ಡಿಕೆಶಿ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಜಿ.ಟಿ. ದೇವೇಗೌಡ

| Published : Jun 22 2024, 12:50 AM IST / Updated: Jun 22 2024, 04:29 AM IST

GTD
ಡಿಕೆಶಿ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಜಿ.ಟಿ. ದೇವೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಡಿ.ಕೆ.ಶಿವಕುಮಾರ್ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದ ಶಾಸಕ ಜಿ.ಟಿ.ದೇವೇಗೌಡ  

  ಮೈಸೂರು : ಡಿ.ಕೆ.ಶಿವಕುಮಾರ್ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನನ್ನ ರಾಜಕೀಯ ಅನುಭವದಿಂದ ಹೇಳುತ್ತಿರುವ ಮಾತು. ಡಿ.ಕೆ.ಶಿವಕುಮಾರ್ ಮಾತಲ್ಲಿ ರಾಜಕೀಯ ತಂತ್ರಗಾರಿಕೆ ಇದೆ ಅಷ್ಟೇ. ಡಿ.ಕೆ.ಸುರೇಶ್ ಅವರನ್ನು ಸ್ಪರ್ಧೆಗೆ ಇಳಿಸುವ ದೃಷ್ಟಿಯಿಂದ ನಾನು ಬಂದರೇ ಮತ ಹಾಕುತ್ತೀರಾ ಎಂದು ಜನರನ್ನು ಕೇಳುತ್ತಿದ್ದಾರೆ ಅಷ್ಟೇ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.

ಚನ್ನಪಟ್ಟಣ ಉಪ ಚುನಾವಣೆ ಅಖಾಡ ಎಲ್ಲಾ ಕ್ಷೇತ್ರಗಿಂತ ಜೋರಾಗಿರಲಿದೆ. ಜಿದ್ದಾಜಿದ್ದಿನ ಫೈಟ್ ನಡೆಯುತ್ತದೆ. ನಿಖಿಲ್ ನಾನೇ ಸ್ಪರ್ಧೆ ಮಾಡುತ್ತೇನೆಂದು ಎಲ್ಲಿಯೂ ಹೇಳಿಲ್ಲ. ಸಿ.ಪಿ.ಯೋಗೇಶ್ವರ್ ಜನಗಳ ಅಭಿಪ್ರಾಯ ನನ್ನ ಪರವಾಗಿದ್ದಾರೆ ಅಂಥ ಅಷ್ಟೇ ಹೇಳಿದ್ದಾರೆ. ಅಂತಿಮವಾಗಿ ಮೈತ್ರಿ ನಾಯಕರು ಕುಳಿತು ತೀರ್ಮಾನ ಮಾಡುತ್ತೇವೆ ಎಂದರು.

ಎಲ್ಲಾ ಉಪ ಚುನಾವಣೆಗಳು ಸರ್ಕಾರದ ಪರವಾಗಿಯೇ ಇರುವುದಿಲ್ಲ. ಒಂದೊಂದು ಬಾರಿ ಒಂದೊಂದು ಟ್ರೆಂಡ್ ನಡೆಯುತ್ತದೆ. ನಮ್ಮ ಅಭ್ಯರ್ಥಿ ಯಾರು ಎಂಬುದನ್ನ ನಾವಿನ್ನು ತೀರ್ಮಾನ ಮಾಡಿಲ್ಲ. ಕೋರ್ ಕಮಿಟಿಯಲ್ಲಿ ಚರ್ಚೆ ಮಾಡಿ ನಾನೇ ಅದನ್ನ ಹೇಳುತ್ತೇನೆ. ಕೋರ್ ಕಮಿಟಿಯ ಅಧ್ಯಕ್ಷ ನಾನೇ ಆಗಿರುವ ಕಾರಣ ಅಭ್ಯರ್ಥಿ ವಿವಾದದಲ್ಲಿ ವೈಯಕ್ತಿಕ ಅಭಿಪ್ರಾಯ ಹೇಳಲು ಬರುವುದಿಲ್ಲ ಎಂದರು.

ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ:

ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ ಬಂಧಿಸುವ ಮೂಲಕ ಪೊಲೀಸರು ಉತ್ತಮ ರೀತಿ ಕೆಲಸ ಮಾಡುತ್ತಿದ್ದಾರೆ. ಪೊಲೀಸರ ಮೇಲೆ ನಂಬಿಕೆ ಇದೆ, ಅವರ ಮೇಲೆ ಗೌರವ ಹೆಚ್ಚಾಗಿದೆ. ಈ ವಿಚಾರವಾಗಿ ಮುಖ್ಯಮಂತ್ರಿಗಳೆ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಚರ್ಚೆ ಮಾಡಿದ್ದಾರೆ. ಸ್ವತಃ ನಾನೇ ವೀಡಿಯೋ ನೋಡಿದ್ದೇನೆ ಎಂದು ಸಿಎಂ ಹೇಳಿದ್ದಾರೆ. ಇದರಿಂದ ಯಾರು ಪರ ಮಾತನಾಡಬಾರದು ಎಂದು ಅವರೇ ಸೂಚನೆ ನೀಡಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ. ರೇಣುಕುಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದ ಶಾಸಕ ಜಿ.ಟಿ. ದೇವೆಗೌಡ ತಿಳಿಸಿದರು.