ಕಾಂಗ್ರೆಸ್‌ ಗ್ಯಾರಂಟಿ ಸಮಾವೇಶಗಳಿಗೆ ಹಣ ಪೋಲು: ರವೀಂದ್ರ ಶ್ರೀಕಂಠಯ್ಯ

| Published : Apr 01 2024, 12:50 AM IST / Updated: Apr 01 2024, 07:51 AM IST

ಕಾಂಗ್ರೆಸ್‌ ಗ್ಯಾರಂಟಿ ಸಮಾವೇಶಗಳಿಗೆ ಹಣ ಪೋಲು: ರವೀಂದ್ರ ಶ್ರೀಕಂಠಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

  ಸಂಕಷ್ಟದಲ್ಲಿರುವ ರೈತರಿಗೆ ಬರಪರಿಹಾರ ಕೊಡಿ, ಅಭಿವೃದ್ಧಿಗೆ ಹಣ ಕೊಡಿ ಎಂದರೆ ಇಲ್ಲ ಎನ್ನುವ ಸರ್ಕಾರಕ್ಕೆ ಗ್ಯಾರಂಟಿ ಸಮಾವೇಶ ಮಾಡುವುದಕ್ಕೆ ಎಲ್ಲಿಂದ ಹಣ ಬರುತ್ತಿದೆ ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಪ್ರಶ್ನಿಸಿದರು.

 ಶ್ರೀರಂಗಪಟ್ಟಣ :  ಕಾಂಗ್ರೆಸ್ ನೇತೃತ್ವದ ಸರ್ಕಾರ ಗ್ಯಾರಂಟಿ ಸಮಾವೇಶಗಳಿಗೆ ಹಣ ಪೋಲು ಮಾಡುತ್ತಿದೆ. ಜಿಲ್ಲೆಯೊಳಗೆ ನಡೆದ ಸಮಾವೇಶಗಳಿಗೆ ೯ ಕೋಟಿ ರು. ಹಣ ಖರ್ಚು ಮಾಡಿದೆ. ಬರಗಾಲದ ಸಮಯದಲ್ಲಿ ಜನರ ತೆರಿಗೆ ಹಣವನ್ನು ದುಂದುವೆಚ್ಚ ಮಾಡುವ ಅಗತ್ಯವಿತ್ತೇ ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಪ್ರಶ್ನಿಸಿದರು.

ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಲೋಕಸಭಾ ಚುನಾವಣೆ ಸಂಬಂಧ ಜೆಡಿಎಸ್-ಬಿಜೆಪಿ ಸಮ್ಮಿಲನ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿದ್ದರೂ ಬೆಳೆಗಳಿಗೆ ಕೊಡಲಿಲ್ಲ. ಬೆಳೆಗಳು ಒಣಗುತ್ತಿವೆ. ತೆಂಗಿನಮರಗಳು ಸುಟ್ಟುಹೋಗುತ್ತಿವೆ. ಸಂಕಷ್ಟದಲ್ಲಿರುವ ರೈತರಿಗೆ ಬರಪರಿಹಾರ ಕೊಡಿ, ಅಭಿವೃದ್ಧಿಗೆ ಹಣ ಕೊಡಿ ಎಂದರೆ ಇಲ್ಲ ಎನ್ನುವ ಸರ್ಕಾರಕ್ಕೆ ಗ್ಯಾರಂಟಿ ಸಮಾವೇಶ ಮಾಡುವುದಕ್ಕೆ ಎಲ್ಲಿಂದ ಹಣ ಬರುತ್ತಿದೆ ಎಂದು ಪ್ರಶ್ನಿಸಿದರು.

