ಹೆಚ್ಚುವರಿ ನೀರು ಬಿಡುಗಡೆಗೆ ಆಗ್ರಹಿಸಿ ದೆಹಲಿಯಲ್ಲಿ ಸಚಿವೆ ಅತಿಶಿ ಉಪವಾಸ

| Published : Jun 22 2024, 12:52 AM IST / Updated: Jun 22 2024, 04:27 AM IST

ಹೆಚ್ಚುವರಿ ನೀರು ಬಿಡುಗಡೆಗೆ ಆಗ್ರಹಿಸಿ ದೆಹಲಿಯಲ್ಲಿ ಸಚಿವೆ ಅತಿಶಿ ಉಪವಾಸ
Share this Article
  • FB
  • TW
  • Linkdin
  • Email

ಸಾರಾಂಶ

ನೆರೆಯ ಹರ್ಯಾಣದಿಂದ ಹೆಚ್ಚಿನ ನೀರು ಬಿಡುಗಡೆಗೆ ಆಗ್ರಹಿಸಿ ದೆಹಲಿಯ ಆಮ್‌ಆದ್ಮಿ ಸರ್ಕಾರದ ಸಚಿವೆ ಅತಿಶಿ ಶುಕ್ರವಾರದಿಂದ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ನವದೆಹಲಿ: ನೆರೆಯ ಹರ್ಯಾಣದಿಂದ ಹೆಚ್ಚಿನ ನೀರು ಬಿಡುಗಡೆಗೆ ಆಗ್ರಹಿಸಿ ದೆಹಲಿಯ ಆಮ್‌ಆದ್ಮಿ ಸರ್ಕಾರದ ಸಚಿವೆ ಅತಿಶಿ ಶುಕ್ರವಾರದಿಂದ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ದೆಹಲಿ ಜಲ ಸಚಿವೆ ಅತಿಶಿ ದಕ್ಷಿಣ ದೆಹಲಿಯ ಭೋಗಲ್‌ನಲ್ಲಿ ಸತ್ಯಾಗ್ರಹವನ್ನು ಆರಂಭಿಸಿದ್ದು, ಅವರಿಗೆ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌ರ ಪತ್ನಿ ಸುನಿತಾ, ಆಪ್ ಸಂಸದ ಸಂಜಯ್ ಸಿಂಗ್, ಸಚಿವ ಸೌರಭ್‌ ಭಾರಧ್ವಾಜ್‌ ಮೊದಲಾದವರು ಸಾಥ್‌ ನೀಡಿದ್ದಾರೆ.

ಇದೇ ವೇಳೆ ಉಪವಾಸ ಕುರಿತು ಕೇಜ್ರಿವಾಲ್‌ ಜೈಲಿನಿಂದಲೇ ನೀಡಿದ ಸಂದೇಶವನ್ನು ಅವರ ಪತ್ನಿ ಸುನಿತಾ ಓದಿದರು. ‘ನೀರಿಗಾಗಿ ಜನ ಪರಿತಪಿಸುತ್ತಿರುವುದನ್ನು ಟೀವಿಯಲ್ಲಿ ನೋಡಿದೆ. ಬಾಯಾರಿದವರಿಗೆ ನೀರು ಕೊಡುವುದು ನಮ್ಮ ಸಂಸ್ಕೃತಿ. ದೆಹಲಿಗೆ ಪಕ್ಕದ ರಾಜ್ಯಗಳಿಂದ ನೀರು ಹರಿಯುತ್ತದೆ. ಇಂಥಹ ವಿಷಮ ಪರಿಸ್ಥಿತಿಯಲ್ಲಿ ನೆರೆಯ ರಾಜ್ಯಗಳು ದೆಹಲಿಗೆ ನೆರವಾಗಲಿದೆ ಎನ್ನುವ ವಿಶ್ವಾಸವಿದೆ. ಹರ್ಯಾಣ ತನ್ನ ಪಾಲನ್ನು ತುಸು ಕಡಿಮೆ ಮಾಡಿಕೊಳ್ಳುತ್ತದೆ ಎಂಬ ವಿಶ್ವಾಸವಿದೆ. ಅತಿಶಿ ತಪಸ್ಸು ಯಶಸ್ಸು ಪಡೆಯಲಿ’ ಎಂದು ಕೇಜ್ರಿವಾಲ್ ಸಂದೇಶ ಕಳುಹಿಸಿದ್ದಾರೆ.

ಇದೇ ವೇಳೆ ‘ಹೆಚ್ಚಿನ ನೀರು ನೀಡುವಂತೆ ಹರ್ಯಾಣ ಮುಖ್ಯಮಂತ್ರಿ ಮತ್ತು ಪ್ರಧಾನಿ ಮೋದಿಗೆ ಮಾಡಿದ ಮನವಿ ಫಲಕೊಟ್ಟಿಲ್ಲ’ ಎಂದು ಅತಿಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲ ದಿನಗಳಿಂದ ದೆಹಲಿ ಭಾರೀ ಪ್ರಮಾಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದೆ.