ಎಚ್‌ಡಿಕೆ-ಸುಮಲತಾ ದ್ವೇಷ ರಾಜಕಾರಣಕ್ಕೆ ‘ಕದನ ವಿರಾಮ’..?

| Published : Apr 01 2024, 12:49 AM IST / Updated: Apr 01 2024, 04:36 AM IST

ಸಾರಾಂಶ

 ಎಚ್‌.ಡಿ.ಕುಮಾರಸ್ವಾಮಿ ಅವರು ಸಂಸದೆ ಸುಮಲತಾ ನಿವಾಸಕ್ಕೆ ತೆರಳಿ ಬೆಂಬಲ ಕೋರಿದ್ದಾರೆ. ಸುಮಲತಾ ಅವರೂ ವಿಶ್ವಾಸದಿಂದಲೇ ಸ್ವಾಗತಿಸಿ ಅವರಿಗೆ ಶುಭ ಹಾರೈಸಿದ್ದಾರೆ.  

ಮಂಡ್ಯ ಮಂಜುನಾಥ

  ಮಂಡ್ಯ :  ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಸಂಸದೆ ಸುಮಲತಾ ಅಂಬರೀಶ್‌ ನಡುವಿನ ಐದು ವರ್ಷಗಳ ದ್ವೇಷ ರಾಜಕಾರಣಕ್ಕೆ ಇದೀಗ ಕದನವಿರಾಮ ಬಿದ್ದಂತೆ ಕಾಣುತ್ತಿದೆ. ಜೆಡಿಎಸ್‌ ಮತ್ತು ಬಿಜೆಪಿ ನಡುವಿನ ಮೈತ್ರಿಯ ಪರಿಣಾಮ ಇಬ್ಬರನ್ನೂ ಪರಸ್ಪರ ಸ್ನೇಹ ರಾಜಕಾರಣದತ್ತ ಕರೆತಂದಿದೆ.

2019ರ ಚುನಾವಣೆ ಸಂದರ್ಭದಿಂದ ಇಲ್ಲಿವರೆಗೆ ನಡೆದ ಕಹಿ ನೆನಪುಗಳನ್ನು ಮರೆತು ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಎಚ್‌.ಡಿ.ಕುಮಾರಸ್ವಾಮಿ ಅವರು ಸಂಸದೆ ಸುಮಲತಾ ನಿವಾಸಕ್ಕೆ ತೆರಳಿ ಬೆಂಬಲ ಕೋರಿದ್ದಾರೆ. ಸುಮಲತಾ ಅವರೂ ವಿಶ್ವಾಸದಿಂದಲೇ ಸ್ವಾಗತಿಸಿ ಅವರಿಗೆ ಶುಭ ಹಾರೈಸಿದ್ದಾರೆ. ಇದರೊಂದಿಗೆ ದಳಪತಿಗಳು ಹಾಗೂ ಸುಮಲತಾ ನಡುವೆ ನಡೆಯುತ್ತಿದ್ದ ಶೀತಲ ಸಮರ ಅಂತ್ಯವಾದಂತೆ ಕಂಡುಬರುತ್ತಿದೆ.

ಸ್ವಾಭಿಮಾನದ ಅಸ್ತ್ರ:

ಕಳೆದ ಚುನಾವಣೆ ಸಮಯದಲ್ಲಿ ಜೆಡಿಎಸ್ ವಿರುದ್ಧ ಸ್ವಾಭಿಮಾನದ ಅಸ್ತ್ರ ಪ್ರಯೋಗಿಸಿ ಯಶಸ್ವಿಯಾಗಿದ್ದ ಸುಮಲತಾ, ಏಳಕ್ಕೆ ಏಳು ಕ್ಷೇತ್ರಗಳಲ್ಲಿ ಗೆದ್ದಿದ್ದ ಜೆಡಿಎಸ್‌ನ್ನು ಎದುರಿಸಲಾಗದೆ ಕುಗ್ಗಿಹೋಗಿದ್ದ ಕಾಂಗ್ರೆಸ್‌ಗೆ ಹೊಸ ಶಕ್ತಿಯಾಗಿ ಸುಮಲತಾ ಅಂದು ದೊರಕಿದ್ದರು. ಜೆಡಿಎಸ್‌ನವರನ್ನು ನೇರವಾಗಿ ಎದುರಿಸಲಾಗದ ಪರಿಸ್ಥಿತಿಯಲ್ಲಿದ್ದ ಕಾಂಗ್ರೆಸ್‌ನವರು ಸುಮಲತಾ ಮೂಲಕವೇ ಅವರನ್ನು ಎದುರಿಸುವ ಪ್ರಯತ್ನ ನಡೆಸುತ್ತಿದ್ದರು. ಮಂಡ್ಯದ ಸ್ವಾಭಿಮಾನವನ್ನು ಅಂದು ಎತ್ತಿಹಿಡಿದಿದ್ದ ಸುಮಲತಾ ನಿರಂತರವಾಗಿ ಅದನ್ನು ಕಾಪಾಡಿಕೊಂಡು ಬಂದಿದ್ದರು. ಈ ಬಾರಿಯೂ ಮಂಡ್ಯ ಅಭ್ಯರ್ಥಿ ತಾವೇ ಎಂಬುದಾಗಿ ಎಲ್ಲೆಡೆ ಬಿಂಬಿಸಿಕೊಳ್ಳುತ್ತಿದ್ದರು.

ಸಿಡಿದೇಳದ ಸುಮಲತಾ:

ಮಂಡ್ಯ ಕ್ಷೇತ್ರದ ಬಿಜೆಪಿ ಟಿಕೆಟ್‌ ತಮಗೇ ಸಿಗುತ್ತದೆ ಎಂಬ ಅತಿಯಾದ ಆತ್ಮವಿಶ್ವಾಸ ಸುಮಲತಾ ಅವರಲ್ಲಿತ್ತು. ಮೈತ್ರಿ ಕಾರಣದಿಂದ ಬಿಜೆಪಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿತು. ಎಚ್‌.ಡಿ.ಕುಮಾರಸ್ವಾಮಿ ಅಖಾಡ ಪ್ರವೇಶಿಸಿದರು. ಇದರಿಂದ ಸುಮಲತಾ ತದ್ವಿರುದ್ಧ ನಿಲುವು ತಾಳಬಹುದೆಂಬ ನಿರೀಕ್ಷೆ ಇತ್ತು. ಅಭ್ಯರ್ಥಿ ಘೋಷಣೆಯಾದ ನಂತರದಲ್ಲಿ ಸುಮಲತಾ ಅವರು ಸಿಡಿದೇಳುವ ಪ್ರಯತ್ನ ನಡೆಸದೆ ಮೃದುಧೋರಣೆ ಅನುಸರಿಸುತ್ತಿದ್ದಾರೆ. ಭವಿಷ್ಯದ ರಾಜಕೀಯ ದೃಷ್ಟಿಯಿಂದ ದುಡುಕಿನ ನಿರ್ಧಾರ ಕೈಗೊಳ್ಳದೆ ಹಲವರ ಮಾರ್ಗದರ್ಶನದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನಿಡುತ್ತಿದ್ದಾರೆ.

ನಿನ್ನೆಯಷ್ಟೇ ಬೆಂಬಲಿಗರು, ಆಪ್ತರು, ಹಿತೈಷಿಗಳ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿರುವ ಸುಮಲತಾ ಅವರು ಏ.3ರಂದು ಮಂಡ್ಯದಲ್ಲಿ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೆರಳಿ ಸುಮಲತಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದೀಗ ಕುಮಾರಸ್ವಾಮಿ ಅವರೂ ಕೂಡ ಸುಮಲತಾ ಮನೆಗೆ ತೆರಳಿ ಬೆಂಬಲ ಕೋರಿದ್ದಾರೆ. ಈ ಬೆಳವಣಿಗೆಗಳಿಂದ ಜೆಡಿಎಸ್‌ ಜೊತೆಗಿನ ಹಗೆತನದ ರಾಜಕಾರಣದಿಂದ ಸುಮಲತಾ ದೂರ ಸರಿದಿರುವಂತೆ ಕಂಡುಬರುತ್ತಿದ್ದಾರೆ.