ಶ್ರೀರಂಗಪಟ್ಟಣ ಕ್ಷೇತ್ರಕ್ಕೆ ಕಳಂಕ ತರುವ ಹೇಳಿಕೆಗಳನ್ನೇ ಶಾಸಕ ರಮೇಶ್ ಬಂಡಿಸಿದ್ದೇಗೌಡ ನೀಡುತ್ತಿದ್ದಾರೆ. ಹಿಂದೊಮ್ಮೆ ಹೆಣ್ಣುಮಕ್ಕಳಿಂದಲೇ ಏಡ್ಸ್ ಬರುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆಗ ಸಿಇಒ ಆಗಿದ್ದ ರೋಹಿಣಿ ಸಿಂಧೂರಿ ಅವರು ಇವರ ವಿರುದ್ಧ ದೂರು ನೀಡಲು ಮುಂದಾಗಿದ್ದರು. ಈಗ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಹೀಗೆ ಕ್ಷೇತ್ರಕ್ಕೆ ಕಳಂಕ ತರುವ ವಿಚಾರಗಳನ್ನು ಮಾತನಾಡದೆ ಅಭಿವೃದ್ಧಿ, ಸಮಸ್ಯೆಗಳ ಬಗ್ಗೆ ಮಾತನಾಡುವಂತೆ ಸಲಹೆ ನೀಡಿದರು.

ಕುಡಿಯುವ ನೀರಿಗೆ ಎಲ್ಲೆಲ್ಲೂ ಹಾಹಾಕಾರ ಶುರುವಾಗಿದೆ. ನೀರಿಗಾಗಿ ಹೊಡೆದಾಟ, ಪೊಲೀಸ್ ಠಾಣೆಯಲ್ಲಿ ದೂರುಗಳು ದಾಖಲಾಗುತ್ತಿವೆ. ಜನರ ಸಂಕಷ್ಟಕ್ಕೆ ಸ್ಪಂದಿಸದೆ ಹಣ ಕೊಟ್ಟು ವೋಟ್ ಪಡೆಯಲು ಮುಂದಾಗಿದ್ದೀರಿ. ನಿಮ್ಮನ್ನು ರೈತರು ಕ್ಷಮಿಸುವುದಿಲ್ಲ ಎಂದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಕಾಂಗ್ರೆಸ್‌ನವರು ಹಣವಂತನನ್ನು ಚುನಾವಣೆಗೆ ತಂದು ನಿಲ್ಲಿಸಿದ್ದಾರೆ. ನಾವು ಹೃದಯವಂತನನ್ನು ಕಣಕ್ಕಿಳಿಸಿದ್ದೇವೆ. ಕಾಂಗ್ರೆಸ್‌ನ ಅಧಃಪತನ ಇಲ್ಲಿಂದಲೇ ಶುರುವಾಗಲಿದೆ ಎಂದು ಭವಿಷ್ಯ ನುಡಿದರು.

ಕುಮಾರಸ್ವಾಮಿ ಅವರು ಚುನಾವಣೆಯಲ್ಲಿ ಗೆದ್ದಾಗಿದೆ. ಈಗ ನಾವು ಯಾವ ಕ್ಷೇತ್ರದಲ್ಲಿ ಎಷ್ಟು ಲೀಡ್ ಎಂದು ಲೆಕ್ಕಹಾಕಬೇಕಿದೆ. ಜೆಡಿಎಸ್-ಬಿಜೆಪಿ ಮೈತ್ರಿ ಅಭಿವೃದ್ಧಿಯ ಸಂಕೇತ. ಮೈತ್ರಿ ಲೋಕಸಭೆ ಚುನಾವಣೆಗಷ್ಟೇ ಸೀಮಿತವಾಗಿರದೆ ಮುಂದೆಯೂ ಮುಂದುವರೆಯುತ್ತದೆ. ಮೋದಿ ಅವರ ನಾಯಕತ್ವಕ್ಕೆ ವಿಶ್ವವೇ ಬೆರಗಾಗಿದೆ. ಅವರ ಔದಾರ್ಯ ಕಂಡು ದೇವೇಗೌಡರೂ ಅಚ್ಚರಿಪಟ್ಟಿದ್ದಾರೆ. ಅವರು ಮತ್ತೊಮ್ಮೆ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಬೇಕು ಎಂದರು.