆಳವಣಿಗೆಗಳನ್ನು ಜೆಡಿಎಸ್ ದೂರದಿಂದಲೇ ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿದೆ. ಬಿಜೆಪಿ ನಾಯಕರ ಯಾವುದೇ ಮಾತುಗಳಿಗೂ ಬಹಿರಂಗವಾಗಿ ಪ್ರತಿಕ್ರಿಯೆ ನೀಡುತ್ತಿಲ್ಲ. ಮಂಡ್ಯ ಕ್ಷೇತ್ರ ಜೆಡಿಎಸ್‌ಗೆ ಫಿಕ್ಸ್ ಎಂದೇ ಭಾವಿಸಿರುವ ಪಕ್ಷದ ನಾಯಕರು, ಕಾರ್ಯಕರ್ತರು ಚುನಾವಣಾ ಕಾರ್ಯಚಟುವಟಿಕೆಗಳನ್ನು ಬಿರುಸುಗೊಳಿಸಿದ್ದಾರೆ.

ಮಾಜಿ ಸಂಸದ ಸಿ.ಎಸ್.ಪುಟ್ಟರಾಜು ಅಧಿಕೃತ ಅಭ್ಯರ್ಥಿಯಾಗುವ ಸಾಧ್ಯತೆಗಳು ಹೆಚ್ಚಾಗಿ ಕೇಳಿಬರುತ್ತಿವೆ. ಆ ಹಿನ್ನೆಲೆಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಎಲ್ಲೆಡೆ ಓಡಾಡುತ್ತಿದ್ದಾರೆ.

೨೦೧೫ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಅಖಾಡ ಪ್ರವೇಶಿಸಿ ಗೆಲುವು ಸಾಧಿಸಿದ್ದ ಸಿ.ಎಸ್. ಪುಟ್ಟರಾಜು, ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿಯಲು ಉತ್ಸುಕರಾಗಿದ್ದಾರೆ. ಇದಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರೂ ಗ್ರೀನ್‌ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ.

ಕಳೆದ ವಿಧಾನಸಭಾ ಚುನಾವಣಾ ಸೋಲಿನಿಂದ ಎಚ್ಚೆತ್ತುಕೊಂಡಿರುವ ಪುಟ್ಟರಾಜು ಅವರು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ. ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಮತ್ತು ಪಕ್ಷದ ನಾಯಕರು, ಮುಖಂಡರ ಬಗ್ಗೆ ಯಾವುದೇ ಮಾತನಾಡದೆ ಮೌನವಾಗಿದ್ದಾರೆ. ಪ್ರಚೋದನಕಾರಿ ಮಾತುಗಳಿಗೂ ಉತ್ತರ ನೀಡದೆ ಎರಡೂ ಪಕ್ಷದ ಮುಖಂಡರು- ಕಾರ್ಯಕರ್ತರನ್ನು ಒಗ್ಗಟ್ಟಾಗಿ ಕರೆದೊಯ್ಯುವ ತಂತ್ರಗಾರಿಕೆ ಅನುಸರಿಸುತ್ತಿದ್ದಾರೆ.

ಸ್ಟಾರ್ ಚಂದ್ರಶೇಖರ್ ಕಾಂಗ್ರೆಸ್ ಅಭ್ಯರ್ಥಿ?

ಕಾಂಗ್ರೆಸ್ ಪಕ್ಷ ಕೂಡ ಬಿಜೆಪಿ- ಜೆಡಿಎಸ್‌ನಿಂದ ಅಭ್ಯರ್ಥಿ ಯಾರಾಗಬಹುದೆಂದು ಕಾದು ನೋಡುತ್ತಿದೆ. ಮಂಡ್ಯ ಕ್ಷೇತ್ರಕ್ಕೆ ಸಿನಿಮಾದವರು ಬೇಡ ಎಂಬ ನಿರ್ಧಾರಕ್ಕೆ ಬಂದಿರುವ ಕಾಂಗ್ರೆಸ್ ನಾಗಮಂಗಲದ ಗುತ್ತಿಗೆದಾರ ಸ್ಟಾರ್ ಚಂದ್ರಶೇಖರ್ ಎಂಬುವರನ್ನು ಅಭ್ಯರ್ಥಿಯನ್ನಾಗಿ ಮಾಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಮೂಲತಃ ನಾಗಮಂಗಲ ತಾಲೂಕಿನ ಕನ್ನಘಟ್ಟ ಗ್ರಾಮದವರಾದ ಗೌರಿಬಿದನೂರು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡರ ಸಹೋದರ ಸ್ಟಾರ್ ಚಂದ್ರಶೇಖರ್ ಎಂದು ತಿಳಿದುಬಂದಿದೆ.

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ಕ್ಷೇತ್ರದಿಂದ ಸ್ಪರ್ಧೆಗಿಳಿಯಬಹುದೆಂಬ ವದಂತಿಗಳಿರುವುದರಿಂದ ಅಭ್ಯರ್ಥಿ ಹೆಸರನ್ನು ಬಹಿರಂಗಗೊಳಿಸುತ್ತಿಲ್ಲ. ಪಕ್ಷದ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗಿದ್ದು, ಹೆಸರು ಘೋಷಣೆಯಷ್ಟೇ ಬಾಕಿ ಇದೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳುತ್ತಿದ್ದಾರೆ. ಆದರೆ, ಕುಮಾರಸ್ವಾಮಿ ಕ್ಷೇತ್ರ ಪ್ರವೇಶಿಸಿದರಷ್ಟೇ ಬಹುಶಃ ಅಭ್ಯರ್ಥಿ ಬದಲಾವಣೆಯಾಗಬಹುದು. ಇಲ್ಲದಿದ್ದರೆ ಅವರೇ ಅಧಿಕೃತ ಅಭ್ಯರ್ಥಿಯಾಗಬಹುದೆಂದು ಹೇಳಲಾಗುತ್ತಿದೆ.