ನೆಂಟಸ್ತಿಕೆ ರಾಜಕಾರಣದಿಂದ ದೂರ:

ಅಂಬರೀಶ್‌ ಕಾಂಗ್ರೆಸ್‌ ಪಕ್ಷದಲ್ಲಿ ಸಂಸದರು, ಶಾಸಕರು, ಸಚಿವರಾಗಿದ್ದರೂ ಜೆಡಿಎಸ್‌ ಜೊತೆ ಹೊಂದಾಣಿಕೆ ರಾಜಕಾರಣ ನಡೆಸಿಕೊಂಡೇ ಮುಂದುವರೆದಿದ್ದರು. ಎಲ್ಲಾ ಶಾಸಕರೊಂದಿಗೆ ಅವರು ಉತ್ತಮ ಬಾಂಧವ್ಯ, ವಿಶ್ವಾಸವನ್ನು ಹೊಂದಿದ್ದರು. ಆದರೆ, ಸುಮಲತಾ ರಾಜಕೀಯ ಪ್ರವೇಶವೇ ಜೆಡಿಎಸ್‌ ಜೊತೆಗೆ ದ್ವೇಷದಿಂದ ಶುರುವಾಯಿತು. 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜೆಡಿಎಸ್‌ನವರ ಎಲ್ಲಾ ಟೀಕೆಗಳಿಗೆ ಅಷ್ಟೇ ಚುರುಕಾಗಿ ತಿರುಗೇಟುಗಳನ್ನು ನೀಡುತ್ತಾ ಮುನ್ನಡೆದರು. ಸಂಸದೆಯಾಗಿ ಆಯ್ಕೆಯಾದ ನಂತರವೂ ಸ್ಥಳೀಯ ಜೆಡಿಎಸ್‌ ನಾಯಕರು ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಅವರೊಂದಿಗೆ ಸಹಕರಿಸಲಿಲ್ಲ. ಕೆಆರ್‌ಎಸ್‌ ಸುರಕ್ಷತೆ, ಗಣಿಗಾರಿಕೆ ವಿಚಾರವಾಗಿ ಜೆಡಿಎಸ್‌ನವರ ವಿರೋಧ ಕಟ್ಟಿಕೊಂಡು ಪ್ರಬಲ ದನಿ ಎತ್ತಿದರು.

ಜೆಡಿಎಸ್‌ ಅಧಃಪತನಕ್ಕೆ ಕೊಡುಗೆ:

ಬಿಜೆಪಿ ಹೈಕಮಾಂಡ್‌ ಮಟ್ಟದಲ್ಲಿ ಉತ್ತಮವಾಗಿ ವಿಶ್ವಾಸವನ್ನು ಹೊಂದಿದ್ದ ಸುಮಲತಾ, ಒಮ್ಮೆಯೂ ಜೆಡಿಎಸ್‌ನವರೊಂದಿಗೆ ನೆಂಟಸ್ತಿಕೆ ರಾಜಕಾರಣಕ್ಕೆ ಮುಂದಾಗಲೇ ಇಲ್ಲ. ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲೂ ಸುಮಲತಾ ಬಿಜೆಪಿಗೆ ಬೆಂಬಲ ಘೋಷಿಸಿ, ಕಮಲ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ನಡೆಸಿದ್ದರು. ಜಿಲ್ಲೆಯೊಳಗೆ ಜೆಡಿಎಸ್‌ ಅಧಃಪತನವಾಗುವುದಕ್ಕೆ ಸಂಸದೆ ಸುಮಲತಾ ಅವರ ಕೊಡುಗೆಯೂ ಸಾಕಷ್ಟಿತ್ತು ಎನ್ನುವುದು ಎಲ್ಲರಿಗೂ ತಿಳಿದಿರುವ ಬಹಿರಂಗ ಸತ್ಯ.

