ಸಾರಾಂಶ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ನಡೆಸಿರುವ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿರುವ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಶ್ರೀಗಳು, ಏ.2ರಂದು ಧಾರವಾಡದಲ್ಲಿ ಭಕ್ತರ ಸಭೆ ಕರೆದಿದ್ದಾರೆ.
ಹುಬ್ಬಳ್ಳಿ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ನಡೆಸಿರುವ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿರುವ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಶ್ರೀಗಳು, ಏ.2ರಂದು ಧಾರವಾಡದಲ್ಲಿ ಭಕ್ತರ ಸಭೆ ಕರೆದಿದ್ದೇನೆ. ಅಲ್ಲಿ ಚರ್ಚಿಸಿ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲಾಗುವುದು. ಜೋಶಿ ಅವರನ್ನು ಸೋಲಿಸುವುದು ನಮಗೆ ಅನಿವಾರ್ಯ ಎಂದರು.
ಆದರೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರನ್ನು ಬದಲಿಸುವಂತೆ ಸ್ವಾಮೀಜಿ ಅವರು ಬಿಜೆಗೆ ಮಾ.31ರ ಗಡುವು ನೀಡಿದ್ದರು. ಭಾನುವಾರಕ್ಕೆ ಗಡುವು ಮುಗಿದಿರುವುದು, ಜತೆಗೆ ಅಭ್ಯರ್ಥಿಯನ್ನು ಬದಲಿಸುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಮುಖಂಡರು ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದರು.
ಜೋಶಿ ದಮನಕಾರಿ ಆಡಳಿತದಿಂದ ಸಮಾಜವನ್ನು ತುಳಿಯುತ್ತಿದ್ದಾರೆ. ಅವರನ್ನು ಬದಲಿಸಲೇಬೇಕು ಎಂದು ಪಟ್ಟು ಹಿಡಿದಿದ್ದೇವೆ. ಆದರೆ ಜೋಶಿ ಬಿಜೆಪಿಗೆ ಅನಿವಾರ್ಯವಾದರೆ, ನಮಗೆ ಅವರನ್ನು ಸೋಲಿಸುವುದು ಅನಿವಾರ್ಯ ಎಂದರು.
ಬಹುಸಂಖ್ಯಾತ ನಾಯಕರು ಸಂಪರ್ಕಿಸಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಒತ್ತಡ ತಂದಿದ್ದಾರೆ. ಬೆದರಿಕೆಯನ್ನೂ ಹಾಕಿರುವುದುಂಟು. ಆದರೆ ನಾನು ಯಾವ ಬೆದರಿಕೆಗೂ ಜಗ್ಗಲ್ಲ. ನನಗೆ ಬೆದರಿಕೆ ಹಾಕಿದವರಿಗೆ, ಮನವೊಲಿಸಲು ಬಂದವರಿಗೆ ಇದನ್ನೇ ತಿಳಿಸಿದ್ದೇನೆ ಎಂದರು.
ನಾಳೆ ಭಕ್ತರ ಸಭೆ: ಸರ್ವಧರ್ಮ ಭಾವೈಕ್ಯತಾ ಮಠದ ಸ್ವಾಮೀಜಿಯಾಗಿರುವ ತಮಗೆ ಎಲ್ಲ ಧರ್ಮ, ಜಾತಿ ಒಂದೇ. ಕೇವಲ ಲಿಂಗಾಯತರಷ್ಟೇ ಅಲ್ಲ, ಎಲ್ಲ ನೊಂದ ಸಮಾಜದ ಧ್ವನಿಯಾಗಿ ಸಾಂತ್ವನ ಹೇಳಬೇಕಿದೆ. ಈ ದೃಷ್ಟಿಯಿಂದ ಜೋಶಿ ವಿರುದ್ಧದ ಹೋರಾಟದಲ್ಲಿ ಪ್ರಾಣ ಹೋದರೂ ಮುಂದಿಟ್ಟ ಹೆಜ್ಜೆ ಹಿಂದಿಡಲ್ಲ ಎಂದರು.
ವಿವಿಧ ಮಠಾಧಿಪತಿಗಳ ಅಭಿಪ್ರಾಯ ಕೇಳಿದ್ದೇನೆ. ಇದೀಗ ಭಕ್ತರ ಅಭಿಪ್ರಾಯ ಕೇಳುವುದು ಬಾಕಿಯಿದೆ. ಅದಕ್ಕಾಗಿ ಧಾರವಾಡದಲ್ಲಿ ಏ.2ರಂದು ಬೆಳಗ್ಗೆ 10.30ಕ್ಕೆ ಸಭೆ ಕರೆಯಲಾಗಿದೆ. ಭಕ್ತರ ಅಭಿಪ್ರಾಯ ಸಂಗ್ರಹಿಸಿದ ಮೇಲೆ ಮುಂದಿನ ತೀರ್ಮಾನಿಸಲಾಗುವುದು ಎಂದರು.