ಸಂಸದೆ ಸುಮಲತಾ ರಾಜಕೀಯ ಪ್ರಬುದ್ಧತೆ, ತೀಕ್ಷ್ಣ ಮಾತುಗಾರಿಕೆ, ಟೀಕೆಗಳಿಗೆ ಅಷ್ಟೇ ಕಠೋರವಾಗಿ ಬರುತ್ತಿದ್ದ ಪ್ರತಿಕ್ರಿಯೆ ಇವೆಲ್ಲವೂ ಜೆಡಿಎಸ್‌ನವರಿಗೆ ನಡುಕ ಹುಟ್ಟಿಸಿದ್ದವು. ಸುಮಲತಾ ವಿಚಾರವಾಗಿ ಮಾತನಾಡುವುದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿಯವರೇ ಒಮ್ಮೊಮ್ಮೆ ಅವರು ದೊಡ್ಡವರು.. ಅವರ ಬಗ್ಗೆ ಮಾತನಾಡುವುದಿಲ್ಲ ಎಂದು ನುಣುಚಿಕೊಳ್ಳುತ್ತಿದ್ದರು. ಸುಮಲತಾ ಅವರನ್ನು ಕುಮಾರಸ್ವಾಮಿ ಈಗ ಅಕ್ಕ ಎಂದು ಸಂಬೋಧಿಸುತ್ತಿದ್ದರೆ, ಸುಮಲತಾ ವಿರುದ್ಧ ಹಿಂದೆ ಕೆಂಡಕಾರುತ್ತಿದ್ದ ಜಿಲ್ಲೆಯೊಳಗಿನ ಕೆಲವು ಜೆಡಿಎಸ್‌ ನಾಯಕರು ಈಗ ತುಟಿಬಿಚ್ಚದೆ ಮೌನಕ್ಕೆ ಶರಣಾಗಿದ್ದಾರೆ.

ರಾಜಕೀಯ ಸ್ಥಾನ-ಮಾನ ಭರವಸೆ:

ಪ್ರಸ್ತುತ ಸಂಸದೆ ಸುಮಲತಾ ಅನುಸರಿಸುತ್ತಿರುವ ನಡೆ, ರಾಜಕೀಯ ಸೂಕ್ಷ್ಮತೆ, ಪರಿಸ್ಥಿತಿ-ಸನ್ನಿವೇಶನಗಳ ಅವಲೋಕನ ಮಾಡುತ್ತಿರುವ ರೀತಿಯನ್ನು ಗಮನಿಸಿದಾಗ ಬಿಜೆಪಿ-ಜೆಡಿಎಸ್‌ ಮೈತ್ರಿ ರಾಜಕಾರಣಕ್ಕೆ ಬಹುತೇಕ ಒಪ್ಪಿಗೆ ಸೂಚಿಸಿದಂತಿದೆ. ಲೋಕಸಭೆ ಚುನಾವಣೆಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಬೆಂಬಲಕ್ಕೆ ನಿಲ್ಲುವುದು ಬಹುತೇಕ ನಿಚ್ಚಳವೆಂಬಂತೆ ಕಾಣುತ್ತಿದೆ. ಇದರ ಜೊತೆಗೆ ಬಿಜೆಪಿ ಹೈಕಮಾಂಡ್‌ ಮುಂದಿನ ದಿನಗಳಲ್ಲಿ ಸೂಕ್ತ ರಾಜಕೀಯ ಸ್ಥಾನ-ಮಾನ ನೀಡುವ ಭರವಸೆ ನೀಡಿರುವುದರಿಂದ ಜೆಡಿಎಸ್‌ ಮತ್ತು ಕುಮಾರಸ್ವಾಮಿ ವಿಚಾರದಲ್ಲಿ ಸುಮಲತಾ ಸೌಮ್ಯನಡೆ ಅನುಸರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.