ಸ್ವಾಮೀಜಿಗಳಿಗೆ ಉಂಟಾದ ತಪ್ಪುಗ್ರಹಿಕೆ ಬಗ್ಗೆ ಚರ್ಚಿಸಲು ಸಿದ್ಧ ಎಂಬ ಜೋಶಿ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ, 10 ವರ್ಷ ಕಾಲಾವಕಾಶ ನೀಡಿದ್ದೇನೆ. ಅವರು ಪರಿವರ್ತನೆಗೊಂಡಿಲ್ಲ. ಈಗ ಚುನಾವಣೆ ಹಿನ್ನೆಲೆಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಚುನಾವಣೆ ನಂತರ ಜೋಶಿ ನಮ್ಮನ್ನು ಹತ್ತಿಕ್ಕುತ್ತಾರೆ ಎಂಬ ಪ್ರಜ್ಞೆಯೂ ನಮಗಿದೆ ಎಂದು ತಿಳಿಸಿದರು.
ಈ ಹಿಂದೆ ಸಮಾಜದ ಕೆಲಸವೊಂದನ್ನು ಮಾಡಿಕೊಡುವಂತೆ ಕೇಳಿದಾಗ, ಇದೇ ಜೋಶಿ ನಿಮಗೆ ಲಿಂಗಾಯತ ನಾಯಕರಿಲ್ಲವೇ ಎಂದು ಕೇಳಿದ್ದರು. ಅಂದಿನಿಂದ ಈವರೆಗೂ ಅವರ ಜತೆ ಮಾತನಾಡುವುದನ್ನೇ ಬಿಟ್ಟಿದ್ದೇನೆ ಎಂದರು.
ಸಚಿವ ಜೋಶಿಗೆ ಪಕ್ಷ ಹೈಕಮಾಂಡ್, ನಮಗೆ ಮತದಾರರು ಹೈಕಮಾಂಡ್. ನಾನು ಅವರನ್ನು ಸೋಲಿಸುತ್ತೇನೆಂದರೆ ತಪ್ಪಾಗುತ್ತದೆ. ಆದರೆ, ಮತದಾರರು ಮನಸ್ಸು ಮಾಡಿದರೆ ಏನು ಬೇಕಾದರೂ ಆಗಬಹುದು ಎಂಬುದನ್ನು ಜೋಶಿ ನೆನಪಿಸಿಕೊಳ್ಳಬೇಕಿದೆ. ಬೆದರಿಕೆ ಕರೆಗಳು ಅತಿರೇಕವಾದರೆ ದೂರು ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜೋಶಿ ಎಂದರೆ ಪಕ್ಷ, ಪಕ್ಷ ಎಂದರೆ ಜೋಶಿ ಎನ್ನುವಂತಾಗಿದೆ. ಹೀಗಾಗಿ, ಅವರ ಪರ ಶಾಸಕರು ಮಾತನಾಡುತ್ತಿದ್ದಾರೆ. ಶಾಸಕರನ್ನು ಬೆಳೆಸಿದ್ದು ಜೋಶಿ ಅಲ್ಲ, ಕ್ಷೇತ್ರದ ಮತದಾರರು. ಇದನ್ನು ಶಾಸಕರು ಮನವರಿಕೆ ಮಾಡಿಕೊಳ್ಳಬೇಕು ಎಂದು ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಹಾಗೂ ಎಂ.ಆರ್. ಪಾಟೀಲ ಅವರನ್ನು ಶ್ರೀಗಳು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.
ನಾನೊಬ್ಬನೇ ಸಾಕು: ಶ್ರೀ
ನನ್ನ ಪರ ಮಾತನಾಡಿದ, ಬೆಂಬಲಿಸಿದ ಮಠಾಧೀಶರನ್ನು ಬೆದರಿಸುವ, ಒತ್ತಡ ಹಾಕುವ ಕೆಲಸ ಮಾಡಲಾಗುತ್ತಿದೆ. ಧಾರವಾಡ ಮುರುಘಾಮಠದ ಶ್ರೀಗಳೇ ಇದನ್ನು ಸ್ಪಷ್ಟಪಡಿಸಿದಂತಾಗಿದೆ. ಹೀಗಾಗಿ, ಈ ಹೋರಾಟದಲ್ಲಿ ಯಾವ ಮಠಾಧೀಶರನ್ನೂ ಕರೆಯಲ್ಲ. ಇವರಿಗೆ ನಾನೊಬ್ಬನೇ ಸಾಕು. ಅವರಾಗಿಯೇ ಬರುವುದಾದರೆ ಬರಲಿ. ಬೇಡ ಎನ್ನಲ್ಲ. ಆದರೆ ನಾನಾಗಿಯೇ ಯಾವ ಮಠಾಧೀಶರನ್ನು ಕರೆಯಲ್ಲ ಎಂದು ಸ್ಪಷ್ಟಪಡಿಸಿದರು. ಯಾರೇ ನನ್ನ ವಿರುದ್ಧ ಮಾತನಾಡಿದರೂ ಎಲ್ಲ ಸ್ವಾಮೀಜಿಗಳು ಮಾನಸಿಕವಾಗಿ ನನ್ನೊಂದಿಗೆ ಇದ್ದಾರೆ ಎಂದರು.